ADVERTISEMENT

ಮಳೆ ಹನಿ ನಿಂತರೂ ನಿಲ್ಲದ ಪ್ರವಾಹದ ಹಾನಿ: ಮತ್ತೆ ಕಂಗಾಲಾದ ನೆರೆ ಸಂತ್ರಸ್ತರು

ಜಿಲ್ಲೆಯಲ್ಲಿ ಅಪಾರ ಆಸ್ತಿ– ಪಾಸ್ತಿ ನಾಶ

​ಪ್ರಜಾವಾಣಿ ವಾರ್ತೆ
Published 24 ಜುಲೈ 2021, 14:07 IST
Last Updated 24 ಜುಲೈ 2021, 14:07 IST
ಕಾಳಿ ನದಿಯ ಪ್ರವಾಹದಿಂದ ಮನೆಯೊಂದು ಜಲಾವೃತವಾಗಿರುವುದು
ಕಾಳಿ ನದಿಯ ಪ್ರವಾಹದಿಂದ ಮನೆಯೊಂದು ಜಲಾವೃತವಾಗಿರುವುದು   

ಕಾರವಾರ: ಕದ್ರಾದಲ್ಲಿ ಕಾಳಿಯ ರೌದ್ರಾವತಾರ ಕಡಿಮೆಯಾಗಿದ್ದರೆ, ಅಂಕೋಲಾದಲ್ಲಿ ಗಂಗಾವಳಿಯ ಅಬ್ಬರ ತುಸು ತಣ್ಣಗಾಗಿದೆ. ಆದರೆ, ನೀರು ಇಳಿಯುತ್ತಿದ್ದಂತೆ ಜಲಾಘಾತದ ಒಂದೊಂದೇ ಪರಿಣಾಮಗಳು ಗೋಚರಿಸುತ್ತಿವೆ.

ಶನಿವಾರ ಮಧ್ಯಾಹ್ನ 12.30ರವರೆಗಿನ ಮಾಹಿತಿಯಂತೆ ಜಿಲ್ಲೆಯಲ್ಲಿ 81 ಗ್ರಾಮಗಳು ‍ಪ್ರವಾಹ ಪೀಡಿತವಾಗಿವೆ. ಅವುಗಳಲ್ಲಿ ನಾಲ್ವರು ಮೃತಪಟ್ಟು, 50 ಮನೆಗಳು ಸಂಪೂರ್ಣವಾಗಿ ಕುಸಿದಿವೆ. 30 ಸೇತುವೆಗಳಿಗೆ ಹಾನಿಯುಂಟಾಗಿದೆ.

ಅಂಕೋಲಾ ಮತ್ತು ಕಾರವಾರ ತಾಲ್ಲೂಕುಗಳಲ್ಲಿ ಅತಿ ಹೆಚ್ಚು ಜನರು ಪ್ರವಾಹದ ಪ್ರಭಾವಕ್ಕೆ ಒಳಗಾಗಿದ್ದಾರೆ. ಅಂಕೋಲಾದಲ್ಲಿ 5,800 ಮತ್ತು ಕಾರವಾರದಲ್ಲಿ 4,460 ಮಂದಿ ತೊಂದರೆಗೀಡಾಗಿದ್ದಾರೆ. ಕುಮಟಾದಲ್ಲಿ 1,630 ಗ್ರಾಮಸ್ಥರಿಗೆ ಸಮಸ್ಯೆಯಾಗಿದೆ. ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಒಳಹರಿವು ಕಡಿಮೆಯಾಗಿದೆ. ಇದರಿಂದ ಜಲಾಶಯದ ಹೊರ ಹರಿವು ಕೂಡ ಇಳಿಕೆಯಾಗಿದ್ದು, ನದಿಪಾತ್ರದ ನಿವಾಸಿಗಳು ಸ್ವಲ್ಪ ನಿಟ್ಟುಸಿರು ಬಿಡುವಂತೆ ಮಾಡಿದೆ. ಗಂಗಾವಳಿಯಲ್ಲೂ ನೆರೆ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆ.

ADVERTISEMENT

ಕುಸಿದ ಮನೆಗಳು:ನಿರಂತರ ನೀರಿನ ಹೊಡೆತಕ್ಕೆ ಸಿಲುಕಿದ ಹತ್ತಾರು ಮನೆಗಳು ಕುಸಿದಿವೆ. ಮಲ್ಲಾಪುರ ಸಮೀಪದ ಗಾಂಧಿನಗರದ ಸುತ್ತಮುತ್ತ ಹಲವು ಕಟ್ಟಡಗಳು ನೆಲಸಮವಾಗಿವೆ. 2019ರ ನೆರೆಯಲ್ಲೂ ಇಲ್ಲಿನ ಜನರ ಬದುಕು ಛಿದ್ರವಾಗಿತ್ತು. ಕಾಳಿ ನದಿಯು ಸದಾಶಿವಗಡದಲ್ಲಿ ಸಮುದ್ರ ಸೇರುವ ದಾರಿಯುದ್ದಕ್ಕೂ ಕೃಷಿ ಜಮೀನುಗಳಿವೆ. ಅಲ್ಲಿ ಮುಂಗಾರು ಹಂಗಾಮಿನ ಬಿತ್ತನೆ ಮಾಡಲಾಗಿತ್ತು. ಅವೆಲ್ಲವೂ ನೀರು ಪಾಲಾಗಿವೆ.

