ಶಿರಸಿ: ಐದು ದಶಕಗಳ ಹಿಂದೆ ಇಲ್ಲಿನ ಶ್ರೀನಗರದ ಬಳಿ ಅನುಷ್ಠಾನಗೊಂಡ ಕೈಗಾರಿಕಾ ವಸಾಹತುವಿನಲ್ಲಿ ಜಾಗದ ಕೊರತೆ ಸಮಸ್ಯೆ ಎದುರಾಗಿದೆ. ವಸಾಹತು ವಿಸ್ತರಣೆ ಮಾಡದ ಕಾರಣ 500ಕ್ಕೂ ಹೆಚ್ಚು ಸಣ್ಣ ವಾಣಿಜ್ಯೋದ್ಯಮಿಗಳು ಹಾಗೂ ನವೋದ್ಯಮಿಗಳಿಗೆ ಉದ್ಯಮ ಸ್ಥಾಪನೆ ಸವಾಲಾಗಿದೆ.
ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮ ನಿಯಮಿತ (ಕೆಎಸ್‌ಎಸ್‌ಐಡಿಸಿ) ವತಿಯಿಂದ ನಗರದ ಬನವಾಸಿ ರಸ್ತೆ ಪಕ್ಕದ ಶ್ರೀನಗರದಲ್ಲಿ 1973ರಲ್ಲಿ 20 ಎಕರೆ ವಿಸ್ತೀರ್ಣದಲ್ಲಿ ಕೈಗಾರಿಕಾ ವಸಾಹತು ಸ್ಥಾಪಿಸಲಾಗಿತ್ತು. ಅಲ್ಲಿ 38 ರಿಂದ 40 ನಿವೇಶನಗಳನ್ನು ಹಂತ ಹಂತವಾಗಿ ಕೈಗಾರಿಕೆ ಸ್ಥಾಪನೆಗೆ ನೀಡಲಾಗಿತ್ತು. ಹಲವು ವರ್ಷಗಳ ಹಿಂದೆಯೇ ಈ ಜಾಗದ ಎಲ್ಲ ನಿವೇಶನಗಳು ಭರ್ತಿಯಾಗಿವೆ. ಹೀಗಾಗಿ ಹೊಸದಾಗಿ ನಿವೇಶನ ಬೇಕೆಂಬ ಸಣ್ಣ ಉದ್ದಿಮೆದಾರರಿಗೆ ಈ ಪ್ರದೇಶದಲ್ಲಿ ಜಾಗ ಇಲ್ಲದಂತಾಗಿದೆ.
‘ದಶಕದಿಂದೀಚೆಗೆ ಸಿದ್ಧ ಆಹಾರ, ಸಿಮೆಂಟ್, ತಂಪು ಪಾನೀಯ, ಚಾಕೊಲೇಟ್, ಟೂತ್‍ಪಿಕ್, ನೀರಿನ ಬಾಟಲಿಗಳು, ಸಣ್ಣ ಆಟಿಕೆಗಳು ಸೇರಿದಂತೆ 500ಕ್ಕೂ ಹೆಚ್ಚು ಉದ್ದಿಮೆ ಸ್ಥಾಪನೆ ಸಂಬಂಧ ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾ ಘಟಕಕ್ಕೆ ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ ಜಾಗವಿಲ್ಲದ ಕಾರಣ ಸಂಘವು ಕೂಡ ಅಸಹಾಯಕವಾಗಿದೆ. ಸರ್ಕಾರದ ಮಟ್ಟದಲ್ಲಿ ಪ್ರಯತ್ನ ನಡೆದಿದೆ ಹೊರತು ಯಶಸ್ಸು ಮಾತ್ರ ಈವರೆಗೆ ಸಾಧ್ಯವಾಗಿಲ್ಲ’ ಎನ್ನುತ್ತಾರೆ ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಪ್ಪ ನಾಯ್ಕ.
