ADVERTISEMENT

ಹೋಂ ಮೇಡ್‌ ಸಂಕ್ರಾಂತಿಕಾಳಿಗೆ ಬಹುಬೇಡಿಕೆ: ನಾಲ್ಕು ಕ್ವಿಂಟಲ್ ಮಾರಾಟ

ಎಂ.ಜಿ.ನಾಯ್ಕ
Published 14 ಜನವರಿ 2024, 8:34 IST
Last Updated 14 ಜನವರಿ 2024, 8:34 IST
<div class="paragraphs"><p>ಕುಮಟಾ ಪಟ್ಟಣದ ಗೃಹಿಣಿ ಜ್ಯೋತಿ ಹೆಗಡೆ ಅವರು ಮನೆಯಲ್ಲಿ ಸಂಕ್ರಾಂತಿ ಕಾಳು ತಯಾರಿಸುವುದು.</p></div>

ಕುಮಟಾ ಪಟ್ಟಣದ ಗೃಹಿಣಿ ಜ್ಯೋತಿ ಹೆಗಡೆ ಅವರು ಮನೆಯಲ್ಲಿ ಸಂಕ್ರಾಂತಿ ಕಾಳು ತಯಾರಿಸುವುದು.

   

ಕುಮಟಾ: ಮಕರ ಸಂಕ್ರಮಣದಂದು ಮನೆಯಲ್ಲಿ ಕೈಯಿಂದ ತಯಾರಿಸುವ ಕುಮಟಾ ಹೋಂ ಮೇಡ್ ಸಂಕ್ರಾಂತಿ ಕಾಳಿಗೆ ಬೇರೆ ಬೇರೆ ತಾಲ್ಲೂಕುಗಳು ಹಾಗೂ ಹುಬ್ಬಳ್ಳಿಯಿಂದ ಅಪಾರ ಬೇಡಿಕೆ ಬರುತ್ತಿದೆ.

ಪಟ್ಟಣದ ಮೂರ್ನಾಲ್ಕು ಮನೆಯವರು ಮಕರ ಸಂಕ್ರಮಣಕ್ಕಾಗಿ ಕೈಯಿಂದಲೇ  ತಯಾರಿಸುವ ಸಂಕ್ರಾಂತಿ ಕಾಳನ್ನು ಮನೆಗೇ ಬಂದು ಸಾಲು ಹಚ್ಚಿ ಒಯ್ಯುವ ಗ್ರಾಹಕರಿದ್ದಾರೆ.  ಗೋಡಂಬಿಯ ಸಂಕ್ರಾಂತಿ ಕಾಳಿಗೆ ಕಿಲೋಗೆ ₹1ಸಾವಿರ ಆದರೆ, ಶೇಂಗಾ ಸಂಕ್ರಾಂತಿ ಕಾಳಿಗೆ ಕಿಲೋಗೆ ₹500 ಹಾಗೂ ಎಳ್ಳು, ಜೀರಿಗೆ ಸಂಕ್ರಾಂತಿ ಕಾಳಿಗೆ ₹400ರಂತೆ ಮಾರಾಟ ಮಾಡಲಾಗುತ್ತದೆ. ಈ ವರ್ಷ ಪಟ್ಟಣದ ಗೃಹಿಣಿ ಜ್ಯೋತಿ ಹೆಗಡೆ ಸುಮಾರು ನಾಲ್ಕು ಕ್ವಿಂಟಲ್ ಸಂಕ್ರಾಂತಿ ಕಾಳನ್ನು ತಯಾರಿಸಿ ಮಾರಾಟ ಮಾಡಿದ್ದಾರೆ.

ADVERTISEMENT

ಸಂಕ್ರಾಂತಿ ಕಾಳು ಮಾಡೋದು ಹೇಗೆ?

ಕುಮಟಾ ಹೋಂ ಮೇಡ್ ಸಂಕ್ರಾಂತಿ ಕಾಳಿನ ಕುರಿತು ಮಾಹಿತಿ ನೀಡಿದ ಅವರು, ` ಸುಮಾರು 5 ಕೆ.ಜಿ ಸಕ್ಕರೆಗೆ ಪಾಕ ಬರುವಷ್ಟು ಪ್ರಮಾಣದ ನೀರು ಹಾಕಿ ಕಾಯಿಸಿ ಅದಕ್ಕೆ ನಾಲ್ಕಾರು ಚಮಚೆ ಹಾಲು ಮತ್ತು ಮಜ್ಜಿಗೆಯನ್ನು ಹಾಕಿ ಕುದಿಸಬೇಕು. ಕುದಿಯುವಾಗ ಮೇಲೆ ಬರುವ ಜಿಡ್ಡನ್ನು ತೆಗೆದು ಹಾಕಿದರೆ ಸಂಕ್ರಾಂತಿ ಕಾಳಿಗೆ ಶುಭ್ರ ಹೊಳಪು ಬರುತ್ತದೆ. ಅದಕ್ಕೆ ಎಳ್ಳು ಅಥವಾ ಗೋಡಂಬಿ ಅಥವಾ ಶೇಂಗಾ ಬೀಜ ಅಥವಾ ಜೀರಿಗೆ ಹಾಕಿ ನಿರ್ದಿಷ್ಟ ಹದದಲ್ಲಿ ಕಲಕುತ್ತಾ ಹೋದರೆ ಸಕ್ಕರೆ ಪಾಕ ಗಟ್ಟಿಯಾಗುತ್ತದೆ. ಚಳಿ ವಾತಾವರಣದಲ್ಲಿ ಇದನ್ನು ತಯಾರಿಸಿದರೆ ಸಂಕ್ರಾಂತಿ ಕಾಳಿನ ಸುತ್ತ ಮುಳ್ಳುಗಳು ಎದ್ದು ಕಲಾತ್ಮಕವಾಗಿ ಕಾಣುತ್ತದೆ' ಎಂದರು.

‘ಚಳಿಯಲ್ಲಿ ಸಂಕ್ರಾಂತಿ ಕಾಳು ಚೆನ್ನಾಗಿ ಬರಲು ಬೆಳಗಿನ ಜಾವ ಎರಡು ಗಂಟೆಗೆಲ್ಲ ಎದ್ದು ಸ್ನಾನ, ಪೂಜೆ ಮುಗಿಸಿ ತಯಾರಿ ಆರಂಭಿಸುತ್ತೇನೆ. ಈ ಸಲ ಒಂದು ವಾರ ಮೊದಲು ಮೋಡದ ವಾತಾವರಣ ಇದ್ದುದರಿಂದ ನಿರೀಕ್ಷೆಯ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗದೆ ₹30 ಸಾವಿರ ಹಾನಿ ಉಂಟಾಯಿತು. ಚಳಿ ವಾತಾವರಣ ಇದ್ದರೆ ಮಕರ ಸಂಕ್ರಮಣ ಸಂದರ್ಭದಲ್ಲಿ ಸಂಕ್ರಾಂತಿ ಕಾಳು ತಯಾರಿಸಿ ಮಾರಿ ಮಹಿಳೆಯರು ಲಾಭ ಗಳಿಸಬಹುದು’ ಎಂದರು.

ಪೇಟೆಯಲ್ಲಿ ಸಿಗುವ ಸಂಕ್ರಾಂತಿ ಕಾಳಿಗಿಂತ ಇದು ಹೆಚ್ಚು ಆರೋಗ್ಯಕರ ಮತ್ತು ರುಚಿಕರ
ಜ್ಯೋತಿ ಹೆಗಡೆಸಂಕ್ರಾಂತಿ ಕಾಳು ತಯಾರಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.