ADVERTISEMENT

ಉತ್ತರ ಕನ್ನಡ: ಮುಂಗಾರು ಹೊಸ್ತಿಲಲ್ಲೇ ‘ಅವಘಡ’ದ ಎಚ್ಚರಿಕೆ

ಅಪಾಯದಲ್ಲಿ ಸುರಂಗ ಮಾರ್ಗ, ಹೆದ್ದಾರಿ ಮೇಲೆರಗಿದ ಮಣ್ಣಿನ ರಾಶಿ

​ಪ್ರಜಾವಾಣಿ ವಾರ್ತೆ
Published 13 ಜೂನ್ 2025, 16:00 IST
Last Updated 13 ಜೂನ್ 2025, 16:00 IST
ಕಾರವಾರ ತಾಲ್ಲೂಕಿನ ಸಂಕ್ರುಬಾಗ ಘಟ್ಟದಲ್ಲಿ ಗುಡ್ಡ ಕುಸಿದು ಮಣ್ಣಿನ ರಾಶಿ ಹೆದ್ದಾರಿಯಲ್ಲಿ ಬಿದ್ದಿರುವುದು.
ಕಾರವಾರ ತಾಲ್ಲೂಕಿನ ಸಂಕ್ರುಬಾಗ ಘಟ್ಟದಲ್ಲಿ ಗುಡ್ಡ ಕುಸಿದು ಮಣ್ಣಿನ ರಾಶಿ ಹೆದ್ದಾರಿಯಲ್ಲಿ ಬಿದ್ದಿರುವುದು.   

ಕಾರವಾರ: ಮುಂಗಾರು ಮಳೆಯ ಆರಂಭಿಕ ಹಂತದಲ್ಲೇ ನಗರ ಜಲಾವೃತ, ರಾಷ್ಟ್ರೀಯ ಹೆದ್ದಾರಿ ಪಕ್ಕದ ಗುಡ್ಡ ಕುಸಿತ ಸಂಭವಿಸಿರುವುದು ಜನರಲ್ಲಿ ಆತಂಕ ಹೆಚ್ಚಿಸಿದೆ.

ನಗರದಲ್ಲಿ ಜಲಾವೃತ ಸಮಸ್ಯೆ ಬಿಗಡಾಯಿಸುವಂತೆ ಮಾಡಿದ್ದ ಮಳೆ ಪ್ರಮಾಣ ಶುಕ್ರವಾರ ತಗ್ಗಿದ್ದರೂ ಭೂಕುಸಿತ ನಡೆಯುತ್ತಲೇ ಇದೆ. ಹಬ್ಬುವಾಡಾ ಬಳಿ ಗುರುವಾರ ಕುಸಿದಿದ್ದ ಗುಡ್ಡವು ಪುನಃ ಇನ್ನಷ್ಟು ಕುಸಿದಿದೆ. ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿಯ ಸುರಂಗ ಮಾರ್ಗದ ಮೇಲ್ಭಾಗದಲ್ಲಿಯೂ ಕುಸಿತ ಉಂಟಾಗಿದ್ದು, ಬಂಡೆಕಲ್ಲುಗಳು ಸುರಂಗ ಮಾರ್ಗದ ಮೇಲ್ಭಾಗದಲ್ಲಿ ಬಿದ್ದಿವೆ.

ಸಂಕ್ರುಬಾಗ ಘಟ್ಟ ಪ್ರದೇಶದ ತಿರುವಿನಲ್ಲಿ ತಡರಾತ್ರಿ ಗುಡ್ಡ ಕುಸಿದ ಪರಿಣಾಮ ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಲ ತಾಸುಗಳವರೆಗೆ ಸಂಚಾರ ಸ್ಥಗಿತ ಉಂಟಾಗಿತ್ತು. ರಸ್ತೆಗೆ ಬಿದ್ದಿರುವ ಮಣ್ಣಿನ ರಾಶಿಯನ್ನು ತೆರವುಗೊಳಿಸುವ ಪ್ರಕ್ರಿಯೆ ಸಾಗಿದೆ. ಆದರೂ, ಆಗಾಗ ಇಲ್ಲಿನ ಮಣ್ಣು ಕುಸಿಯುತ್ತಿದ್ದು, ಜೊತೆಗೆ ಕಲ್ಲುಗಳೂ ಉರುಳಿ ಬೀಳುತ್ತಿರುವುದು ವಾಹನ ಸವಾರರಲ್ಲಿ ಆತಂಕ ಉಂಟುಮಾಡಿದೆ.