‘ಶಿರಸಿ ಭಾಗದಲ್ಲಿ ಇನ್ನೂ ಹೆಚ್ಚಿನ ಕೈಗಾರಿಕೆಗಳ ಸ್ಥಾಪನೆಗಾಗಿ ಎರಡನೇ ಹಂತದ ಕೈಗಾರಿಕಾ ವಲಯ ಸ್ಥಾಪನೆ ಮಾಡುವುದು ಇಲ್ಲಿನ ಉದ್ಯಮಿಗಳ ಒತ್ತಾಸೆಯಾಗಿದೆ. ಈ ಹಿಂದಿನಿಂದಲೂ ಎರಡನೇ ಹಂತದ ಕೈಗಾರಿಕಾ ವಸಾಹತು ನಿರ್ಮಿಸಲು ಸರ್ಕಾರದ ಮುಂದೆ ಬೇಡಿಕೆ ಇಡಲಾಗುತ್ತಿದೆ. 200 ಎಕರೆ ಮಂಜೂರು ಮಾಡುವಂತೆ ಕೋರಲಾಗಿದೆ. ಅರಣ್ಯ ಜಾಗವನ್ನು ಲೀಸ್ ಆಧಾರದ ಮೇಲೆ ನೀಡುವಂತೆ ಕೇಳಲಾಗಿತ್ತಾದರೂ ಅದಕ್ಕೆ ಯಾವುದೇ ಸ್ಪಂದನೆ ಸಿಕ್ಕಿಲ್ಲ’ ಎಂದೂ ಹೇಳಿದರು.
‘ಉದ್ದಿಮೆ ಸ್ಥಾಪಿಸಲು ಸೂಕ್ತ ಜಾಗ ನೀಡುವಂತೆ ಕೋರಿ ಅರ್ಜಿ ಸಲ್ಲಿಸಿ ವರ್ಷಗಳು ಕಳೆದಿವೆ. ಆದರೆ ಈವರೆಗೂ ಜಾಗ ನೀಡುವ ಕಾರ್ಯವಾಗಲಿ, ಹೊಸ ಕೈಗಾರಿಕಾ ವಸಾಹತು ಸ್ಥಾಪಿಸುವ ಕೆಲಸವಾಗಲಿ ಆಗಿಲ್ಲ. ಇದರಿಂದ ಸಿದ್ದಾಪುರದ ಕೈಗಾರಿಕಾ ವಸಾಹತುವಿನಲ್ಲಿ ಜಾಗ ಪಡೆಯಲು ಮುಂದಾಗಿದ್ದೇನೆ’ ಎಂದು ಉದ್ಯಮಿ ಕೈಲಾಶನಾಥ್ ಹೇಳಿದರು.
1973ರಲ್ಲಿ ಕೈಗಾರಿಕಾ ವಸಾಹತು ಪ್ರಾರಂಭ 20 ಎಕರೆ ವಿಸ್ತೀರ್ಣದಲ್ಲಿ ಅನುಷ್ಠಾನ 40 ನಿವೇಶನಗಳು ಭರ್ತಿ
ಶಿರಸಿಯಲ್ಲಿ ಬೃಹತ್ ಕೈಗಾರಿಕೆ ಸ್ಥಾಪನೆಗೆ ಅವಕಾಶವಿಲ್ಲದ ಕಾರಣ ಬಹುತೇಕ ಉದ್ದಿಮೆದಾರರು ಸಣ್ಣ ಉದ್ದಿಮೆ ಆರಂಭಿಸಲು ಉತ್ಸುಕರಾಗಿದ್ದಾರೆ. ಅದಕ್ಕಾಗಿ ಕೈಗಾರಿಕಾ ವಸಾಹತು ವಿಸ್ತರಣೆಯಾಗಬೇಕಿದೆಸದಾನಂದ ಶರ್ಮಾ ಉದ್ಯಮಿ
ಎರಡನೇ ಹಂತದ ಕೈಗಾರಿಕಾ ವಸಾಹತು ಸ್ಥಾಪಿಸಲು ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮತ್ತೆ ಪ್ರಸ್ತಾವ ಸಲ್ಲಿಸಲಾಗುವುದು. ಈಗಿರುವ ವಸಾಹತುವಿನ ಮೂಲ ಸೌಕರ್ಯ ವೃದ್ಧಿಸಲು ಕೋರಲಾಗುವುದುಅಣ್ಣಪ್ಪ ನಾಯ್ಕ ಸಣ್ಣ ಕೈಗಾರಿಕೆಗಳ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.