ADVERTISEMENT

ಸಂಚಾರಿ ಬೈಕ್ ಆರೋಗ್ಯ ಘಟಕ

ಬಡವರು, ದುರ್ಬಲ ವರ್ಗದವರಿಗೆ ಮನೆ ಬಾಗಿಲಲ್ಲಿ ಸೇವೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2020, 12:41 IST
Last Updated 16 ಏಪ್ರಿಲ್ 2020, 12:41 IST
ಶಿರಸಿಯಲ್ಲಿ ಸಂಜೀವಿನಿ ಬೈಕ್ ಸಂಚಾರಿ ಆರೋಗ್ಯ ಘಟಕ ಸಂಚಾರಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು
ಶಿರಸಿಯಲ್ಲಿ ಸಂಜೀವಿನಿ ಬೈಕ್ ಸಂಚಾರಿ ಆರೋಗ್ಯ ಘಟಕ ಸಂಚಾರಕ್ಕೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು   

ಶಿರಸಿ: ಗ್ರಾಮೀಣ ಆರೋಗ್ಯ ಸೇವೆಯಲ್ಲಿ ತೊಡಗಿರುವ ಇಲ್ಲಿನ ಸ್ಕೊಡ್‌ವೆಸ್ ಸಂಸ್ಥೆಯು ಕೋವಿಡ್‌ 19 ನಿಯಂತ್ರಿಸಲು ಲಾಕ್‌ಡೌನ್ ಇರುವ ಸಂದರ್ಭದಲ್ಲಿ ಆರೋಗ್ಯ ಸಮಸ್ಯೆ ಎದುರಿಸುವ ಜನರಿಗೆ ಸೇವೆ ನೀಡಲು ಸಂಜೀವಿನಿ ಬೈಕ್ ಸಂಚಾರಿ ಆರೋಗ್ಯ ಘಟಕವನ್ನು ಪ್ರಾರಂಭಿಸಿದೆ.

ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗುರುವಾರ ಸಂಚಾರಿ ಘಟಕಕ್ಕೆ ಚಾಲನೆ ನೀಡಿದರು. ಉಪವಿಭಾಗಾಧಿಕಾರಿ ಡಾ.ಈಶ್ವರ ಉಳ್ಳಾಗಡ್ಡಿ, ಡಿವೈಎಸ್ಪಿ ಜಿ.ಟಿ.ನಾಯಕ, ಸ್ಕೊಡ್‌ವೆಸ್ ನಿರ್ದೇಶಕಿ ಸರಸ್ವತಿ ಎನ್. ರವಿ ಇದ್ದರು.

ಆಸ್ಪತ್ರೆಗೆ ಹೋಗಲು ಸಾಧ್ಯವಾಗದವರು, ಬಡವರು, ಕೂಲಿ ಕಾರ್ಮಿಕರು, ಮಕ್ಕಳು, ಗರ್ಭಿಣಿ ಸ್ತ್ರೀಯರು, ಅಂಗವಿಕಲರನ್ನು ಹೆಚ್ಚು ಕೇಂದ್ರೀಕರಿಸಿ ಈ ಸಂಚಾರಿ ಘಟಕ ಕಾರ್ಯನಿರ್ವಹಿಸುತ್ತದೆ.

ADVERTISEMENT

ಟೀಮ್ ಸಂಜೀವಿನಿ ಬೈಕ್ ಸಂಚಾರಿ ಆರೋಗ್ಯ ಘಟಕದಲ್ಲಿ ಮನೆಬಾಗಿಲಿಗೆ ಬರುವ ಆರೋಗ್ಯ ಸಹಾಯಕರು, ಮಧುಮೇಹ, ರಕ್ತದೊತ್ತಡ ಪರೀಕ್ಷೆ, ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವರ ಅನುಪಾಲನ ಸೇವೆ, ಆರೋಗ್ಯ ಸಲಹೆ, ಕೋವಿಡ್-19 ನಿಯಂತ್ರಣದ ಕುರಿತು ಜಾಗೃತಿ ಮೂಡಿಸುವ, ಔಷಧಗಳು, ಮಾತ್ರೆಗಳು ಖಾಲಿಯಾದಲ್ಲಿ ಅಂಥವರಿಗೆ ಸಹಾಯ, ತೀವ್ರ ಆರೋಗ್ಯ ಸಮಸ್ಯೆ ಇದ್ದಲ್ಲಿ ಆಸ್ಪತ್ರೆಗೆ ಸಾಗಿಸಲು ಸಹಾಯ ಮಾಡಲಿದ್ದಾರೆ. ದೂರವಾಣಿ ಮೂಲಕ ತಜ್ಞ ವೈದ್ಯರ ಆರೋಗ್ಯ ಸಲಹೆಯನ್ನು ಸಹ ನೀಡಲಾಗುತ್ತದೆ.

ತಂಡದಲ್ಲಿ ಯಾರ್ಯಾರು?: ಸ್ಕೊಡ್‌ವೆಸ್‌ ವೈದ್ಯಕೀಯ ಸೇವಾ ವಿಭಾಗದ ವೈದ್ಯರು, ನರ್ಸ್, ಫಾರ್ಮಸಿಸ್ಟ್‌ಗಳು, ಲ್ಯಾಬ್ ಟೆಕ್ನಿಷಿಯನ್, ಆರೋಗ್ಯ ಸಹಾಯಕರು, ಸ್ವಯಂ ಸೇವರು ತಂಡದಲ್ಲಿದ್ದಾರೆ. ಆರೋಗ್ಯ ಸಮಸ್ಯೆಗಳನ್ನು ಆಧರಿಸಿ, ವಿಭಾಗವಾರು ಸೇವೆ ಸಲ್ಲಿಸುತ್ತಾರೆ. ಎರಡು ಆಂಬುಲೆನ್ಸ್‌ಗಳು, ಐದು ಬೈಕ್, ಒಂದು ಬೊಲೆರೊ ಜೀಪ್‌ ಅನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಾಗುತ್ತದೆ.

ಚಿಕಿತ್ಸೆ ಅಗತ್ಯವಿರುವವರು ಸಹಾಯವಾಣಿ ಸಂಖ್ಯೆ 08384-236398/238398, 9900195285 ಇದಕ್ಕೆ ಬೆಳಿಗ್ಗೆ 8ರಿಂದ ಸಂಜೆ 5 ಗಂಟೆಯ ಒಳಗೆ ಕರೆ ಮಾಡಿ ಹೆಸರು ನೋಂದಾಯಿಸಿದಲ್ಲಿ ಟೀಮ್ ಸಂಜೀವಿನಿ ಸದಸ್ಯರು ಮನೆಗೆ ಭೇಟಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.