ADVERTISEMENT

‘ರಾಷ್ಟ್ರೀಯ ಹೆದ್ದಾರಿ ವಿಸ್ತರಣೆಯನ್ನೇ ಅವೈಜ್ಞಾನಿಕವಾಗಿ ಮಾಡಲಾಗಿದೆ. ಗುಡ್ಡವನ್ನು ಲಂಬಕೋನದ ಮಾದರಿಯಲ್ಲಿ ಕತ್ತರಿಸಿದ್ದು ಕುಸಿತಕ್ಕೆ ಕಾರಣವಾಗುತ್ತಿದೆ. ಕೆಂಪು ಮಣ್ಣು ಹೆಚ್ಚಿರುವ ಗುಡ್ಡಕ್ಕೆ ಸುರಂಗ ಕೊರೆದಿರುವುದೇ ಅಪಾಯದ ಸಂಕೇತ. ಈ ಬಗ್ಗೆ ಹಿಂದೆಯೇ ಆಕ್ಷೇಪಿಸಿದ್ದೆವು. ಬೈಪಾಸ್ ಮೂಲಕ ಹೆದ್ದಾರಿ ನಿರ್ಮಿಸಲು ಒತ್ತಾಯಿಸಿದ್ದರೂ ಸ್ಪಂದಿಸಿರಲಿಲ್ಲ’ ಎಂಬುದಾಗಿ ಜನಶಕ್ತಿ ವೇದಿಕೆಯ ಅಧ್ಯಕ್ಷ ಮಾಧವ ನಾಯಕ ಆರೋಪಿಸಿದ್ದಾರೆ.

‘ಕಾರವಾರ ನಗರಕ್ಕೆ ಹೊಂದಿಕೊಂಡು ಪರ್ವತಗಳ ಸಾಲುಗಳಿವೆ. ಅದರ ಬುಡದಲ್ಲಿ ಅಪಾರ್ಟಮೆಂಟ್ ನಿರ್ಮಾಣ, ಇನ್ನಿತರ ಕಟ್ಟಡಗಳ ನಿರ್ಮಾಣಕ್ಕೆ ಗುಡ್ಡ ಕತ್ತರಿಸುವ ಕೆಲಸ ನಡೆದಿದೆ. ಮಳೆನೀರು ಹರಿದು ಹೋಗುವ ಕಾಲುವೆ ಒತ್ತುವರಿ ಮಾಡಿ ಕಟ್ಟಡ ನಿರ್ಮಾಣಗೊಂಡಿದೆ. ಇದರಿಂದ ನೀರು ಸರಾಗವಾಗಿ ಹರಿಯಲಾಗದೆ ಒತ್ತಡ ಹೆಚ್ಚಿ ಗುಡ್ಡ ಕುಸಿತ ಸಂಭವಿಸುತ್ತಿದೆ’ ಎಂದು ಸಾಮಾಜಿಕ ಕಾರ್ಯಕರ್ತ ಸಂತೋಷ ನಾಯ್ಕ ದೂರಿದರು.

ಭಯದಲ್ಲೇ ದಿನ ಕಳೆಯುವ ಅಲಿಗದ್ದಾ

ಹೆದ್ದಾರಿಗೆ ಸುರಂಗ ನಿರ್ಮಾಣ ಕಾರ್ಯ ನಡೆದ ಬಳಿಕ ಗುಡ್ಡದ ತಪ್ಪಲಿನಲ್ಲಿರುವ ಅಲಿಗದ್ದಾದ ಹಲವು ಮನೆಗಳಿಗೆ ನೀರು ನುಗ್ಗುತ್ತಿವೆ. ಕಳೆದ ಆರೇಳು ವರ್ಷಗಳಿಂದಲೂ ಈ ಸಮಸ್ಯೆ ಎದುರಿಸುತ್ತಿದ್ದಾರೆ.

‘ಗುಡ್ಡದಿಂದ ಹರಿದು ಬರುತ್ತಿದ್ದ ನೀರು ಸರಾಗವಾಗಿ ಸಾಗುತ್ತಿದ್ದ ಹಳ್ಳಗಳಿದ್ದ ಜಾಗದಲ್ಲಿ ಹೆದ್ದಾರಿ ನಿರ್ಮಾಣವಾಗಿದೆ. ಹೆದ್ದಾರಿಯಿಂದ ನೀರು ಇಳಿದು ಹೋಗಲು ವ್ಯವಸ್ಥೆ ಆಗಿದೆಯೇ ವಿನಃ, ಅಲ್ಲಿಂದ ಮುಂದೆ ಕಾಲುವೆ ಇಲ್ಲ. ಇದರಿಂದ ನೀರು ಮನೆಗಳ ಆವರಣಕ್ಕೆ ನುಗ್ಗುತ್ತಿದೆ’ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಕಾರವಾರದ ಬಿಣಗಾ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸುರಂಗ ಮಾರ್ಗದ ಮೇಲ್ಭಾಗದಲ್ಲಿ ಗುಡ್ಡ ಕುಸಿತ ಸಂಭವಿಸಿರುವುದು

