ADVERTISEMENT

‘ಸ್ಮಾರಕವಾಗಿಸಿ ಜೈಲು ಕಟ್ಟಡ ಸಂರಕ್ಷಿಸಿ’

ಸಾಣಿಕಟ್ಟಾದಲ್ಲಿರುವ ಐತಿಹಾಸಿಕ ಕಟ್ಟಡದ ಮಹತ್ವ ಸಾರಲು ಜಿಲ್ಲಾಡಳಿತಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2020, 11:51 IST
Last Updated 1 ಡಿಸೆಂಬರ್ 2020, 11:51 IST
ಗೋಕರ್ಣ ಸಮೀಪದ ಸಾಣಿಕಟ್ಟಾದಲ್ಲಿರುವ ಪುರಾತನ ಜೈಲು ಕಟ್ಟಡದ ಪ್ರದೇಶವನ್ನು ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮತ್ತು ಮಂಡಳಿಯ ಸದಸ್ಯರು ಪರಿಶೀಲಿಸಿದರು
ಗೋಕರ್ಣ ಸಮೀಪದ ಸಾಣಿಕಟ್ಟಾದಲ್ಲಿರುವ ಪುರಾತನ ಜೈಲು ಕಟ್ಟಡದ ಪ್ರದೇಶವನ್ನು ಜೀವ ವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮತ್ತು ಮಂಡಳಿಯ ಸದಸ್ಯರು ಪರಿಶೀಲಿಸಿದರು   

ಕಾರವಾರ: ಗೋಕರ್ಣ ಸಮೀಪದ ಸಾಣಿಕಟ್ಟಾದಲ್ಲಿರುವ, ಸ್ವಾತಂತ್ರ್ಯ ಪೂರ್ವದ ಜೈಲು ಕಟ್ಟಡವನ್ನು ಸ್ಮಾರಕವನ್ನಾಗಿಸಬೇಕು. ಅದರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಜೀವವೈವಿಧ್ಯ ಮಂಡಳಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

‘ಬ್ರಿಟಿಷರ ವಿರುದ್ಧ ನಡೆದ ಉಪ್ಪಿನ ಸತ್ಯಾಗ್ರಹದ ಸಂದರ್ಭ ಮತ್ತು ನಂತರ ಸಾಣಿಕಟ್ಟಾ ಪ್ರದೇಶದಲ್ಲಿ ನಡೆದ ಕರ ನಿರಾಕರಣೆ ಚಳವಳಿಯಲ್ಲಿ ಭಾಗವಹಿಸಿದ್ದ ಸತ್ಯಾಗ್ರಹಿಗಳನ್ನು ಬ್ರಿಟಿಷರು ಬಂಧಿಸಿ ಈ ಜೈಲಿನಲ್ಲಿಟ್ಟಿದ್ದರು. ಉಪ್ಪು ತಯಾರಿಸಿ, ಮಾರಾಟ ಮಾಡಲು ಹೊರಟ ರೈತರು ಕರ ನೀಡಲು ನಿರಾಕರಿಸಿದ್ದರು. ಆದ್ದರಿಂದ ಅವರನ್ನು ಬಂಧನದಲ್ಲಿ ಇಡಲಾಗಿತ್ತು. 90 ವರ್ಷಗಳ ನಂತರವೂ ಜೈಲು ಕಟ್ಟಡವು ಸರ್ಕಾರದ ಸುಪರ್ದಿಯಲ್ಲೇ ಇದೆ. ಈ ಕಟ್ಟಡವನ್ನು ಸ್ವಾತಂತ್ರ್ಯ ಚಳವಳಿಯ ಸ್ಮಾರಕವಾಗಿ ಪರಿಗಣಿಸಬೇಕು’ ಎಂದು ಅವರು ಹೇಳಿದ್ದಾರೆ.

