ADVERTISEMENT

ಹೆಚ್ಚುತ್ತಿರುವ ಕೋವಿಡ್: ಜಾತ್ರೆ, ಉತ್ಸವ ನಿರ್ಬಂಧಕ್ಕೆ ಸಚಿವರ ಸೂಚನೆ

​ಪ್ರಜಾವಾಣಿ ವಾರ್ತೆ
Published 18 ಜನವರಿ 2022, 12:35 IST
Last Updated 18 ಜನವರಿ 2022, 12:35 IST
ಕೋವಿಡ್ ನಿಯಂತ್ರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಂಗಳವಾರ ಹಮ್ಮಿಕೊಂಡಿದ್ದ ಪರಿಶೀಲನಾ ಸಭೆಯಲ್ಲಿ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್.ಪಿ ಡಾ.ಸುಮನ್ ಪೆನ್ನೇಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಇದ್ದಾರೆ.
ಕೋವಿಡ್ ನಿಯಂತ್ರಣದ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ವಿಡಿಯೊ ಕಾನ್ಫರೆನ್ಸ್ ಮೂಲಕ ಮಂಗಳವಾರ ಹಮ್ಮಿಕೊಂಡಿದ್ದ ಪರಿಶೀಲನಾ ಸಭೆಯಲ್ಲಿ ವಿವಿಧ ಅಧಿಕಾರಿಗಳು ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಎಸ್.ಪಿ ಡಾ.ಸುಮನ್ ಪೆನ್ನೇಕರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶರದ್ ನಾಯಕ ಇದ್ದಾರೆ.   

ಕಾರವಾರ: ‘ಜಿಲ್ಲೆಯಲ್ಲಿ ಕೋವಿಡ್ ಸೋಂಕಿನ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದ್ದರಿಂದ ಜಾತ್ರಾ ಮಹೋತ್ಸವಗಳಿಗೆ ಮುಲಾಜಿಲ್ಲದೇ ನಿರ್ಬಂಧ ವಿಧಿಸಬೇಕು. ಅವುಗಳನ್ನು ಮುಂದೂಡಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದಾರೆ.

ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಮಂಗಳವಾರ ವಿಡಿಯೊ ಕಾನ್ಫರೆನ್ಸ್ ಮೂಲಕ ಕೋವಿಡ್ ನಿಯಂತ್ರಣದ ಬಗ್ಗೆ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

‘ಕೆಲವು ಜಾತ್ರೆಗಳನ್ನು ನಿಗದಿತ ದಿನಗಳಂದೇ ಮಾಡಬೇಕು, ಮುಂದೂಡಲು ಸಾಧ್ಯವೇ ಇಲ್ಲ ಎಂದಾದರೆ ಮಾತ್ರ ಅವುಗಳಿಗೆ 10ರಿಂದ 20 ಜನ ಸೇರಲು ಅವಕಾಶ ಕೊಡಬಹುದು. ಕೇವಲ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಲು ಅನುಮತಿ ನೀಡಬಹುದು. ಪರಿಸ್ಥಿತಿಯ ಬಗ್ಗೆ ಧಾರ್ಮಿಕ ಮುಖಂಡರು ಮತ್ತು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟು, ಹೆಚ್ಚು ಜನಸೇರದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದು ಸೂಚನೆ ನೀಡಿದರು.

ADVERTISEMENT

‘ಕೋವಿಡ್‌ನಿಂದ ವಿವಿಧ ವ್ಯಾಪಾರ, ಉದ್ಯಮಗಳಿಗೆ ತೊಂದರೆಯಾಗಿದೆ. ಈ ಬಗ್ಗೆ ಇನ್ನೊಂದೆರಡು ದಿನಗಳಲ್ಲಿ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಲಾಗುವುದು. ಅಲ್ಲಿ ಯಾವ ರೀತಿ ನಿರ್ಣಯ ತೆಗೆದುಕೊಳ್ಳಲಾಗುತ್ತದೆ ಎಂದು ಕಾದು ನೋಡಬೇಕಿದೆ. ಸರ್ಕಾರದ ಮಾರ್ಗಸೂಚಿಗಳು ಉಲ್ಲಂಘನೆಯಾಗದಂತೆ ನೋಡಿಕೊಳ್ಳುವುದು ಕೂಡ ಅವಶ್ಯ’ ಎಂದು ಹೇಳಿದರು.

