ADVERTISEMENT

ಸಹಕಾರ ಸಂಘದಲ್ಲಿ ಅವ್ಯವಹಾರದ ಆರೋಪ

ಜೊಯಿಡಾದ ಕ್ಷೇತ್ರಪಾಲ ಸೇವಾ ಸಹಕಾರ ಸಂಘದ ವಿರುದ್ಧ ಸದಸ್ಯರ ಆಕ್ರೋಶ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:48 IST
Last Updated 25 ಜುಲೈ 2019, 19:48 IST
ಜೊಯಿಡಾ ತಾಲ್ಲೂಕಿನ ಕುಂಬಾರವಾಡಾದಲ್ಲಿರುವ ಕ್ಷೇತ್ರಪಾಲ ಸೇವಾ ಸಹಕಾರ ಸಂಘದಲ್ಲಿ ಬೆಳೆ ಸಾಲ ಹಣವನ್ನು ನಿರ್ದಿಷ್ಠ ಠೇವಣಿ ಇಟ್ಟಿರುವ ದಾಖಲೆ ಪತ್ರ
ಜೊಯಿಡಾ ತಾಲ್ಲೂಕಿನ ಕುಂಬಾರವಾಡಾದಲ್ಲಿರುವ ಕ್ಷೇತ್ರಪಾಲ ಸೇವಾ ಸಹಕಾರ ಸಂಘದಲ್ಲಿ ಬೆಳೆ ಸಾಲ ಹಣವನ್ನು ನಿರ್ದಿಷ್ಠ ಠೇವಣಿ ಇಟ್ಟಿರುವ ದಾಖಲೆ ಪತ್ರ   

ಜೊಯಿಡಾ: ತಾಲ್ಲೂಕಿನ ಕುಂಬಾರವಾಡಾದಲ್ಲಿರುವಕ್ಷೇತ್ರಪಾಲ ಸೇವಾ ಸಹಕಾರ ಸಂಘದಲ್ಲಿ ಸದಸ್ಯರ ಬೆಳೆ ಸಾಲದ ವಿಚಾರದಲ್ಲಿ ಲಕ್ಷಾಂತರ ರೂಪಾಯಿ ಅವ್ಯವಹಾರವಾಗಿದೆ ಹಲವು ಸದಸ್ಯರು ಆರೋಪಿಸಿದ್ದಾರೆ.

ಈ ಸೇವಾ ಸಹಕಾರ ಸಂಘದಲ್ಲಿ 273 ಸದಸ್ಯರಿದ್ದಾರೆ.268 ರೈತರು 2018ರಲ್ಲಿ ಬೆಳೆ ಸಾಲ ಪಡೆದಿದ್ದರು. ಇವರಲ್ಲಿ ಬಹಳಷ್ಟು ಸದಸ್ಯರು ಪಡೆದ ಸಾಲಕ್ಕಿಂತ ಹೆಚ್ಚು ಮೊತ್ತವನ್ನು ದಾಖಲೆಯಲ್ಲಿ ತೋರಿಸಲಾಗಿದೆ. ಈ ಮೂಲಕ ಮೋಸ ಮಾಡಲಾಗಿದೆ ಎಂಬುದು ಸದಸ್ಯರ ಆಪಾದನೆಯಾಗಿದೆ.

‘ಕೆಲವರಿಗೆ ಈ ವರ್ಷ ಬೆಳೆ ಸಾಲ ನೀಡಲು ಸಾಧ್ಯವಿಲ್ಲ ಎಂದು ಕಳೆದ ವರ್ಷ ಸಂಘದವರೇತಿಳಿಸಿದ್ದರು. ಬಳಿಕ ನಮಗೆ ಸಾಲ ನೀಡಿರಲಿಲ್ಲ. ಆದರೆ, ದಾಖಲೆಯಲ್ಲಿ ಮಾತ್ರ ₹ 1 ಲಕ್ಷಕ್ಕಿಂತಲೂ ಹೆಚ್ಚು ಸಾಲ ಪಡೆದಿರುವುದಾಗಿ ನಮೂದಿಸಲಾಗಿದೆ. ಸರ್ಕಾರವು ಸಾಲಮನ್ನಾ ಹಣವನ್ನು ನಮ್ಮ ಖಾತೆಗೆ ಜಮಾ ಮಾಡಿದಾಗ ಈ ವಿಚಾರ ಗೊತ್ತಾಗಿದೆ’ ಎಂದು ಸದಸ್ಯರುಹೇಳಿದ್ದಾರೆ.