ಜೈಲು ಕಟ್ಟಡವು ರಾಷ್ಟ್ರೀಯ ಹೆದ್ದಾರಿ 66ರ ಸಮೀಪದಲ್ಲಿ, ಗೋಕರ್ಣ ರಸ್ತೆಯ ಅಂಚಿನಲ್ಲೇ ಇದೆ. ಸಾಣಿಕಟ್ಟಾ ಉಪ್ಪು ಸಂಸ್ಕರಣಾ ಘಟಕದ ಸಮೀಪದಲ್ಲಿದೆ. ಇದರ ರಕ್ಷಣೆಯಿಂದ ಯುವ ಜನಾಂಗಕ್ಕೆ ಸ್ವಾತಂತ್ರ್ಯ ಚಳವಳಿಯ ಪರಿಚಯ ಮಾಡಿಕೊಡಲು ಸಾಧ್ಯವಾಗುತ್ತದೆ. ಅಲ್ಲದೇ ಗೋಕರ್ಣಕ್ಕೆ ಬರುವ ಅಪಾರ ಪ್ರವಾಸಿಗರು ಇದನ್ನು ನೋಡಲು ಅವಕಾಶವಾಗುತ್ತದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

ಸಾಣಿಕಟ್ಟಾದಲ್ಲಿ ಅಧಿಕಾರಿಗಳು, ರೈತರ ಜೊತೆ ನಡೆಸಿದ ಸಭೆಯಲ್ಲಿ, ‘ಸ್ಥಳೀಯ ನೈಸರ್ಗಿಕ, ಸಾವಯವ ಶುದ್ಧ ಉಪ್ಪನ್ನು ಉಪರೂಪದ ಪಾರಂಪರಿಕ ಕೃಷಿ ವೈವಿಧ್ಯ ಪಟ್ಟಿಗೆ ಸೇರಿಸಬೇಕು. ಕೇಂದ್ರ ಸರ್ಕಾರದ ಜಾಗತಿಕ ಗುರುತು (ಜಿ.ಐ) ಎಂದು ಗುರುತಿಸಲು ಕೃಷಿ ಮತ್ತು ಸಣ್ಣ ಕೈಗಾರಿಕಾ ಇಲಾಖೆ ಮೂಲಕ ಶಿಫಾರಸು ಮಾಡಬೇಕು’ ಎಂದು ನಿರ್ಣಯ ಕೈಗೊಳ್ಳಲಾಯಿತು. ಬಗ್ಗೆ ಕುಮಟಾ ತಾಲ್ಲೂಕು ಪಂಚಾಯಿತಿ, ಗ್ರಾಮ ಪಂಚಾಯಿತಿಯ ಜೀವವೈವಿಧ್ಯ ಸಮಿತಿಗಳು ಸದ್ಯದಲ್ಲೇ ನಿರ್ಣಯ ಕೈಗೊಳ್ಳಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಉಪ್ಪಿನ ಸತ್ಯಾಗ್ರಹ ವನ:

ಸಾಣಿಕಟ್ಟಾದಲ್ಲಿ ರಸ್ತೆ ಮೇಲ್ಭಾಗದಲ್ಲಿರುವ 50 ಎಕರೆ ಖಾಲಿ ಗುಡ್ಡದಲ್ಲಿ ‘ಉಪ್ಪಿನ ಸತ್ಯಾಗ್ರಹ ವನ’ ನಿರ್ಮಿಸಬಹುದು. ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆಯ ಹೊನ್ನಾವರ (ಅರಣ್ಯ) ವಿಭಾಗದ ಅಧಿಕಾರಿಗಳಿಗೆ ಅಶೀಸರ ಸಲಹೆ ನೀಡಿದ್ದಾರೆ.

‘ತದಡಿ, ಸಾಣಿಕಟ್ಟಾ ಪ್ರದೇಶದ ಹಿನ್ನೀರು ಹಾಗೂ ಅಳಿವೆಗಳಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಕಾಂಡ್ಲಾವನ ಪ್ರದೇಶವು ಸಮೃದ್ಧ ಮೀನು ವೈವಿಧ್ಯದಿಂದ ತುಂಬಿದೆ. ಸಾವಿರಾರು ಮೀನುಗಾರರ ಬದುಕಿಗೆ ಆಧಾರವಾಗಿದೆ’ ಎಂದು ಜೀವವೈವಿಧ್ಯ ಮಂಡಳಿ ತಜ್ಞ ಸದಸ್ಯ ಡಾ.ಪ್ರಕಾಶ ಮೇಸ್ತ ಅವರು ಇದೇವೇಳೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.