
ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲ್ಲೂಕುಗಳಲ್ಲಿ ಮಳೆಯ ಪ್ರಮಾಣ ಅಧಿಕವಾಗಿರುವ ಕಾರಣಕ್ಕೆ ಪ್ರಸಕ್ತ ವರ್ಷ ಮೆಕ್ಕೆಜೋಳ ಬಿತ್ತನೆಗೆ ಬೆಳೆಗಾರರು ಉತ್ಸಾಹ ತೋರದ ಕಾರಣ 4 ಸಾವಿರ ಎಕರೆಗೂ ಹೆಚ್ಚಿನ ಮೆಕ್ಕೆಜೋಳ ಕ್ಷೇತ್ರ ತೋಟಗಾರಿಕೆ ಹಾಗೂ ಇನ್ನಿತರ ಬೆಳೆಗಳ ಪ್ರದೇಶವಾಗಿ ಮಾರ್ಪಾಟಾಗಿದೆ.
ಜಿಲ್ಲೆಯಲ್ಲಿ ಅಡಿಕೆ ಹಾಗೂ ಶುಂಠಿಗೆ ಪೂರಕ ವಾತಾವರಣ ಇರುವುದರಿಂದ ತೋಟಗಾರಿಕೆ ಬೆಳೆಗೆ ಹೆಚ್ಚು ಒತ್ತು ನೀಡಲಾಗುತ್ತಿದೆ. ಭತ್ತ, ಮೆಕ್ಕೆಜೋಳಕ್ಕೆ ಸರಿಯಾಗಿ ಬೆಲೆ ಸಿಗದೇ ಇರುವುದರಿಂದ ಹತಾಶರಾಗಿರುವ ಬಹುಪಾಲು ರೈತರು ಇತ್ತೀಚಿನ ವರ್ಷಗಳಲ್ಲಿ ಇವುಗಳೆಡಗಿನ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ಪ್ರಸ್ತುತ ವರ್ಷ ಮಳೆಗಾಲ ವ್ಯಾಪಕವಾಗಿದ್ದ ಕಾರಣ ಮೆಕ್ಕೆಜೋಳ ಬೆಳೆಗಾರರು ಕೂಡ ಈ ಬೆಳೆಯಿಂದ ಹಿಂದೆ ಸರಿದಿದ್ದಾರೆ. ಕೆಲವು ಬೆಳೆಗಾರರು ಅಡಿಕೆಯನ್ನು ನಾಟಿ ಮಾಡಿದರೆ, ಬಹುತೇಕ ಬೆಳೆಗಾರರು ಶುಂಠಿ ನಾಟಿಗೆ ಭೂಮಿಯನ್ನು ಬಾಡಿಗೆ ಆಧಾರದಲ್ಲಿ ನೀಡಿದ್ದಾರೆ.
‘ಶಿರಸಿಯ ಬನವಾಸಿ ಹೋಬಳಿಯಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಶೇಕಡ 65ರಷ್ಟು ಮೆಕ್ಕೆಜೋಳ ಕ್ಷೇತ್ರ ಇಳಿಕೆಯಾಗಿದೆ. ಸಿದ್ದಾಪುರದಲ್ಲಂತೂ ಒಬ್ಬ ರೈತ ಕೂಡ ಈ ಬೆಳೆ ಬೆಳೆಸಲು ಆಸಕ್ತಿ ತೋರಿಲ್ಲ. ಅತಿ ಹೆಚ್ಚು ಮೆಕ್ಕೆಜೋಳ ಬೆಳೆಯುವ ಹಳಿಯಾಳ ತಾಲ್ಲೂಕೊಂದರಲ್ಲೇ 1,200 ಹೆ. ಪ್ರದೇಶ ಇಳಿಕೆಯಾಗಿದ್ದು, ಬಹುತೇಕ ಬೆಳೆಗಾರರು ಕಬ್ಬು ಬೆಳೆಯತ್ತ ಆಕರ್ಷಿತರಾಗಿದ್ದಾರೆ. ಮುಂಡಗೋಡದಲ್ಲಿ ಅಂದಾಜು 200 ಹೆ. ಇಳಿದಿದೆ. ದಾಂಡೇಲಿಯಲ್ಲಿ ಮಾತ್ರ ಕಳೆದ ಸಾಲಿನಷ್ಟೇ ಕ್ಷೇತ್ರ ಉಳಿದುಕೊಂಡಿದೆ’ ಎಂಬುದು ಕೃಷಿ ಇಲಾಖೆ ಅಧಿಕಾರಿಗಳ ಮಾಹಿತಿ.
‘ಮಲೆನಾಡು ವಾತಾವರಣ ಮೆಕ್ಕೆಜೋಳ ಬೆಳೆಗೆ ಪೂರಕವಾಗಿದ್ದರೂ ಕಳೆದ ಐದು ವರ್ಷಕ್ಕೆ ಹೋಲಿಸಿದರೆ ಇಳುವರಿಯಲ್ಲಿ ಕುಸಿತ ಉಂಟಾಗಿದೆ. ವಿವಿಧ ರೋಗವೂ ಕಾಡುತ್ತಿದ್ದು, ವಾರಕ್ಕೆ 3 ಬಾರಿ ಔಷಧ ಸಿಂಪಡಣೆ ಮಾಡಬೇಕು. ಇದು ಕೂಡ ರೈತರಿಗೆ ಹೊರೆಯಾಗಿ ಪರಿಣಮಿಸುತ್ತಿದೆ. ಇದೆಲ್ಲದರ ನಡುವೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಕಾಡು ಪ್ರಾಣಿಗಳ ಹಾವಳಿಯಿಂದ ಬೆಳೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ನಡುವೆ ಮಳೆಯೂ ಹೆಚ್ಚಾದ ಕಾರಣ ಮೆಕ್ಕೆಜೋಳ ಬಿತ್ತನೆಯ ಆಸಕ್ತಿ ಕಡಿಮೆ ಆಗಿದೆ’ ಎಂದು ದಾಸನಕೊಪ್ಪದ ರೈತ ವೀರಭದ್ರ ಗೌಡ ತಿಳಿಸಿದರು.
ಮೆಕ್ಕೆಜೋಳ ಕಡಿಮೆ ನೀರು ಬೇಡುವ ಬೆಳೆ. ಹೀಗಾಗಿ ಮಳೆ ಹೆಚ್ಚಿರುವ ಕಾರಣ ರೈತರು ಈ ಬೆಳೆಯಿಂದ ಹಿಂದೆ ಸರಿದಿದ್ದಾರೆಎಚ್.ನಟರಾಜ ಉಪನಿರ್ದೇಶಕ ಕೃಷಿ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.