ಅವ್ಯವಸ್ಥೆಗೆ ಜನರ ಹಿಡಿಶಾಪ

ಮಳೆಯಿಂದ ಕಾರವಾರ ನಗರ ಜಲಾವೃತಗೊಳ್ಳಲು ನಗರಸಭೆಯ ನಿರ್ಲಕ್ಷ ಕಾರಣ ಎಂದು ಸಾರ್ವಜನಿಕರು ದೂರುತ್ತಿದ್ದಾರೆ. ಮಳೆಗಾಲಕ್ಕೆ ಮುನ್ನ ಚರಂಡಿಗಳ ಹೂಳೆತ್ತುವ ಕೆಲಸ ಸಮರ್ಪಕವಾಗಿ ನಡೆದಿಲ್ಲ. ರಾಜಕಾಲುವೆ ಹೂಳೆತ್ತುವ ಕೆಲಸವೂ ಆಗಿಲ್ಲ ಎಂಬುದು ಜನರ ದೂರು.

‘ಹಲವು ವರ್ಷಗಳಿಂದ ಅಪಾರ್ಟಮೆಂಟ್‌ಗಳ ನಿರ್ಮಾಣಕ್ಕೆ ಕಾಲುವೆಗಳ ಒತ್ತುವರಿಯಾಗಿದೆ. ಮಳೆನೀರು ಹರಿದು ಹೋಗುವ ಜಾಗದಲ್ಲಿ ಕಾಂಪೌಂಡ್‌ಗಳನ್ನು ನಿರ್ಮಿಸಲಾಗಿದೆ. ಇದು ಜಲಾವೃತ ಸಮಸ್ಯೆಗೆ ಮುಖ್ಯ ಕಾರಣ’ ಎನ್ನುತ್ತಾರೆ ನಗರಸಭೆ ಅಧಿಕಾರಿಗಳು.

‘ಚರಂಡಿಗಳ ಹೂಳೆತ್ತುವ ಕೆಲಸ ನಡೆದಿದೆ. ಆದರೆ ಸಮುದ್ರದ ಉಬ್ಬರದ ಕಾರಣದಿಂದ ಮಳೆನೀರು ಸರಾಗವಾಗಿ ಹರಿದು ಹೋಗಲು ಸಾಧ್ಯವಾಗಲಿಲ್ಲ. ಗುಡ್ಡದಿಂದ ಅಪಾರ ಪ್ರಮಾಣದ ಶೇಡಿ ಮಣ್ಣು ಹರಿದು ಚರಂಡಿಗಳಲ್ಲಿ ತುಂಬಿತ್ತು. 10 ಟಿಪ್ಪರ್‌ಗೂ ಹೆಚ್ಚು ಪ್ರಮಾಣದ ಮಣ್ಣನ್ನು ತೆರವುಗೊಳಿಸಿದ್ದೇವೆ’ ಎಂದು ಪ್ರತಿಕ್ರಿಯಿಸಿದರು.

ನೀರು ನುಗ್ಗಿದ ಮನೆಗಳ ಸಮೀಕ್ಷೆ

‘ಮಳೆನೀರಿನಿಂದ ಹಾನಿಗೊಳಗಾದ ಮನೆಗಳ ಸಮೀಕ್ಷೆ ಕಾರ್ಯಕ್ಕೆ ತಂಡಗಳನ್ನು ರಚಿಸಲಾಗಿದೆ. ನೀರು ನುಗ್ಗಿದ್ದ ಮನೆಗಳಿಗೆ ಎನ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಪರಿಹಾರ ಒದಗಿಸಲಾಗುವುದು. ಕಾರವಾರ ನಗರ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿರುವ ಅಂದಾಜಿದೆ. ಗುಡ್ಡ ಕುಸಿತದ ಅಪಾಯವಿರುವ ಹಬ್ಬುವಾಡಾ ಅರಗಾ ಭಾಗದಲ್ಲಿ ಕೆಲ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ’ ಎಂದು ತಹಶೀಲ್ದಾರ್ ನಿಶ್ಚಲ್ ನೊರ್‍ಹೋನಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.