ADVERTISEMENT

ಭಟ್ಕಳ: ರಂಗೇರಿದ ರಂಜಾನ್‌ ಮಾರುಕಟ್ಟೆ

ಮೋಹನ ನಾಯ್ಕ
Published 30 ಮಾರ್ಚ್ 2025, 6:23 IST
Last Updated 30 ಮಾರ್ಚ್ 2025, 6:23 IST
ಭಟ್ಕಳದ ರಂಜಾನ್‌ ಮಾರುಕಟ್ಟೆಯಲ್ಲಿ ಜನರು ಖರೀದಿಯಲ್ಲಿ ನಿರತರಾಗಿರುವುದು
ಭಟ್ಕಳದ ರಂಜಾನ್‌ ಮಾರುಕಟ್ಟೆಯಲ್ಲಿ ಜನರು ಖರೀದಿಯಲ್ಲಿ ನಿರತರಾಗಿರುವುದು   

ಭಟ್ಕಳ: ಮುಸ್ಲೀಂ ಧರ್ಮೀಯರ ಪಾಲಿನ ಪವಿತ್ರ ಮಾಸವಾಗಿರುವ ರಂಜಾನ್ ಮುಕ್ತಾಯ ಹಂತದಲ್ಲಿದ್ದು, ಪಟ್ಟಣದ ಮಾರುಕಟ್ಟೆಯು ಖರೀದಿ ಭರಾಟೆಯೊಂದಿಗೆ ಕಳೆಗಟ್ಟಿದೆ.

ರಂಜಾನ್ ಮಾಸ ಕೊನೆಗೊಳ್ಳಲು ಒಂದು ದಿನ ಮಾತ್ರ ಬಾಕಿ ಇದ್ದು, ಭಾನುವಾರ ರಾತ್ರಿ ಚಂದ್ರ ದರ್ಶನವಾದರೆ ಸೋಮವಾರ ಈದ್–ಉಲ್–ಫಿತ್ರ್ ಆಚರಣೆಗೆ ಭಟ್ಕಳದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

ಕಳೆದ ಒಂದು ತಿಂಗಳಿನಿಂದ ಉಪವಾಸ ವೃತ್ತ ಆಚರಿಸುತ್ತಿದ್ದ ಮಸ್ಲಿಂ ಧರ್ಮೀಯರು 31ನೇ ದಿನದ ಹಬ್ಬದ ಆಚರಣೆಗೆ ಖರೀದಿಯಲ್ಲಿ ನಿರತರಾಗಿದ್ದಾರೆ. ರಂಜಾನ್ ಮಾಸದಲ್ಲಿ ಪಟ್ಟಣದಲ್ಲಿ ತೆರೆದುಕೊಳ್ಳುವ ‘ರಂಜಾನ್ ಮಾರುಕಟ್ಟೆ’ ರಾಜ್ಯದಲ್ಲಿಯೇ ವಿಶೇಷತೆ ಪಡೆದುಕೊಂಡಿದೆ. ವ್ಯಾಪಾರಕ್ಕಾಗಿ ರಾಜ್ಯ ಹೊರರಾಜ್ಯದ ವ್ಯಾಪಾರಿಗಳು ಇಲ್ಲಿಗೆ ಆಗಮಿಸಿದ್ದಾರೆ.

ADVERTISEMENT

‘ಸಸ್ತಾ ಮಾಲ್ ಅಚ್ಚಾ ಮಾಲ್’ (ಕಡಿಮೆ ದರಕ್ಕೆ ಗುಣಮಟ್ಟದ ವಸ್ತು) ಎಂಬ ವ್ಯಾಪಾರಿಗಳ ಕೂಗು ಮಾರುಕಟ್ಟೆಯುದ್ದಕ್ಕೂ ಮಾರ್ದನಿಸುತ್ತಿದೆ. ರಂಜಾನ್ ವೇಳೆ ಕಡಿಮೆ ಬೆಲೆಗೆ ಬಗೆಬಗೆಯ ವಸ್ತು ಸಿಗುತ್ತವೆ ಎಂಬ ಕಾರಣಕ್ಕೆ ಸ್ಥಳೀಯರಷ್ಟೆ ಅಲ್ಲದೆ ಹೊರಜಿಲ್ಲೆಗಳಿಂದಲೂ ಗ್ರಾಹಕರು ಖರೀದಿಗೆ ಮುಗಿಬೀಳುತ್ತಿದ್ದಾರೆ.