ಪ್ರವಾಹ ಪೀಡಿತ ಪ್ರದೇಶಗಳ ನೂರಾರು ಮಂದಿ ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ. ತಮ್ಮ ಬದುಕನ್ನು ಮತ್ತೆ ಹೇಗೆ ಕಟ್ಟಿಕೊಳ್ಳುವುದು ಎಂಬ ಚಿಂತೆಯಲ್ಲಿದ್ದಾರೆ. ನೆರೆ ಪೀಡಿತ ಪ್ರದೇಶಗಳಲ್ಲಿ ವಿವಿಧ ಸಂಘಟನೆಗಳು, ಸಾಮಾಜಿಕ ಕಾರ್ಯಕರ್ತರು ನೆರವಿನ ಹಸ್ತ ಚಾಚಿದ್ದಾರೆ. ಸಂತ್ರಸ್ತರಿಗೆ ಅಗತ್ಯ ವಸ್ತುಗಳನ್ನು ನೀಡಲು ಆರಂಭಿಸಿದ್ದಾರೆ.

ಅಂಕೋಲಾ ತಾಲ್ಲೂಕಿನ ಬಾಳೆಗುಳಿ ಕ್ರಾಸ್‌ನಲ್ಲಿ ಎರಡು ದಿನಗಳಿಂದ ಸಿಲುಕಿದ್ದ ಲಾರಿ ಚಾಲಕರಿಗೆ ಸ್ಥಳೀಯ ಯುವಕರು ಊಟೋಪಹಾರದ ವ್ಯವಸ್ಥೆ ಮಾಡಿದರು. ಬೆಳಗಾವಿ, ಹುಬ್ಬಳ್ಳಿಯತ್ತ ಸಾಗುವ ಲಾರಿಗಳನ್ನು ಪೊಲೀಸರು ದೇವಿಮನೆ ಘಟ್ಟದ ಮೂಲಕ ಶಿರಸಿ ಮಾರ್ಗವಾಗಿ ಸಾಗಲು ಅನುವು ಮಾಡಿಕೊಟ್ಟರು.

ಕಾರವಾರಕ್ಕೆ ತಟ್ಟಿದ ಬಿಸಿ:ಅರಬೈಲ್ ಘಟ್ಟದಲ್ಲಿ ಹೆದ್ದಾರಿ ಕುಸಿದಿರುವ ಕಾರಣ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಇದೇರೀತಿ, ಅಣಶಿ ಘಟ್ಟದಲ್ಲೂ ಭೂ ಕುಸಿತವಾಗಿ ರಸ್ತೆ ಮುಚ್ಚಿದೆ. ಇದರ ನೇರ ಪರಿಣಾಮ ಜಿಲ್ಲಾ ಕೇಂದ್ರ ಕಾರವಾರದ ಮೇಲಾಗಿದೆ.

ಈ ರಸ್ತೆಯ ಮೂಲಕವೇ ಧಾರವಾಡದಿಂದ ಹಾಲು, ಹುಬ್ಬಳ್ಳಿಯಿಂದ ದಿನಪತ್ರಿಕೆಗಳು, ಹಾವೇರಿ, ಹಾನಗಲ್, ಬೆಳಗಾವಿ ಭಾಗದಿಂದ ತರಕಾರಿ, ಮೊಟ್ಟೆ ಮುಂತಾದವುಗಳ ಪೂರೈಕೆಯಾಗುತ್ತದೆ. ಆದರೆ, ಎರಡು ದಿನಗಳಿಂದ ಅವುಗಳ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಹಾಲು ಖರೀದಿಗೆ ನಗರ ನಿವಾಸಿಗಳು ಕೆ.ಎಂ.ಎಫ್ ಮಳಿಗೆ, ಖಾಸಗಿ ಹಾಲಿನ ಮಳಿಗೆಗಳು, ಹೋಟೆಲ್‌ಗಳು, ಬೇಕರಿಗಳಲ್ಲಿ ಬೆಳಿಗ್ಗೆಯಿಂದಲೇ ವಿಚಾರಿಸುತ್ತಿದ್ದುದು ಕಂಡು ಬಂತು.

––––

ಪ್ರವಾಹದಿಂದ ಹಾನಿ

ನೆರೆ ಪೀಡಿತ ಗ್ರಾಮಗಳು;81

ಬಾಧಿತ ಜನಸಂಖ್ಯೆ;12,733

ಮೃತರು;4

ನಾಪತ್ತೆಯಾದವರು;3

ಜಾನುವಾರು ಸಾವು;5

ಸಂಪೂರ್ಣ ಮನೆ ಕುಸಿತ;50

ಭಾಗಶಃ ಮನೆ ಕುಸಿತ;146

ಸಕ್ರಿಯ ಕಾಳಜಿ ಕೇಂದ್ರಗಳು;113

ಆಶ್ರಯ ಪಡೆದಿರುವವರು;9,518

*******

ಕೃಷಿ, ಸ್ವತ್ತು ಹಾನಿ

ಕೃಷಿ ಜಮೀನು;910 ಹೆಕ್ಟೇರ್

ತೋಟಗಾರಿಕೆ ಜಮೀನು;53 ಹೆಕ್ಟೇರ್

ರಸ್ತೆಗೆ ಹಾನಿ;148.2 ಕಿ.ಮೀ

ಸೇತುವೆಗಳು;30

ಶಾಲಾ ಕಟ್ಟಡಗಳು;7

ಪ್ರಾಥಮಿಕ ಆರೋಗ್ಯ ಕೇಂದ್ರ;1

ವಿದ್ಯುತ್ ಕಂಬಗಳು;146

ವಿದ್ಯುತ್ ಪರಿವರ್ತಕಗಳು;5

* ಆಧಾರ: ಜಿಲ್ಲಾಡಳಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.