ADVERTISEMENT

ನಿವೇಶನ ಗೊಂದಲ: ಸರಿಪಡಿಸಲು ಒತ್ತಾಯ

ಚಿಪಗಿ ನಿವಾಸಿಗಳಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 2 ಜುಲೈ 2019, 13:24 IST
Last Updated 2 ಜುಲೈ 2019, 13:24 IST
ಶಿರಸಿ ಹೊರವಲಯದ ಚಿಪಗಿ ನಾರಾಯಣಗುರು ನಗರದ ನಿವಾಸಿಗಳು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು
ಶಿರಸಿ ಹೊರವಲಯದ ಚಿಪಗಿ ನಾರಾಯಣಗುರು ನಗರದ ನಿವಾಸಿಗಳು ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು   

ಶಿರಸಿ: ಅರಣ್ಯ ಮತ್ತು ಕಂದಾಯ ಇಲಾಖೆ ನಡುವಿನ ಗೊಂದಲದಿಂದ ಚಿಪಗಿಯಲ್ಲಿರುವ ಸರ್ವೆಸಂಖ್ಯೆ 53ರ ಆಸ್ತಿಗಳ ವ್ಯವಹಾರ
ಸ್ಥಗಿತಗೊಂಡಿದ್ದು, ತ್ವರಿತವಾಗಿ ಇದನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿ, ನಿವೇಶನಗಳ ಮಾಲೀಕರು ಮಂಗಳವಾರ ಇಲ್ಲಿ ಉಪವಿಭಾಗಾಧಿಕಾರಿ ಡಾ. ಈಶ್ವರ ಉಳ್ಳಾಗಡ್ಡಿ ಅವರಿಗೆ ಮನವಿ ಸಲ್ಲಿಸಿದರು.

ಕಂದಾಯ ಇಲಾಖೆಯು ಸರ್ವೆ ಸಂಖ್ಯೆ 53ರ ಜಾಗ ಡಿನೋಟಿಫೈ ಆಗಿದೆ ಎಂದರೆ, ಅರಣ್ಯ ಇಲಾಖೆಯ ಇದು ಮೀಸಲು ಅರಣ್ಯವೆಂದು ಪ್ರತಿಪಾದಿಸುತ್ತಿದೆ. 2018ರ ನವೆಂಬರ್ 14ರಂದು ಈ ಸರ್ವೆ ಸಂಖ್ಯೆ ನಿವೇಶನದ ಮಾಲೀಕರಿಗೆ ನೋಟಿಸ್ ಬಂದಿದ್ದು, ಸಮಸ್ಯೆ ಇತ್ಯರ್ಥವಾಗುವವರೆಗೆ ನಿವೇಶನಕ್ಕೆ ಸಂಬಂಧಿಸಿದ ಯಾವುದೇ ವಹಿವಾಟು ನಡೆಸುವಂತಿಲ್ಲ ಎಂದು ತಿಳಿಸಲಾಗಿದೆ. ಅಲ್ಲಿಂದ ಈವರೆಗೂ ಸಮಸ್ಯೆ ಹೆಚ್ಚುತ್ತಿದ್ದು, ಆಸ್ತಿ ಮಾಲೀಕರು ಹೈರಾಣಾಗಿದ್ದಾರೆ ಎಂದು ಪ್ರಮುಖ ಮಹೇಶ ಶೆಟ್ಟಿ ಹೇಳಿದರು.

‘ಇಲಾಖೆಯಲ್ಲಿರುವ ದಾಖಲೆ ಕಳೆದು ಹೋಗಿದ್ದರೆ, ಅದಕ್ಕೆ ಜಾಗದ ಮಾಲೀಕರನ್ನು ಹೊಣೆಗಾರರನ್ನಾಗಿಸುವುದು ನ್ಯಾಯವಲ್ಲ. ಇಲ್ಲಿ 497 ನಿವೇಶನಗಳಿವೆ. ಅವುಗಳಲ್ಲಿ 380ಕ್ಕೂ ಹೆಚ್ಚು ಆಸ್ತಿ ಮಾಲೀಕರು ಸಮಸ್ಯೆಗೆ ಒಳಗಾಗಿದ್ದಾರೆ. 1972ರಲ್ಲಿಯೇ ಇದು ಡಿನೋಟಿಫೈ ಆಗಿದೆ. ಸರ್ಕಾರವೇ ಇಲ್ಲಿ ನಿವೇಶನಗಳನ್ನು ಹಂಚಿಕೆ ಮಾಡಿದೆ. ತಹಶೀಲ್ದಾರರೇ ಮಂಜೂರು ನೀಡಿದ್ದಾರೆ. ಎನ್‌ಒಸಿ ಕೂಡ ನಮ್ಮ ಬಳಿ ಇದೆ. ಹಲವಾರು ನಿವೇಶನಗಳು ಮಾರಾಟವಾಗಿದ್ದು, ಮೂಲ ಮಾಲೀಕರು ಸಹ ಇಲ್ಲಿಲ್ಲ. ಇಷ್ಟೆಲ್ಲ ಆದ ನಂತರವೂ ತಹಶೀಲ್ದಾರ್ ಮತ್ತು ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಕಚೇರಿಯಿಂದ ನಮಗೆ ನೋಟಿಸ್ ಜಾರಿ ಮಾಡಿ ಆಸ್ತಿ ವಹಿವಾಟು ಮಾಡದಂತೆ ಮಾಡಿದ್ದು ಸರಿಯಲ್ಲ’ ಎಂದು ಹೇಳಿದರು.

ADVERTISEMENT

ಸಾಲ ಮಾಡಿ ಜಾಗ ಖರೀದಿಸಿದವರಿಗೆ, ಮನೆ ಕಟ್ಟಲು ಪರವಾನಗಿ ಸಿಗುತ್ತಿಲ್ಲ. ಇಲಾಖೆಯೇ ನಿವೇಶನ ಮಾಡಿಕೊಟ್ಟ ಜಾಗವನ್ನು ಪರಭಾರೆ ಮಾಡುವಂತಿಲ್ಲ. ಪಂಚಾಯ್ತಿಯಿಂದ ವಾಸ್ತವ್ಯ ಪ್ರಮಾಣಪತ್ರ ಸಿಗದ ಕಾರಣ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಪಡೆಯಲು ಆಗುತ್ತಿಲ್ಲ. ಹಾಗಾಗಿ ಸರ್ವೆ ಸಂಖ್ಯೆ 53ರ ವ್ಯವಹಾರಗಳನ್ನು ಸ್ಥಗಿತಗೊಳಿಸಲು ನೀಡಿದ ಆದೇಶ ಹಿಂಪಡೆಯಬೇಕು. ಜೊತೆಗೆ ಇಲಾಖೆಗಳ ಮಟ್ಟದಲ್ಲಿ ಈ ದಾಖಲೆಗಳನ್ನು ಪಡೆಯಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯ ಎಂದು ಎಚ್ಚರಿಸಿದರು. ಸ್ಥಳೀಯರಾದ ಸದಾನಂದ ಗೌಡರ್, ಮುಕ್ತೇಶ ಗೌಡ, ಬಾಬು ಹಂದ್ರಾಳ, ಜ್ಯೋತಿ ಗೌಡ, ಚಂದ್ರಶೇಖರ ಭಟ್ಟ, ಸುಬ್ರಾಯ ಶೆಟ್ಟಿ, ದತ್ತಾತ್ರೇಯ ಶರ್ಮ, ಹನುಮಂತ ನಾಯ್ಕ ಇದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.