ADVERTISEMENT

ನದಿ ಜೋಡಣೆ ವಿರೋಧಿಸಲು ನಾವು ಸಿದ್ಧ

ಬಿಜೆಪಿ ನಾಯಕರು ಪ್ರಧಾನಿ ಭೇಟಿಯಾಗಿ ಯೋಜನೆ ಕೈಬಿಡಿಸಲಿ:ಸಚಿವ ವೈದ್ಯ

​ಪ್ರಜಾವಾಣಿ ವಾರ್ತೆ
Published 20 ಜನವರಿ 2026, 5:29 IST
Last Updated 20 ಜನವರಿ 2026, 5:29 IST
ಮಂಕಾಳ ವೈದ್ಯ
ಮಂಕಾಳ ವೈದ್ಯ   

ಶಿರಸಿ: ‘ಬೇಡ್ತಿ–ವರದಾ ನದಿ ಜೋಡಣೆ ಯೋಜನೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಅಧಿವೇಶನದಲ್ಲಿ ಅನುಮೋದನೆಗೊಂಡ ಯೋಜನೆಯಾಗಿದೆ. ಅಂದು ಜಿಲ್ಲೆಯ ಐವರು ಶಾಸಕರು, ಇಬ್ಬರು ಮಂತ್ರಿಗಳು ಹಾಗೂ ಸಭಾಧ್ಯಕ್ಷರು ಬಿಜೆಪಿಯವರೇ ಇದ್ದರೂ ವಿರೋಧ ಮಾಡದೆ, ಈಗ ನಮ್ಮ ಮೇಲೆ ಗೂಬೆ ಕೂರಿಸುತ್ತಿರುವುದು ದುರಂತ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಟೀಕಿಸಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಬೇಡ್ತಿ-ವರದಾ-ಅಘನಾಶಿನಿ ನದಿ ಜೋಡಣೆ ನಿರ್ಧಾರ ಬಿಜೆಪಿ ಸರ್ಕಾರದಲ್ಲೇ ಆಗಿತ್ತು. ಈ ಯೋಜನೆಯಿಂದ 1,500 ಎಕರೆ ಅರಣ್ಯ ಭೂಮಿ, ಲಕ್ಷಾಂತರ ಮರಗಳು ಹಾಗೂ ಬಡವರ ಜಮೀನು ನಾಶವಾಗಲಿದೆ. ಯೋಜನೆಗೆ ಶೇ. 90ರಷ್ಟು ಹಣ ಕೇಂದ್ರದ್ದಾಗಿದ್ದು, ಇಲ್ಲಿ ಚರ್ಚಿಸುವ ಬದಲು ಬಿಜೆಪಿ ನಾಯಕರು ಪ್ರಧಾನಿ ಮೋದಿಯವರನ್ನು ಭೇಟಿಯಾಗಿ ಯೋಜನೆ ಕೈಬಿಡಿಸಲಿ. ಸ್ವರ್ಣವಲ್ಲೀ ಸ್ವಾಮೀಜಿ ಮಾರ್ಗದರ್ಶನದಂತೆ ನಡೆಯುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಬಸವರಾಜ ಬೊಮ್ಮಾಯಿ ಅವರ ಅವಧಿಯಲ್ಲಿ ಮಂಜೂರಾಗಿದ್ದು’ ಎಂದು ನೆನಪಿಸಿದ ಸಚಿವರು, ‘ಕೇಂದ್ರದ ಪರಿಸರ ಅನುಮತಿ ಇಲ್ಲದೆ ಏನೂ ಸಾಧ್ಯವಿಲ್ಲ’ ಎಂದರು. 

‘ಶಿರಸಿ-ಹಾವೇರಿ ರಸ್ತೆ ಕಾಮಗಾರಿ ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಅಧಿಕಾರಿಗಳು ಜಾಗರೂಕತೆಯಿಂದ ಕೆಲಸ ಮಾಡದಿದ್ದರೆ ನಮ್ಮ ಭಾಷೆಯಲ್ಲಿ ಉತ್ತರ ನೀಡಬೇಕಾಗುತ್ತದೆ ಎಂದು ಎಚ್ಚರಿಸಿದ ಅವರು, ‘ಉದ್ಯೋಗ ಖಾತರಿ ಯೋಜನೆಯಡಿ ಬಡವರಿಗೆ ಸಿಗುತ್ತಿದ್ದ ಸವಲತ್ತುಗಳನ್ನು ಕೇಂದ್ರ ಸರ್ಕಾರ ಕಡಿತಗೊಳಿಸುತ್ತಿದೆ. ಈ ಬಗ್ಗೆ ಚರ್ಚಿಸಲು ಮುಖ್ಯಮಂತ್ರಿಗಳು ವಿಶೇಷ ಅಧಿವೇಶನ ಕರೆದಿದ್ದು, ಅಲ್ಲಿ ಜಿಲ್ಲೆಯ ಸಮಸ್ಯೆಗಳನ್ನು ಮಂಡಿಸಲಾಗುವುದು’ ಎಂದರು. ಈ ಸಂದರ್ಭದಲ್ಲಿ ಶಾಸಕ ಭೀಮಣ್ಣ ನಾಯ್ಕ ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.