ADVERTISEMENT

ಪರಿಶಿಷ್ಟ ಜಾತಿ ಸೌಲಭ್ಯ ನೀಡಲು ಆಗ್ರಹ

ಉಪವಿಭಾಗಾಧಿಕಾರಿ ಕಚೇರಿ ಎದುರು ಮೊಗೇರರ ಧರಣಿ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2022, 12:43 IST
Last Updated 6 ಏಪ್ರಿಲ್ 2022, 12:43 IST
ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮೊಗೇರ ಸಮುದಾಯದ ಸಂಘದ ಶಿರಸಿ ತಾಲ್ಲೂಕು ಘಟಕದವರು ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು
ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಮೊಗೇರ ಸಮುದಾಯದ ಸಂಘದ ಶಿರಸಿ ತಾಲ್ಲೂಕು ಘಟಕದವರು ಉಪವಿಭಾಗಾಧಿಕಾರಿ ಕಚೇರಿಯ ಅಧಿಕಾರಿಗೆ ಮನವಿ ಸಲ್ಲಿಸಿದರು   

ಶಿರಸಿ: ಸುಪ್ರಿಂ ಕೋರ್ಟ್ ಆದೇಶವಿದ್ದರೂ ಮೊಗೇರ ಸಮುದಾಯಕ್ಕೆ ಪರಿಶಿಷ್ಟ ಜಾತಿಗೆ ಸಿಗುವ ಸೌಲಭ್ಯವನ್ನು ಜಿಲ್ಲಾಡಳಿತ ತಡೆಹಿಡಿಯುತ್ತಿರುವುದನ್ನು ಖಂಡಿಸಿ ಮೊಗೇರ ಸಮುದಾಯ ಸಂಘದ ತಾಲ್ಲೂಕು ಘಟಕದವರು ಬುಧವಾರ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಉಪವಿಭಾಗಾಧಿಕಾರಿ ಕಚೇರಿ ಎದುರು ಧರಣಿ ಕೈಗೊಂಡರು.

ಬಿಡಕಿಬೈಲಿನಲ್ಲಿರುವ ಗಾಂಧಿ ಪ್ರತಿಮೆ ಎದುರು ಮೆರವಣಿಗೆಗೆ ಚಾಲನೆ ನೀಡಲಾಯಿತು. ಈ ವೇಳೆ ಮಾತನಾಡಿದ ಮಾಜಿ ಶಾಸಕ ವಿವೇಕಾನಂದ ವೈದ್ಯ, ‘ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ಮೊಗೇರ ಸಮುದಾಯಕ್ಕೆ ಮಿಸಲಾತಿ ವಿಷಯದಲ್ಲಿ ಅನ್ಯಾಯ ಎಸಗಲಾಗುತ್ತಿದೆ. ನ್ಯಾಯಾಲಯದ ತೀರ್ಪನ್ನು ಗೌರವಿಸದೆ ಪರಿಶಿಷ್ಟ ಸೌಲಭ್ಯ ಹಿಂಪಡೆದಿರುವುದು ಸರಿಯಲ್ಲ’ ಎಂದರು.

ಬಿಡಕಿಬೈಲಿನಿಂದ ಮುಖ್ಯರಸ್ತೆಗಳ ಮೂಲಕ ಸಾಗಿದ ಮೆರವಣಿಗೆ ಉಪವಿಭಾಗಾಧಿಕಾರಿ ಕಚೇರಿ ತಲುಪಿತು. ಈ ವೇಳೆ ನ್ಯಾಯಕ್ಕಾಗಿ ಆಗ್ರಹಿಸುವ ಘೋಷಣೆಗಳ ಫಲಕಗಳನ್ನು ಪ್ರದರ್ಶಿಸಲಾಯಿತು.

ADVERTISEMENT

‘ಮೊಗೇರ ಜಾತಿಗೆ ತಡೆ ಹಿಡಿಯಲ್ಪಟ್ಟ ಪರಿಶಿಷ್ಟ ಜಾತಿ ಸೌಲಭ್ಯವನ್ನು ವಿಳಂಬವಿಲ್ಲದೇ ಮುಂದುವರಿಸಬೇಕು. ಪ್ರಮಾಣ ಪತ್ರ ವಿತರಿಸುವ ತಂತ್ರಾಂಶದಲ್ಲಿ ಮೊಗೇರ ಜಾತಿಯನ್ನು ಪ್ರವರ್ಗ–1 ಪಟ್ಟಿಯಿಂದ ಕೈಬಿಡಬೇಕು. ಉದ್ಯೋಗಹಾಗೂ ಶಿಕ್ಷಣ ಆಕಾಂಕ್ಷಿಗಳ ತಡೆಹಿಡಿಯಲ್ಪಟ್ಟಿರುವ ಸಿಂಧುತ್ವ ಪ್ರಮಾಣ ಪತ್ರ ನೀಡಬೇಕು. ಜಾತಿ ಪ್ರಮಾಣ ಪತ್ರಕ್ಕೆ ಸಂಬಂಧಿಸಿದಂತೆ ಸಮಾಜದವರ ವಿರುದ್ಧ ದಾಖಲಿಸಿದ ಕ್ರಿಮಿನಲ್ ಪ್ರಕರಣ ಹಿಂಪಡೆಯಬೇಕು’ ಎಂದು ಸಂಘದ ಅಧ್ಯಕ್ಷ ಗಣೇಶ ಜೈವಂತ್ ಒತ್ತಾಯಿಸಿದರು.

ರಾಜು ಉಗ್ರಾಣಕರ್, ಮೋಹಿನಿ ಬೈಲೂರ, ಜಗದೀಶ ಜೈವಂತ್, ಅಶೋಕ ಭಟ್ಕಳ, ನಾಗರಾಜ ಮುರ್ಡೇಶ್ವರ, ವಿದ್ಯಾ ವೈದ್ಯ, ಸುಮಾ ಉಗ್ರಾಣಕರ್, ಶಕುಂತಲಾ ಜೈವಂತ್, ಶ್ರೀಧರ ಮೊಗೇರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.