‘ಜಿಲ್ಲೆಯು ಲಸಿಕೆ ನೀಡುವುದರಲ್ಲಿ ಈಗಾಗಲೇ ಉತ್ತಮ ಸಾಧನೆ ಮಾಡಿದೆ. ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕು. ಭಟ್ಕಳದ ಸಾರ್ವಜನಿಕರ ಮನ ಪರಿವರ್ತಿಸಿ ಲಸಿಕೆ ಪಡೆಯುವ ಪ್ರಮಾಣ ವೃದ್ಧಿಸಿ. ಕೋವಿಡ್‌ನ ಬಗ್ಗೆ ಎಚ್ಚರಿಕೆಯಿಂದ ಇರಬೇಕೇ ವಿನಾ ಭಯ ಪಡುವುದು ಬೇಡಎಂಬುದನ್ನೂ ತಿಳಿಸಿ ಹೇಳಿ’‌ ಎಂದು ಸೂಚಿಸಿದರು.

‘ಕ್ರೀಡಾಕೂಟಗಳೂ ಸದ್ಯಕ್ಕೆ ಬೇಡ’:

‘ಕ್ರಿಕೆಟ್, ಕಬಡ್ಡಿಯಂತಹ ಕ್ರೀಡಾಕೂಟಗಳ ಆಯೋಜನೆ ಸದ್ಯಕ್ಕೆ ಬೇಡ. ಮುಖಗವಸು ಧರಿಸುವಂತೆ ಜನರಲ್ಲಿ ತಿಳಿವಳಿಕೆ ನೀಡಿ. ಜ.25ರ ನಂತರ ಕೋವಿಡ್ ಪ್ರಕರಣಗಳು ಇಳಿಕೆ ಕಾಣಬಹುದು ಎಂದು ತಜ್ಞರು ಹೇಳುತ್ತಿದ್ದಾರೆ. ಆದರೂ ನಮ್ಮ ಎಚ್ಚರಿಕೆಯಲ್ಲಿ ಇದ್ದುಕೊಂಡು, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲೇಬೇಕಾಗಿದೆ’ ಎಂದು ಹೇಳಿದರು.

ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸಚಿವರಿಗೆ ಮಾಹಿತಿ ನೀಡಿ, ‘ಐವರಿಗಿಂತ ಹೆಚ್ಚು ಮಕ್ಕಳಿಗೆ ಕೋವಿಡ್ ದೃಢಪಟ್ಟಿರುವ ಶಾಲೆಗಳಿಗೆ ಒಂದು ವಾರ ರಜೆ ಘೋಷಿಸಲಾಗಿದೆ. ನಿರ್ಬಂಧಿತ ಪ್ರದೇಶ ಮಾಡಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ. ಅಂಗನವಾಡಿಗಳಲ್ಲಿ ಅಗತ್ಯವಾದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅಂಗನವಾಡಿ ಮತ್ತು ವಸತಿ ನಿಲಯಗಳನ್ನು ಬಂದ್ ಮಾಡಿಲ್ಲ. ಯಾವುದೇ ಸಮಸ್ಯೆಗಳಿಲ್ಲ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಪೆನ್ನೆಕರ್, ಕಾರವಾರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ. ಗಜಾನನ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶರದ್ ನಾಯಕ ಇದ್ದರು.

ಶೇ 8.89 ದಾಖಲು:

ಉತ್ತರ ಕನ್ನಡದಲ್ಲಿ ಕೋವಿಡ್ ದೃಢಪಡುವ ಪ್ರಮಾಣವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸೋಮವಾರ ಶೇ 5.33ರಷ್ಟು ಇದ್ದಿದ್ದು,ಮಂಗಳವಾರ ಶೇ 8.89ಕ್ಕೆ ಹೆಚ್ಚಳವಾಗಿದೆ. ಸೋಂಕು ವೇಗವಾಗಿ ಏರಿಕೆ ಕಾಣುತ್ತಿರುವುದು ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.