ADVERTISEMENT

ಗೋಕರ್ಣ: ಪೂಜಾ ಸಮಯ ವಿಸ್ತರಣೆಗೆ ಶಾಸಕರ ಸೂಚನೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2026, 7:05 IST
Last Updated 7 ಜನವರಿ 2026, 7:05 IST
ಕುಮಟಾದಲ್ಲಿ ಮಂಗಳವಾರ ನಡೆದ ಶಾಸಕರ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿದರು
ಕುಮಟಾದಲ್ಲಿ ಮಂಗಳವಾರ ನಡೆದ ಶಾಸಕರ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿದರು   

ಕುಮಟಾ: ‘ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಪೂಜಾ ಸಮಯವನ್ನು ಹೆಚ್ಚು ಅವಧಿಗೆ ವಿಸ್ತರಿಸುವ ಬಗ್ಗೆ ಕ್ರಮ ಕೈಕೊಳ್ಳಿ’ ಎಂದು ಶಾಸಕ ದಿನಕರ ಶೆಟ್ಟಿ ಮಂಗಳವಾರ ನಡೆದ ಶಾಸಕರ ತ್ರೈಮಾಸಿಕ ಕೆ.ಡಿ.ಪಿ ಸಭೆಯಲ್ಲಿ ತಾಲ್ಲೂಕು ಆಡಳಿತಕ್ಕೆ ಸೂಚಿಸಿದರು.

‘ದೇಶದ ವಿವಿಧ ಭಾಗಗಳಿಂದ ಗೋಕರ್ಣಕ್ಕೆ ಬರುವ ಭಕ್ತಾದಿಗಳಿಗೆ ಪೂಜೆಗೆ ಅವಕಾಶ ನೀಡಬೇಕಾಗಿದೆ. ಸಮಯದ ಅಭಾವದಿಂದಾಗಿ ಪೂಜೆಗೆ ಅವಕಾಶ ಸಿಗದೆ ಭಕ್ತರು ವಾಪಸು ಹೋಗುವುದನ್ನು ತಡೆಯಲು ಕ್ರಮ ಕೈಕೊಳ್ಳಿ’ ಎಂದರು.

ಗೋಕರ್ಣದ ಅನವಂಶೀಯ ಉಪಾದಿವಂತ ಮಂಡಳಿ ಮುಖ್ಯಸ್ಥ ಹಾಗೂ ಕೆ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ರಾಜಗೋಪಾಲ ಅಡಿ, ‘ಹಿಂದೆ ಬೆಳಿಗ್ಗೆ 6 ರಿಂದ ಮಧ್ಯಾಹ್ನ 12-30 ಗಂಟೆ ವರೆಗೆ ಹಾಗೂ ಸಂಜೆ 5 ಗಂಟೆಯಿಂದ ರಾತ್ರಿ 8-30 ಗಂಟೆ ವರೆಗೆ ಗೋಕರ್ಣ ದೇವಾಲಯದಲ್ಲಿ ಪೂಜೆಗೆ ಅವಕಾಶವಿತ್ತು. ಇದರಿಂದ ರಾತ್ರಿ ಹೊತ್ತು ಸಹ ಭಕ್ತಾದಿಗಳು ಗೋಕರ್ಣಕ್ಕೆ ಬಂದು ನೆಮ್ಮದಿಯಿಂದ ಹಿಂತಿರುಗುತ್ತಿದ್ದರು. ಪೂಜಾ ವೇಳೆ ಬದಲಾಗಿದ್ದರಿಂದ ಭಕ್ತಾದಿಗಳು ನಿರಾಶೆಪಡುವಂತಾಗಿದೆ' ಎಂದರು.

ADVERTISEMENT

ತಾಲ್ಲೂಕು ಆಸ್ಪತ್ರೆಯ ಅಡಳಿತ ವೈದ್ಯಾಧಿಕಾರಿ ಡಾ.ಗಣೇಶ ನಾಯ್ಕ ಮಾತನಾಡಿ,‘ತಾಲ್ಲೂಕು ಆಸ್ಪತ್ರೆಯಲ್ಲಿ ಡಯಾಲಿಸಿಸ್ ಸೇವೆ ನೀಡುವ ಸಿಬ್ಬಂದಿ ಕೊರತೆ ಇದೆ. ಫೆಬ್ರುವರಿ ಮೊದಲ ವಾರದಲ್ಲಿ ನೂತನ ಟ್ರಾಮಾ ಕೇಂದ್ರ ಉದ್ಘಾಟನೆಗೊಳ್ಳಲಿದೆ. ಮಂಗಳೂರಿನ ಶ್ರೀನಿವಾಸ ವೈದ್ಯಕೀಯ ಕಾಲೇಜಿನಿಂದ ತಾಲ್ಲೂಕು ಆಸ್ಪತ್ರೆಗೆ ನಾಲ್ವರು ಸ್ಥಾನಿಕ ವೈದ್ಯರನ್ನು ಸೇವೆಗೆ ಕಳುಹಿಸಿಕೊಟ್ಟಿದ್ದರಿಂದ ರೋಗಿಗಳಿಗೆ ಹೆಚ್ಚಿನ ವೈದ್ಯಕೀಯ ಸೇವೆ ಲಭಿಸುತ್ತದೆ’ ಎಂದರು.

