ADVERTISEMENT

ಇಲಾಖೆ ಪರಸ್ಪರ ಸಮನ್ವಯತೆಯಿಂದ ಕಾರ್ಯ ಮಾಡಿ: ತಹಶೀಲ್ದಾರ್ ಚಿಕ್ಕಪ್ಪ ನಾಯಕ

ಮಳೆಗಾಲ ನಿರ್ವಹಣೆ ಸಭೆಯಲ್ಲಿ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2025, 5:25 IST
Last Updated 10 ಆಗಸ್ಟ್ 2025, 5:25 IST
ಅಂಕೋಲಾ ತಹಶೀಲ್ದಾರ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಸಮನ್ವಯ ಮಳೆಗಾಲದ ನಿರ್ವಹಣೆ ಸಭೆಯಲ್ಲಿ ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಮಾತನಾಡಿದರು.
ಅಂಕೋಲಾ ತಹಶೀಲ್ದಾರ ಕಾರ್ಯಾಲಯದಲ್ಲಿ ಶುಕ್ರವಾರ ನಡೆದ ಸಮನ್ವಯ ಮಳೆಗಾಲದ ನಿರ್ವಹಣೆ ಸಭೆಯಲ್ಲಿ ತಹಶೀಲ್ದಾರ್ ಡಾ.ಚಿಕ್ಕಪ್ಪ ನಾಯಕ ಮಾತನಾಡಿದರು.   

ಅಂಕೋಲಾ: ಮಳೆಗಾಲದಲ್ಲಿ ಸಂಭವಿಸಬಹುದಾದ ಅನಾಹುತಗಳನ್ನು ನಿಯಂತ್ರಿಸಲು ಇಲಾಖೆಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಬೇಕು ಎಂದು ತಹಶೀಲ್ದಾರ ಡಾ.ಚಿಕ್ಕಪ್ಪ ನಾಯಕ ಹೇಳಿದರು.

ಪಟ್ಟಣದ ತಹಶೀಲ್ದಾರ ಕಾರ್ಯಾಲಯದಲ್ಲಿ ಶುಕ್ರವಾರ ಸಂಜೆ ಕರೆದ ಸಮನ್ವಯ ಮಳೆಗಾಲದ ನಿರ್ವಹಣೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ತಾಲ್ಲೂಕಿನಲ್ಲಿ ಬೀಳುವ ಹಂತದಲ್ಲಿ ಇರುವ ಹಳೆಯ ಮರಗಳ ಬಗ್ಗೆ ಶಿಕ್ಷಣ ಇಲಾಖೆ, ಶಿಶು ಅಭಿವೃದ್ಧಿ ಇಲಾಖೆ, ಹೆಸ್ಕಾಂ, ಪುರಸಭೆ, ತಾಲ್ಲೂಕು ಪಂಚಾಯಿತಿ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.

ADVERTISEMENT

ಮಳೆಗಾಲದಲ್ಲಿ ಅಪಾಯಕಾರಿ ಮರದ ಟೊಂಗೆಗಳನ್ನು ತೆರವುಗೊಳಿಸಲು ಯೋಜನೆ ರೂಪಿಸಬೇಕು. ಪುರಸಭೆ, ಶಿಕ್ಷಣ ಇಲಾಖೆ ಇನ್ನಿತರ ಇಲಾಖೆಗಳು ಅರಣ್ಯ ಇಲಾಖೆಗೆ ಪತ್ರ ಬರೆದು ಸುಮ್ಮನಿದ್ದರೆ ಆಗುವುದಿಲ್ಲ, ಸ್ವತಃ ಅಥವಾ ಫೋನ್ ಮೂಲಕ ಸಂಪರ್ಕಿಸಿ ಚರ್ಚಿಸಿ ಕಾರ್ಯರೂಪಕ್ಕೆ ತರಬೇಕು. ಆದ್ಯತೆಯ ಮೇರೆಗೆ ಮರಗಳನ್ನು ಅಥವಾ ಟೊಂಗೆಗಳನ್ನು ತೆರವುಗೊಳಿಸುವದು ಸೂಕ್ತ ಎಂದರು.

ಹೆಸ್ಕಾಂ ಎಂಜಿನಿಯರ್ ಪ್ರವೀಣ ನಾಯ್ಕ ಮಾತನಾಡಿ, ಬಾಳೆಗುಳಿಯಿಂದ ಸುಂಕಸಾಳದವರೆಗೆ ಮತ್ತು ಮಾದನಗೇರಿಯಿಂದ ಹಿಲ್ಲೂರಿನವರೆಗಿನ ಹೆದ್ದಾರಿ ಬದಿಯಲ್ಲಿ ಒಟ್ಟೂ 121 ಸ್ಥಳಗಳನ್ನು ಗುರುತಿಸಲಾಗಿದೆ. ಮಳೆಯ ಪ್ರಮಾಣ ತಗ್ಗಿದ ಮೇಲೆ ಕಟಿಂಗ್ ಮಾಡಲಾಗುವುದು ಎಂದರು.

ವಲಯ ಅರಣ್ಯಾಧಿಕಾರಿ ಪ್ರಮೋದ ನಾಯಕ ಮಾತನಾಡಿ, ಖಾಸಗಿ ಜಮೀನಿನಲ್ಲಿ ಅಥವಾ ಬೇರೆ ಇಲಾಖೆಯ ಜಮೀನಿನಲ್ಲಿರುವ ಮರಗಳನ್ನು ತೆರವುಗೊಳಿಸಲು ಕೆಲವು ನಿಯಮಗಳಿರುತ್ತವೆ, ಆಗ ಅವರೂ ಕೂಡ ನಮಗೆ ಸಹಕರಿಸಬೇಕು. ಮಳೆ ಇರುವಾಗ ಕಟಿಂಗ್ ಮಾಡಲು ಕಾರ್ಮಿಕರು ಸಿಗುವುದಿಲ್ಲ. ಶಾಲಾ ಆವರಣದಲ್ಲಿರುವ ತೆಂಗಿನ ಮರ ಅಥವಾ ಹಣ್ಣಿನ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಕಡ್ಡಾಯವಲ್ಲ, ಎಸ್‌ಡಿಎಂಸಿ ಠರಾವು‌ ಮಾಡಿ ಕಟಾವು ಮಾಡಬಹುದು ಎಂದು ತಿಳಿಸಿದರು.

ಪುರಸಭೆಯ ಮುಖ್ಯಾಧಿಕಾರಿ ಎಚ್.ಅಕ್ಷತಾ, ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ಶಿರಸ್ತೇದಾರ ಗಿರೀಶ ಜಾಂಬಾವಳಿಕರ, ಶಿಶು ಅಭಿವೃದ್ಧಿ ಅಧಿಕಾರಿ ಸವಿತಾ ನಾಯ್ಕ, ತಾಲ್ಲೂಕು ಪಂಚಾಯಿತಿ ಅಧಿಕಾರಿ ನಾಗರಾಜ ನಾಯ್ಕ, ಲೋಕೋಪಯೋಗಿ ಇಲಾಖೆ ಸೇರಿದಂತೆ ಇತರ ಇಲಾಖೆಯ ಅಧಿಕಾರಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.