ADVERTISEMENT

ಇಬ್ಬನಿಗೆ ಕರಗಿದ ಹೂವಿನಗೊಂಚಲು: ಮಾವು ಬೆಳೆಗಾರರಿಗೆ ಇಳುವರಿ ಕಡಿಮೆಯಾಗುವ ಆತಂಕ

​ಶಾಂತೇಶ ಬೆನಕನಕೊಪ್ಪ
Published 21 ಫೆಬ್ರುವರಿ 2026, 8:24 IST
Last Updated 21 ಫೆಬ್ರುವರಿ 2026, 8:24 IST
ಮುಂಡಗೋಡ ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ ರಸ್ತೆಯಲ್ಲಿನ ಮಾವಿನ ತೋಟದಲ್ಲಿ ಹೂವುಗಳು ಸುಟ್ಟಂತಾಗಿ ಕಾಯಿ ಬಿಡುವ ಪ್ರಮಾಣ ಕಡಿಮೆಯಾಗಿರುವುದು
ಮುಂಡಗೋಡ ತಾಲ್ಲೂಕಿನ ಟಿಬೆಟಿಯನ್‌ ಕ್ಯಾಂಪ್‌ ರಸ್ತೆಯಲ್ಲಿನ ಮಾವಿನ ತೋಟದಲ್ಲಿ ಹೂವುಗಳು ಸುಟ್ಟಂತಾಗಿ ಕಾಯಿ ಬಿಡುವ ಪ್ರಮಾಣ ಕಡಿಮೆಯಾಗಿರುವುದು   

ಮುಂಡಗೋಡ: ಬಂಗಾರ ಬಣ್ಣ ಸೂಸುವ ಹೂವುಗಳಿಂದ ಕಂಗೊಳಿಸುತ್ತಿದ್ದ, ಮಾವಿನ ಮರಗಳಿಗೆ ಇಬ್ಬನಿ ಶಾಪವಾಗಿ ಕಾಡಿದೆ. ಮೈದುಂಬಿಕೊಂಡಿದ್ದ ಹೂವುಗಳು ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡಿದ್ದಲ್ಲದೇ, ಬಾಡಿದ ಹೂವುಗಳ ಕೊನೆಯಲ್ಲಿ, ಸಮಾಧಾನಕರ ಎಂಬಂತೆ, ಅಲ್ಲೊಂದು, ಇಲ್ಲೊಂದು ಕಾಯಿ ಬಿಟ್ಟಿದೆ.

ವರ್ಷದ ಅಂತ್ಯದವರೆಗೂ ಕಾಡಿದ ಮಳೆಯಿಂದ ಹೂವು ಬಿಡುವುದು ತಡವಾಗಿರುವುದು ಒಂದೆಡೆಯಾದರೇ, ಬಿಟ್ಟ ಹೂವಿಗೆ ಇಬ್ಬನಿ ಮುತ್ತಿಕ್ಕುತ್ತ, ಕಾಯಿ ಬಿಡುವುದನ್ನೇ ಹಾಳು ಮಾಡಿದೆ. ಇದರಿಂದ, ಬಹುತೇಕ ಮಾವಿನ ಮರಗಳಲ್ಲಿ ಕಪ್ಪಾಗಿರುವ ಹೂವಿನ ತುದಿಯಲ್ಲಿ ಒಂದೋ, ಎರಡೋ ಕಾಯಿಗಳು ಕಾಣಲು ಸಿಗುತ್ತಿವೆ. ಒಂದು ವರ್ಷ ಹೆಚ್ಚು, ಮಗದೊಂದು ವರ್ಷ ಕಡಿಮೆ ಇಳುವರಿ ನೀಡುವ ಮಾವಿಗೆ, ಹವಾಮಾನ ವೈಪರೀತ್ಯ ವಿಪರೀತವಾಗಿ ಕಾಡಿದೆ. ನಿರೀಕ್ಷೆಗಿಂತ ಕಡಿಮೆಯಾಗಿ ಮಾವು ಇಳುವರಿ ನೀಡಲಿದೆ ಎಂದು ರೈತರು ಹೇಳುತ್ತಾರೆ.

