ADVERTISEMENT

ಒತ್ತಡ ಹೇರಿದ್ದರೆ ತನಿಖೆಯಾಗಲಿ: ಸಚಿವ ಶಿವರಾಮ ಹೆಬ್ಬಾರ

ಬಿ.ಜೆ.ಪಿ.ಗೆ ಮತ ಹಾಕಿಸಲು ಪಿ.ಡಿ.ಒ.ಗಳ ಮೂಲಕ ಒತ್ತಾಯದ ಆರೋಪ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2021, 11:50 IST
Last Updated 6 ಡಿಸೆಂಬರ್ 2021, 11:50 IST
ಶಿವರಾಮ ಹೆಬ್ಬಾರ
ಶಿವರಾಮ ಹೆಬ್ಬಾರ   

ಕಾರವಾರ: ‘ವಿಧಾನಪರಿಷತ್ ಚುನಾವಣೆಯಲ್ಲಿ ಬಿ.ಜೆ.ಪಿ.ಗೇ ಮತ ಹಾಕುವಂತೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಮೂಲಕ ಸದಸ್ಯರ ಮೇಲೆ ಒತ್ತಡ ಹೇರಲಾಗುತ್ತಿದ್ದರೆ ಚುನಾವಣಾ ಆಯೋಗದಿಂದ ತನಿಖೆಯಾಗಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ‍ಪಕ್ಷದ ಮುಖಂಡರು ಈ ರೀತಿ ಆರೋಪ ಮಾಡುತ್ತಿದ್ದಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘ಬಿ.ಜೆ.ಪಿ.ಗೆ ವಿಧಾನಪರಿಷತ್ ಚುನಾವಣೆಯಲ್ಲಿ ಸೋಲಿನ ಭಯದಿಂದ ತಾಲ್ಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆ ಮಾಡಿಲ್ಲ’ ಎಂಬ ಆರೋಪಕ್ಕೂ ತಿರುಗೇಟು ನೀಡಿ, ‘ಸೋಲಿನ ಭಯ ಇದ್ದಿದ್ದರೆ ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಮಾಡುತ್ತಿರಲಿಲ್ಲ. ಈ ಹಿಂದೆ ತಮಗೆ ಬೇಕಾದ ರೀತಿಯಲ್ಲಿ ಅವೈಜ್ಞಾನಿಕವಾಗಿ ಕ್ಷೇತ್ರ ವಿಂಗಡಣೆ ಮಾಡಿದ್ದರು. ಈ ವಿಚಾರವು ಹೈಕೋರ್ಟ್, ಚುನಾವಣಾ ಆಯೋಗ, ಮುಖ್ಯಮಂತ್ರಿ ಮುಂದೆಯೂ ಇತ್ತು. ಅದನ್ನು ಸರಿಪಡಿಸಲಾಗುತ್ತಿದ್ದು, ಇದರಿಂದಾಗಿ ತಡವಾಗಿದೆ’ ಎಂದರು.

ADVERTISEMENT

‘ಜಿಲ್ಲೆಯಾದ್ಯಂತ ಬಿ.ಜೆ.ಪಿ.ಗೆ ನಿರೀಕ್ಷೆಗೂ ಮೀರಿದ ಉತ್ತಮ ವಾತಾವರಣವಿದೆ. ನಾವು ಚುನಾವಣೆ ಬಂದಾಗ ಮಾತ್ರ ಸಿದ್ಧತೆ ಮಾಡಿಲ್ಲ. ಈ ಹಿಂದಿನಿಂದಲೂ ಜಾಗೃತರಾಗಿ ಕೆಲಸ ಮಾಡಿದ್ದೇವೆ. ಹಾಗಾಗಿ ಮೊದಲನೇ ಪ್ರಾಶಸ್ತ್ಯದಲ್ಲೇ ಗಣಪತಿ ಉಳ್ವೇಕರ್ ಗೆಲುವು ಖಂಡಿತ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಂಡಿತ ಇಲ್ಲ. ಸಂಪುಟದ ಪುನರ್‌ ರಚನೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ವಿವೇಚನೆಗೆ ಬಿಟ್ಟಿದ್ದಾಗಿದೆ’ ಎಂದರು.

ಶಾಸಕಿ ರೂಪಾಲಿ ನಾಯ್ಕ, ಅಭ್ಯರ್ಥಿ ಗಣಪತಿ ಉಳ್ವೇಕರ್, ಪಕ್ಷದ ಪ್ರಮುಖರಾದ ನಾಗರಾಜ ನಾಯಕ, ಉಷಾ ಹೆಗಡೆ, ನಾಗೇಶ ಕುರ್ಡೇಕರ್, ಭಾಸ್ಕರ ನಾರ್ವೇಕರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.