ಪೊಲೀಸ್
(ಸಾಂದರ್ಭಿಕ ಚಿತ್ರ)
ಯಲ್ಲಾಪುರ: ತಾಲ್ಲೂಕಿನ ಕಳಚೆಯ ವ್ಯಕ್ತಿಯೊಬ್ಬರು ಮದುವೆಯಾಗುವ ಆಸೆಯಿಂದ ಮಧ್ಯವರ್ತಿಗಳಿಗೆ ₹ 6 ಲಕ್ಷ ನೀಡಿ ಮೋಸ ಹೋಗಿದ್ದಾರೆ. ಈ ಕುರಿತು ಗುರುವಾರ ಮೋಸಕ್ಕೊಳಗಾದ ಪೌರೋಹಿತ್ಯ ವೃತ್ತಿಯ ಕಳಚೆ ಕರಿಮನೆಯ ರಾಮಕೃಷ್ಣ ಅನಂತ ಭಟ್ಟ ದೂರು ದಾಖಲಿಸಿದ್ದಾರೆ.
ಕಳಚೆ ಸೂತ್ರೆಮನೆ ಲಕ್ಷ್ಮೀನಾರಾಯಣ ಭಟ್ಟ, ಸೋಂದಾ ಬಕ್ಕಳದ ನಾಗರಾಜ ಭಟ್ಟ ಹಾಗೂ ಉತ್ತರ ಪ್ರದೇಶದ ರೇಣುಕಾಕೋಟದ ಮಾಲಾ ಜಿ ತ್ರಿಪಾಠಿ ಮತ್ತು ಮಿರ್ಜಾಪುರದ ಪೂಜಾ ಮಿಶ್ರಾ ಆರೋಪಿಗಳು.
ರಾಮಕೃಷ್ಣ ಭಟ್ಟರಿಗೆ ಉತ್ತರ ಪ್ರದೇಶದಿಂದ ಕನ್ಯೆ ಕೊಡಿಸುವ ಮಾತನಾಡಿ, ಆ ಪ್ರಕಾರ, ರಾಮಕೃಷ್ಣ ಭಟ್ಟರಿಂದ ₹ 6 ಲಕ್ಷ ಪಡೆದರು. ಉತ್ತರ ಪ್ರದೇಶ ಗೋಪಾಲಪುರದ ಪೂಜಾ ಮಿಶ್ರಾ ಜೊತೆ ರಾಮಕೃಷ್ಣ ಭಟ್ಟರ ಸಂಬಂಧ ಬೆಸೆಯುವ ಸಿದ್ಧತೆ ನಡೆಸಿದರು. ಲಕ್ಷ್ಮೀನಾರಾಯಣ ಭಟ್ಟ, ನಾಗರಾಜ ಭಟ್ಟ ಹಾಗೂ ಮಾಲಾ ಜಿ ತ್ರಿಪಾಠಿ ಸೇರಿ ರಾಮಕೃಷ್ಣ ಭಟ್ಟರನ್ನು ಉತ್ತರ ಪ್ರದೇಶಕ್ಕೆ ಕರೆದೊಯ್ದರು. ಗೋಪಾಲಪುರದ ಪೂಜಾ ಮಿಶ್ರಾ ಅವರನ್ನು ಪರಿಚಯಿಸಿ ಅಲ್ಲಿಯೇ ನಿಶ್ಚಿತಾರ್ಥವನ್ನು ಮಾಡಿಸಿದರು.
ಅದಾದ ನಂತರ ಪೂಜಾ ಮಿಶ್ರಾ ಅವರು ರಾಮಕೃಷ್ಣ ಭಟ್ಟರನ್ನು ಭೇಟಿಯಾಗಲು ಕಳಚೆಗೆ ಬಂದಿದ್ದರು. ಅಗಸ್ಟ್ 17ರಂದು ಬೆಳಿಗ್ಗೆ ವಾಕಿಂಗ್ ಹೋಗೋಣ ಎಂದು ರಾಮಕೃಷ್ಣ ಭಟ್ಟರನ್ನು ಕರೆದೊಯ್ದ ಪೂಜಾ ಮಿಶ್ರಾ ಅವರು ಭಟ್ಟರನ್ನು ರಸ್ತೆ ಬದಿಗೆ ದೂಡಿ ಪರಾರಿಯಾದರು ಎಂದು ದೂರು ದಾಖಲಾಗಿದೆ.