ʼಕಳೆದ ವರ್ಷಕ್ಕೆ ಹೋಲಿಸಿದರೇ, ಈ ವರ್ಷ ಮಾವು ಕಾಯಿ ಬಿಡುವ ಪ್ರಮಾಣ ಕಡಿಮೆಯಿದೆ. ಕೆಲವು ದಿನಗಳ ಹಿಂದೆ ಬಹುತೇಕ ಮಾವಿನ ಗಿಡಗಳು ಹೂವುಗಳಿಂದ ಮೈದುಂಬಿಕೊಂಡಿದ್ದವು. ನಸುಕಿನ ಇಬ್ಬನಿ, ಶಿವರಾತ್ರಿ ಮುಗಿದರೂ ಮುಗಿಯದ ಮೂಡಣ ಗಾಳಿಯ ಪರಿಣಾಮದಿಂದ, ಬಿಟ್ಟ ಹೂವು ಬಾಡಿದೆ. ಇದರಿಂದ, ಮಾವಿನಕಾಯಿ ಬಿಡುವ ಹೂವುಗಳ ಸಂಖ್ಯೆ ಕ್ಷೀಣಿಸಿದೆʼ ಎಂದು ಮಾವು ಬೆಳೆಗಾರ ಶಿವಕುಮಾರ ಪಾಟೀಲ ಹೇಳಿದರು.

ADVERTISEMENT

ʼಹವಾಮಾನ ಏರಿಳಿತದಿಂದ ಮಾವಿನ ಹೂವುಗಳು ಕರಗಿದಂತಾಗಿವೆ. ಅಂಟಿನ ಇಬ್ಬನಿಯು ಇದಕ್ಕೆ ಕಾರಣವಾಗಿದ್ದು, ಮಾವು ಬೆಳೆ ಹಾನಿಯ ಕುರಿತು ಸಂಬಂಧಿಸಿದ ಅಧಿಕಾರಿಗಳು, ಭೇಟಿ ನೀಡಿ ಹಾನಿಯ ಅಂದಾಜು ಪರಿಶೀಲಿಸಬೇಕು. ಸಾಮಾನ್ಯವಾಗಿ, ಬಿಟ್ಟ ಹೂವುಗಳು ಪೂರ್ತಿ ಪ್ರಮಾಣದಲ್ಲಿ ಕಾಯಿ ಬಿಡುವುದಿಲ್ಲ. ಶೇ 25ರಿಂದ30ರಷ್ಟು ಉದುರುತ್ತವೆ. ಆದರೇ, ಈ ಸಲ ಶೇ 10ರಷ್ಟು ಸಹ ಕಾಯಿ ಹಿಡಿಯುವ ಪ್ರಮಾಣ ಇಲ್ಲದಿರುವುದನ್ನು ಕಾಣಬಹುದಾಗಿದೆ.

‘ಮಾವಿಗೆ ಈಗಾಗಲೇ ವಿಮೆ ಮಾಡಿಸಿದ್ದು, ರೈತರಿಗೆ ಅದರ ಪ್ರಯೋಜನ ಸಿಗುವಂತಾಗಬೇಕು. ಮಾವು ಬೆಳೆ ರೈತರ ಆದಾಯ ಹೆಚ್ಚಿಸುವಲ್ಲಿ ವರ್ಷದಿಂದ ವರ್ಷಕ್ಕೆ ಹಿಂದೆ ಬೀಳುತ್ತಿದೆʼ ಎಂದು ಬೆಳೆಗಾರ ಶಿವಜ್ಯೋತಿ ಹುದ್ಲಮನಿ ಹೇಳಿದರು.