‘ಬೊಗರಿಬೈಲ ಬಳಿ ಅಘನಾಶಿನಿ ನದಿ ಸೇತುವೆ ಪಕ್ಕ ನಿರ್ಮಿಸಿದ ಸವೀಸ್ ರಸ್ತೆಯನ್ನು ರಸ್ತೆ ಜಾಗ ಕೊಟ್ಟು ಪರಿಹಾರ ಪಡೆದವರೇ ಅತಿಕ್ರಮಿಸಿದ್ದಾರೆ. ರಸ್ತೆ ಜಾಗ ತೆರವಿಗೆ ಕ್ರಮ ಕೈಕೊಳ್ಳಿ' ಎಂದು ಶಾಸಕ ದಿನಕರ ಶೆಟ್ಟಿ ತಹಶೀಲ್ದಾರ್ ಕೃಷ್ಣ ಕಾಮಕರ್ ಅವರಿಗೆ ಅವರಿಗೆ ಸೂಚಿಸಿದರು.

ಹಿರಿಯ ಪಶು ವೈದ್ಯಾಧಿಕಾರಿ ಡಾ.ವಿಶ್ವನಾಥ ಹೆಗಡೆ, ‘ಕಳೆದ 8 ವರ್ಷಗಳ ಹಿಂದೆ ಕೇಂದ್ರ ಸರ್ಕಾರ ಕೈಕೊಂಡ ಲಸಿಕಾ ಕಾರ್ಯಕ್ರಮದ ಪರಿಣಾಮವಾಗಿ ತಾಲ್ಲೂಕಿನಲ್ಲಿ ದಕನಕರುಗಳಿಗೆ ಕಾಲುಬಾಯಿ ರೋಗ ಇಲ್ಲವಾಗಿದೆ’ ಎಂದರು.

‘ಸಹಕಾರಿ ಸಂಘಗಳ ಸದಸ್ಯರು ಹಾಗೂ ಅವರ ಕುಟುಂಬ ಸದಸ್ಯರಿಗೆ ಅನುಕೂಲವಗುವಂತೆ ಇದ್ದ ಯಶಸ್ವಿನಿ ಆರೋಗ್ಯ ಯೋಜನೆಯಡಿ ಹೆಚ್ಚಿನ ದೊಡ್ಡ ಆಸ್ಪತ್ರೆಗಳು ಯೋಜನೆಯ ಪ್ರಯೋಜ ಜನರಿಗೆ ನೀಡಲು ಒಪ್ಪಿಕೊಳ್ಳದಿರುವುದು ತೀರಾ ಅನಾನುಕೂಲವಾಗಿದೆ. ಇದರ ಬಗ್ಗೆ ಶಾಸಕರು ವಿಧಾನಸಭೆಯಲ್ಲಿ ಚರ್ಚೆ ನಡೆಸಬೇಕು' ಎಂದು ಕೆ.ಡಿ.ಪಿ ಸದಸ್ಯರಾದ ಭುವನ ಭಾಗ್ವತ, ಧೀರು ಶಾನಭಾಗ ಹೇಳಿದರು.

ತಾಲ್ಲೂಕು ಪಂಚಾಯಿತಿ ಆಡಳಿತಾಧಿಕಾರಿ ಪ್ರಕಾಶ ಹಾಲಮ್ಮನವರ, ಇಒ ಆರ್.ಎಲ್. ಭಟ್ಟ, ತಹಶೀಲ್ದಾರ್ ಕೃಷ್ಣ ಕಾಮಕರ್, ಕೆ.ಡಿ.ಪಿ ಸದಸ್ಯರಾದ ಶ್ರೀಮತಿ ಫಾತಿಮಾ, ನಾಗವೇಣಿ ಮುಕ್ರಿ, ಜಗದೀಶ ಹರಿಕಂತ್ರ, ರಾಘು ಪಟಗಾರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.