ADVERTISEMENT

‘ರೈತರಿಗೆ ತಿಳಿಸದೆ ಸಾಲ ಮಾಡುವವರು ಯಾರು? ಇದು ಅಕ್ರಮ ವ್ಯವಹಾರ ಅಲ್ಲವೇ? ಸರ್ಕಾರದಿಂದ ಬಂದ ಬೆಳೆ ಸಾಲದ ಮನ್ನಾ ಹಣವನ್ನೂ ನಮಗೆ ಕೊಡುತ್ತಿಲ್ಲ.ಟ್ರ್ಯಾಕ್ಟರ್, ಎತ್ತು, ಬಿತ್ತನೆಬೀಜ, ಗೊಬ್ಬರ ಸೇರಿದಂತೆ ಇನ್ನಿತರ ಅವಶ್ಯಕತೆಗಳಿಗಾಗಿ ನಾವು ಸಾಲ ಮಾಡಿದ್ದೇವೆ.ಅದನ್ನು ತೀರಿಸಲು ಹಣ ಸಿಕ್ಕರೆ ಅನುಕೂಲವಾಗುತ್ತಿತ್ತು. ಈ ಅವ್ಯವಹಾರದ ಬಗ್ಗೆ ತನಿಖೆಯಾಗಲಿ’ ಎಂಬುದು ಗಣಪತಿ ನಾಯ್ಕ, ನಾಗೇಶ ನಾಯಕ, ಕೃಷ್ಣಾ ನಾಗೋ ಮಿರಾಶಿ, ವಾಮನ ಬಿಕೋ ಮಿರಾಶಿ, ಕೃಷ್ಣಾ ವೇಳಿಪ, ಆಪು ಗಣೇಶ ಗಾವಡಾ, ಚಿಮಣೋ ಗಾವಡಾ, ಗಣಪತಿ ವೇಳಿಪ ಅವರ ಒತ್ತಾಯವಾಗಿದೆ.

‘ನಾನು 2018ರಲ್ಲಿ ಕೇವಲ ₹ 40 ಸಾವಿರ ಬೆಳೆಸಾಲ ಪಡೆದಿದ್ದೆ. ಆದರೆ, ನನ್ನ ಹೆಸರಿನಲ್ಲಿ ₹ 1.75 ಲಕ್ಷ ಸಾಲ ಪಡೆದ ಬಗ್ಗೆ ದಾಖಲೆಯಲ್ಲಿದೆ. ಈಗ ಸರ್ಕಾರದಿಂದ ಬಂದ ₹ 1 ಲಕ್ಷವನ್ನೂನನಗೆ ನೀಡುತ್ತಿಲ್ಲ’ ಎಂಬುದು ಸಾಲ ಪಡೆದ ಗಣಪತಿ ನಾಯ್ಕ ಅವರ ದೂರಾಗಿದೆ.

ಸಾಲಗಾರ ರೈತರಿಗೆ ಹೇಳದೆ ಹೆಚ್ಚು ಸಾಲ ಮಂಜೂರು ಮಾಡಿ ಸಂಘದ ಖಾತೆಯಲ್ಲಿ ಇಟ್ಟಿರುವುದು, ರೈತರ ಗಮನಕ್ಕೆ ತಾರದೆ ಠೇವಣಿ ಇಟ್ಟಿರುವುದು, ಸಾಲದ ಪಾಸ್ ಪುಸ್ತಕದಲ್ಲಿ ವ್ಯವಹಾರದ ಜಮಾ, ಖರ್ಚು ಬರೆಯದಿರುವುದು, ಮಾಹಿತಿಯನ್ನೂ ನೀಡಿಲ್ಲಎಂಬುದು ಸದಸ್ಯರ ಆರೋಪವಾಗಿದೆ.

‘ಆರೋಪಗಳು ಸತ್ಯಕ್ಕೆ ದೂರವಾದವು’: ‘ಕ್ಷೇತ್ರಪಾಲ ಸೇವಾ ಸಹಕಾರ ಸಂಘದ ಆಡಳಿತ, ವ್ಯವಹಾರ ಪಾರದರ್ಶಕವಾಗಿದೆ. ಅವ್ಯವಹಾರದ ಬಗ್ಗೆ ಗೊಂದಲವಿದ್ದರೆ, ಯಾವುದೇ ಮಾಹಿತಿಯನ್ನೂಆಡಳಿತಾಧಿಕಾರಿಗಳು ನೀಡಲು ಸಿದ್ಧರಿದ್ದಾರೆ. ನೂರಾರು ಜನರಿಗೆ ಈ ಸಂಘದ ವ್ಯವಹಾರದಲ್ಲಿ ಅನ್ಯಾಯವಾಗಿದೆ ಎಂದು ಹೇಳುತ್ತಿರುವುದು ಸತ್ಯಕ್ಕೆ ದೂರವಾದದ್ದು’ ಎಂದು ಸಹಕಾರ ಸಂಘದ ಅಧ್ಯಕ್ಷ ಅನಂತ ಕೃಷ್ಣಪ್ಪ ಹೆಗ್ಡೆಪ್ರತಿಕ್ರಿಯಿಸಿದ್ದಾರೆ.

‘ಈಗಾಗಲೇ ಶೇ 90ರಷ್ಟು ಸದಸ್ಯರಿಗೆ ಸಾಲ ವ್ಯವಹಾರದ ಕುರಿತು ಮಾಹಿತಿ ನೀಡಲಾಗಿದೆ. ಸಾಲ ವ್ಯವಹಾರದ ಕುರಿತು ಸಂಶಯವಿದ್ದಲ್ಲಿ ನೇರವಾಗಿ ಕಚೇರಿಗೆ ಬಂದು ದಾಖಲೆಗಳನ್ನು ಪರಿಶೀಲಿಸಬಹುದು. ಸಾಲ ಮಂಜೂರಾದತಕ್ಷಣ ರೈತರಬ್ಯಾಂಕ್ಖಾತೆಗಳಿಗೆಹಣ ಜಮಾ ಆಗಿದೆ. ಸಾಲಮನ್ನಾದಲ್ಲಿ ಯಾವುದೇ ಅವ್ಯವಹಾರ ಆಗಿಲ್ಲ’ ಎನುತ್ತಾರೆ ಸಹಕಾರ ಸಂಘದ ಆಡಳಿತಾಧಿಕಾರಿರಾಘವೇಂದ್ರ ನಾಯ್ಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.