ʼಕಳೆದ ನಾಲ್ಕೈದು ವರ್ಷಗಳಿಂದ ಮಾವಿನ ತೋಟಗಳು ಕಡಿಮೆಯಾಗುತ್ತ, ಅವುಗಳ ಜಾಗದಲ್ಲಿ ಅಡಿಕೆ ಸಸಿಗಳು ಸ್ಥಾನ ಪಡೆದುಕೊಳ್ಳುತ್ತಿವೆ. ಅಂತದರಲ್ಲಿ, ಮಾವು ಉಳಿಸಿಕೊಂಡು ಪೋಷಿಸುತ್ತಿರುವ ರೈತರಿಗೆ, ಹವಾಮಾನ ವೈಪರೀತ್ಯ, ಮಾವಿನ ಸಹವಾಸವೇ ಬೇಡ ಎನ್ನುವಂತೆ ಮಾಡುತ್ತಿದೆ. ಹವಾಮಾನ ಆಧಾರಿತ ಬೆಳೆ ಎಂದು ಸಮರ್ಪಕ ಪರಿಹಾರವೂ ಸಿಗುವುದಿಲ್ಲʼ ಎಂದು ರೈತ ಪರುಶುರಾಮ ರಾಣಿಗೇರ ಹೇಳಿದರು.

‘ಕಳೆದ ಕೆಲ ವರ್ಷಗಳಿಂದ ಅಡಿಕೆ ಬೆಳೆಯುವ ರೈತರು ಹೆಚ್ಚಾಗಿದ್ದರಿಂದ, ಸ್ವಲ್ಪ ಪ್ರಮಾಣದಲ್ಲಿ ಮಾವು ಪ್ರದೇಶ ಕಡಿಮೆಯಾಗಿದೆ. ಇಬ್ಬನಿಯಿಂದ ಸ್ವಲ್ಪ ಮಟ್ಟಿಗೆ ಹಾನಿಯಾಗಿರಬಹುದು. ಸಕಾಲದಲ್ಲಿ ರಾಸಾಯನಿಕ ಸಿಂಪರಣೆ ಮಾಡಲು ತಿಳಿಸಲಾಗಿತ್ತು. ಸಮರ್ಪಕವಾಗಿ ಸಿಂಪರಣೆ ಮಾಡದವರು ಹಾಗೂ ಬೇರೆಯವರಿಗೆ ತೋಟ ನಿರ್ವಹಣೆ ಮಾಡಲು ನೀಡಿದ್ದರಿಂದ ಇಂತಹ ಸಮಸ್ಯೆ ಉದ್ಭವಿಸಿದೆ. ಮಾವಿಗೂ ವಿಮೆ ಸೌಲಭ್ಯ ಇದ್ದು, ಹವಾಮಾನ ಆಧಾರಿತದ ಮೇಲೆ ವಿಮೆ ಪರಿಹಾರ ನಿರ್ಧರಿತವಾಗುತ್ತದೆʼ ಎಂದು ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೃಷ್ಣ ಕುಳ್ಳೂರ ಹೇಳಿದರು.

ಮಾವು ಬೆಳೆಗಾರರಿಗೆ ಇಬ್ಬನಿಯು ಕಹಿಯಾಗಿ ಕಾಡಿದಂತಾಗಿದೆ. ರಾಸಾಯನಿಕ ಸಿಂಪರಣೆ ಮಾಡಿದರೂ ಇಬ್ಬನಿಯ ಮುಂದೆ ಸಿಂಪರಣೆಯ ಸಾಮರ್ಥ್ಯ ಉಳಿಯಲಿಲ್ಲ
ಶಿವಕುಮಾರ ಪಾಟೀಲ ಮಾವು ಬೆಳೆಗಾರ
ತಾಲ್ಲೂಕಿನಲ್ಲಿ 545 ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು ಇಬ್ಬನಿ ಬಿದ್ದಿದ್ದರಿಂದ ಸ್ವಲ್ಪಮಟ್ಟಿಗೆ ಹಾನಿ ಸಂಭವಿಸಿದೆ
ಕೃಷ್ಣ ಕುಳ್ಳೂರ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.