
ಶಿರಸಿ: 'ದ್ವೈವಾರ್ಷಿಕವಾಗಿ ನಡೆಯುವ ಐತಿಹಾಸಿಕ ಮಾರಿಕಾಂಬಾ ಜಾತ್ರೆಯನ್ನು ಯಶಸ್ವಿಗೊಳಿಸಲು ಊರವರ ಮತ್ತು ಭಕ್ತರ ಸಹಕಾರ ಅತ್ಯಂತ ಮುಖ್ಯ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ತಿಳಿಸಿದರು.
ನಗರದ ಆಡಳಿತ ಸೌಧದಲ್ಲಿ ಸೋಮವಾರ ಜಾತ್ರಾ ಪೂರ್ವಭಾವಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು. ‘ಜಾತ್ರೆಗೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲ ರೀತಿಯ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ. ವಿಶೇಷವಾಗಿ ಸ್ವಚ್ಛತೆ ಮತ್ತು ಶೌಚಾಲಯ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. ಸಾಮಾನ್ಯವಾಗಿ ಜಾತ್ರೆಗಾಗಿ ಪ್ರತ್ಯೇಕವಾಗಿ ವಿಶೇಷ ಅನುದಾನ ಇರುವುದಿಲ್ಲ. ಆದರೂ, ಶಿರಸಿ ನಗರದ ಮೂಲಭೂತ ಸೌಕರ್ಯಗಳ ವೃದ್ಧಿಗಾಗಿ ಈಗಾಗಲೇ ₹50 ಕೋಟಿ ಬಿಡುಗಡೆ ಮಾಡಲಾಗಿದ್ದು, ನಡೆಯುತ್ತಿರುವ ಕಾಮಗಾರಿಗಳಿಗೆ ವೇಗ ನೀಡುವ ಅಗತ್ಯವಿದೆ. ಈ ಹಣವನ್ನು ಬಳಸಿಕೊಂಡು ಭಕ್ತರಿಗೆ ಅಗತ್ಯವಿರುವ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸಲಾಗುವುದು’ ಎಂದು ಅವರು ವಿವರಿಸಿದರು.
‘ಜಾತ್ರೆಯ ಸಂದರ್ಭದಲ್ಲಿ ಸಾರಿಗೆ ವ್ಯವಸ್ಥೆ ಅತಿ ಮುಖ್ಯವಾಗಿದ್ದು, ಭಕ್ತರ ಅನುಕೂಲಕ್ಕಾಗಿ ಬಸ್‌ಗಳ ಓಡಾಟ ನಿರಂತರವಾಗಿರುವಂತೆ ಕ್ರಮ ಕೈಗೊಳ್ಳಲಾಗುವುದು. ದೂರದ ಊರುಗಳಿಂದ ಬರುವ ಜನರಿಗೆ ಸಂಚಾರ ವ್ಯವಸ್ಥೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗದಂತೆ ಸಾರಿಗೆ ಇಲಾಖೆಗೆ ಸೂಚನೆ ನೀಡಲಾಗಿದೆ. ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಾರ್ವಜನಿಕರು ಒಟ್ಟಾಗಿ ಶ್ರಮಿಸಿದರೆ ಜಾತ್ರೆಯನ್ನು ಮಾದರಿಯಾಗಿ ನಡೆಸಲು ಸಾಧ್ಯ’ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ಸಂದರ್ಭದಲ್ಲಿ ಮಾತನಾಡಿದ ಶಾಸಕ ಭೀಮಣ್ಣ ನಾಯ್ಕ, 'ಈಗಾಗಲೇ ಜಾತ್ರಾ ಪೂರ್ವಭಾವಿ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, ಎಲ್ಲವನ್ನೂ ಖುದ್ದಾಗಿ ಪರಿಶೀಲಿಸಲಾಗಿದೆ. ಮಾರಿಕಾಂಬಾ ಜಾತ್ರೆಯ ಯಶಸ್ಸಿಗೆ ನಾವು ನಿರಂತರವಾಗಿ ಶ್ರಮಿಸುತ್ತಿದ್ದು, ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ' ಎಂದರು.
ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ ಮಾತನಾಡಿ,'ಜಾತ್ರೆ ಸಂದರ್ಭದಲ್ಲಿ ಭಕ್ತರ ಸ್ನಾನ, ಶೌಚಾಲಯ, ವಸತಿಗೆ ಹೆಚ್ಚಿನ ವ್ಯವಸ್ಥೆ ಆಗಬೇಕು' ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಭೀಮಣ್ಣ, ‘ಮಾರಿಕಾಂಬಾ ಜಾತ್ರೆ ವೇಳೆ ಮೂಲಭೂತ ಸೌಕರ್ಯ ಕೊರತೆಯಾಗದಂತೆ ಹೆಚ್ಚಿನ ಮುತುವರ್ಜಿ ವಹಿಸಲಾಗುತ್ತಿದೆ’ ಎಂದರು. ಮಾರಿಕಾಂಬಾ ದೇವಾಲಯ ಧರ್ಮದರ್ಶಿ ಮಂಡಳಿ ಅಧ್ಯಕ್ಷ ಆರ್.ಜಿ.ನಾಯ್ಕ ಮಾತನಾಡಿ,'ಜಾತ್ರಾ ಗದ್ದುಗೆ ಜಾಗವನ್ನು ತ್ವರಿತವಾಗಿ ಖುಲ್ಲಾ ಮಾಡಬೇಕು. ಜಾತ್ರಾ ಗದ್ದುಗೆ ಹೊರಗಡೆ ಹೆಚ್ಚಿನ ಸಿಸಿ ಕ್ಯಾಮರಾಗಳನ್ನು ಅಳವಡಿಸುವ ಕಾರ್ಯವಾಗಬೇಕು' ಎಂದು ಹೇಳಿದರು.
ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಕೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ., ಜಿಲ್ಲಾ ಪಂಚಾಯಿತಿ ಸಿಇಒ ದಿಲೀಶ ಶಶಿ, ಪ್ರಭಾರಿ ಉಪವಿಭಾಗಾಧಿಕಾರಿ ಶಂಕರ ಗೌಡಿ, ಡಿಎಸ್ಪಿ ಗೀತಾ ಪಾಟೀಲ ಇತರರಿದ್ದರು.
ಭದ್ರತೆಗೆ ಆದ್ಯತೆ: ಜಾತ್ರೆಯ ಭದ್ರತೆ ಹಾಗೂ ಸಂಚಾರ ವ್ಯವಸ್ಥೆಯ ಕುರಿತು ಮಾಹಿತಿ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ. ‘ಜಾತ್ರಾ ಅವಧಿಯಲ್ಲಿ ವಾಹನ ದಟ್ಟಣೆ ಹೆಚ್ಚಿರುವ ಕಾರಣ ಆಯಾ ರಸ್ತೆಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ವಾಹನ ನಿಲುಗಡೆಗೆ ಸುಲಭವಾಗುವಂತೆ ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗುವುದು. ಭದ್ರತೆಗಾಗಿ ವಾಚ್ ಟವರ್ ನಿರಂತರ ಅನೌನ್ಸ್ಮೆಂಟ್ ಹಾಗೂ ಸಹಾಯವಾಣಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ತುರ್ತು ಸಹಾಯ ತಂಡ ಹಾಗೂ ಮಹಿಳೆಯರ ಸುರಕ್ಷತೆಗಾಗಿ ಅಕ್ಕ ಪಡೆಯನ್ನು ನಿಯೋಜಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.