ಆರೋಪಿ ಬಂಧನ
ಹಳಿಯಾಳ: ಇಪ್ಪತ್ತೈದು ವರ್ಷಗಳಿಂದ ತಲೆ ಮರಿಸಿಕೊಂಡಿದ್ದ ಆರೋಪಿಯನ್ನು ಹಳಿಯಾಳ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
2020 ಏಪ್ರಿಲ್12 ತಾಲ್ಲೂಕಿನ ತೇರಗಾಂವ ಗ್ರಾಮದ ಸೊಸೈಟಿಯಲ್ಲಿ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಶಿವಪುತ್ರಪ್ಪಾ ಯಾನೆ, ಅಲ್ಲಾಭಕ್ಷ ತಿಮ್ಮಪ್ಪಾ ಯಾನೆ, ತಿಪ್ಪಣ್ಣಾ ದಾಸರ, ಗಣೇಶ ಪೇಟ ಹುಬ್ಬಳ್ಳಿ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.
ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದುಕೊಂಡು ತಲೆ ಮರಿಸಿಕೊಂಡಿದ್ದನ್ನು. ಇತ್ತೀಚಿಗೆ ಆರೋಪಿ ಪತ್ತೆಗಾಗಿ ವಿಶೇಷ ತಂಡ ರಚಿಸಿ ಆಗಸ್ಟ್ 20ರಂದು ಖಚಿತ ಮಾಹಿತಿ ಮೆರೆಗೆ ಗೋವಾ ರಾಜ್ಯದ ಕೊಲ್ವಾದ ಸಾಲಸೇಟ್ ಎಂಬಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ.
ಸಿಪಿಐ ಜಯಪಾಲ ಪಾಟೀಲ ಮಾರ್ಗದರ್ಶನದಲ್ಲಿ ಪಿ.ಎಸ್ಐ ಬಸವರಾಜ ಮಬನೂರ, ಕ್ರೈಂ ಪಿ.ಎಸ್.ಐ ಕೃಷ್ಣಾ ಅರಕೇರಿ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳಾದ ಎಂ.ಎಂ. ಮುಲ್ಲಾ, ಶ್ರೀಶೈಲ್ ಜಿ.ಎಂ, ವಿನೋದ ಜಿ.ಬಿ, ಲಕ್ಷ್ಮಣ ಪೂಜಾರಿ, ರಾಘವೇಂದ್ರ ಕೇರವಾಡ, ಪ್ರೇಮಾ ಜಕನೂರ, ಉಮೇಶ ತೇಲಿ, ಹುಬ್ಬಳ್ಳಿ ಮತ್ತು ದಾಂಡೇಲಿಯ ಪೊಲೀಸ್‌ರು ಕಾರ್ಯಾಚರಣೆಯಲ್ಲಿ ಇದ್ದರು.
ಚಾಕು ಇರಿತ: ದೂರು
ಹಳಿಯಾಳ: ಪಟ್ಟಣದ ಚವ್ಹಾಣ ಪ್ಲಾಟ್ ಬಡಾವಣೆಯಲ್ಲಿ ಚಾಕು ಇರಿದು ಕೊಲೆಗೆ ಯತ್ನಿಸಿದ ಘಟನೆ ಕುರಿತು ಹಳಿಯಾಳ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.
ಆರೋಪಿ ವಸೀಂ ಆಸ್ಲಂ ಶೇಖ್ ಸ್ಥಳೀಯ ಹೊಸುರ ಗಲ್ಲಿಯ ನಿವಾಸಿ ಮುಕ್ತುಂಹುಸೇನ್ ಬುಡ್ಡೆಸಾಬ ಮುಲ್ಲಾ ಈತನ ದ್ವಿಚಕ್ರ ವಾಹನದಲ್ಲಿ ಮನೆಗೆ ಬಿಡಲು ಕೇಳಿಕೊಂಡಿದ್ದಾನೆ. ವಾಹನ ಹಿಂದೆ ಕುಳಿತ ಆರೋಪಿ ಚಾಕುವಿನಿಂದ ಮುಕ್ತುಂಹುಸೇನ್ ಮುಲ್ಲಾ ಅವರ ಹಿಂಬದಿಯ ಕುತ್ತಿಗೆಯ ಕೆಳ ಭಾಗದಲ್ಲಿ ಇರಿದು ಗಾಯಗೊಳಿಸಿದ್ದಾನೆ ಎಂದು ದೂರು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.