‘ಈದ್–ಉಲ್–ಫಿತ್ರ್ ಹಬ್ಬಕ್ಕೆ 15 ದಿನ ಬಾಕಿ ಇರುವಾಗಲೆ ಭಟ್ಕಳದ ಮುಖ್ಯ ಮಾರುಕಟ್ಟೆಯಲ್ಲಿ ತೆರೆದುಕೊಳ್ಳುವ ಈ ವಿಶೇಷ ಮಾರುಕಟ್ಟೆಯಲ್ಲಿ ಮುಸ್ಲೀಂ ಧರ್ಮೀಯರಿಗಿಂತ ಹಿಂದೂ ಸಮುದಾಯದ ಗ್ರಾಹಕರೇ ಅಧಿಕ ಸಂಖ್ಯೆಯಲ್ಲಿ ಖರೀದಿ ಮಾಡಿಹೋಗುತ್ತಾರೆ. ಮಧ್ಯರಾತ್ರಿ 3 ಗಂಟೆಯ ತನಕವೂ ಮಾರುಕಟ್ಟೆ ಜನಜಂಗುಳಿಯಿಂದ ತುಂಬಿರುತ್ತದೆ. ಉಭಯ ಕೋಮಿನ ಸೌಹಾರ್ದತೆಯ ಪ್ರತೀಕ ರಂಜಾನ್ ಮಾರುಕಟ್ಟೆ’ ಎಂದು ಸ್ಥಳೀಯರು ಹೇಳುತ್ತಾರೆ.

ದಿನನಿತ್ಯ ಉಪಯೋಗಿಸುವ ಗೃಹಪಯೋಗಿ ವಸ್ತುಗಳಿಂದು ಹಿಡಿದು ಬಗೆಬಗೆಯ ಬಟ್ಟೆಗಳು, ಮಕ್ಕಳ ಆಟಿಕೆ ಸಾಮಗ್ರಿಗಳು ಹಾಗೂ ತಿಂಡಿ ತಿನಿಸುಗಳು ಈ ಮಾರುಕಟ್ಟೆಯ ಆಕರ್ಷಣೀಯ ಕೇಂದ್ರವಾಗಿದೆ. ಅಂಗಡಿಕಾರರು ಈ ಬಾರಿ ರಸ್ತೆಯ ತುಂಬಾ ಬೆಳಕಿನ ವ್ಯವಸ್ಥೆ ಮಾಡಿಸಿ ಮಾರುಕಟ್ಟೆ ಕಳೆಗಟ್ಟುವಂತೆ ಮಾಡಿದ್ದಾರೆ.

ಪುರುಷ ಮಹಿಳೆಯರೆನ್ನದೆ ಗುಂಪುಗುಂಪಾಗಿ ಖರೀದಿಗೆ ಮುಗಿಬೀಳುವವರ ಮಧ್ಯೆ ಅಹಿತಕರ ಘಟನೆ ನಡೆಯದಂತೆ ಭಟ್ಕಳ ತಂಝೀಂ ವತಿಯಿಂದ ಈ ಬಾರಿ ಮಾರುಕಟ್ಟೆ ಪ್ರದೇಶದಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪೊಲೀಸರು ಕಣ್ಗಾವಲು ಇರಿಸಿದ್ದಾರೆ.

‘ಕಳೆದ ಕೆಲವು ವರ್ಷಗಳಿಗೆ ಹೊಲಿಸಿದರೇ ಈ ಬಾರಿ ರಂಜಾನ್ ಮಾರುಕಟ್ಟೆಯಲ್ಲಿ ಉತ್ತಮ ವ್ಯಾಪಾರು ವಹಿವಾಟು ನಡೆದಿದೆ’ ಎಂದು ವ್ಯಾಪಾರಿ ಇಂಶಾದ್ ಮೊಹತೆಶ್ಯಾಂ ಹೇಳಿದರು.

ಭಟ್ಕಳ ರಂಜಾನ್‌ ಮಾರುಕಟ್ಟೆಗೆ ಭಟ್ಕಳ ಉಪವಿಭಾಗಾಧಿಕಾರಿ ಕೆ.ವಿ ಕಾವ್ಯರಾಣಿ ಭೇಟಿ ನೀಡಿ ಪರಿಶೀಲನೆ ನಡೆಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.