ADVERTISEMENT

ಉ.ಕ |ಮತದಾರರ ಪಟ್ಟಿ ಪರಿಷ್ಕರಣೆ: ಆರೂವರೆ ಸಾವಿರ ಹೆಸರು ರದ್ದು

ಮೂರು ತಿಂಗಳಲ್ಲಿ ಕಟ್ಟುನಿಟ್ಟಾಗಿ ಮತದಾರರ ಪಟ್ಟಿ ಪರಿಷ್ಕರಣೆ ಹಿನ್ನೆಲೆ

ಗಣಪತಿ ಹೆಗಡೆ
Published 31 ಜನವರಿ 2024, 5:22 IST
Last Updated 31 ಜನವರಿ 2024, 5:22 IST
<div class="paragraphs"><p>ಮತದಾನ( ಸಾಂದರ್ಭಿಕ ಚಿತ್ರ)</p></div>

ಮತದಾನ( ಸಾಂದರ್ಭಿಕ ಚಿತ್ರ)

   

ಕಾರವಾರ: ಜಿಲ್ಲೆಯ ಮತದಾರರ ಅಂತಿಮ ಪಟ್ಟಿ ಈಚೆಗಷ್ಟೆ ಪ್ರಕಟಗೊಂಡಿದ್ದು, ಚುನಾವಣಾ ಆಯೋಗದ ಕಟ್ಟುನಿಟ್ಟಿನ ಕ್ರಮದ ಪರಿಣಾಮವಾಗಿ ಕಳೆದ ಮೂರು ತಿಂಗಳಿನಲ್ಲಿ 6,978 ಮತದಾರರ ಹೆಸರನ್ನು ಪಟ್ಟಿಯಿಂದ ರದ್ದುಪಡಿಸಲಾಗಿದೆ.

ಅ.27ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಂಡ ಅವಧಿಯಿಂದ ಜ.22ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಗೊಂಡ ಅವಧಿಯೊಳಗೆ ಮತದಾರರ ಪಟ್ಟಿಯಿಂದ ಹಲವು ಕಾರಣದಿಂದ ಈ ಹೆಸರುಗಳನ್ನು ಕೈಬಿಡಲಾಗಿದೆ. ಮೃತಪಟ್ಟವರು, ವರ್ಗಾವಣೆಗೊಂಡವರು, ವಿವಾಹವಾಗಿ ಬೇರೆ ಜಿಲ್ಲೆಗೆ ವಲಸೆ ಹೋದವರ ಹೆಸರು ಕೈಬಿಡಲಾಗಿದೆ.

ADVERTISEMENT

ಅಲ್ಲದೆ, ಡೆಮಾಗ್ರಫಿಕಲಿ ಸಿಮಿಲರ್ ಎಂಟ್ರಿ (ಡಿ.ಸಿ.ಇ), ಫೋಟೊ ಸಿಮಿಲರ್ ಎಂಟ್ರಿ (ಪಿ.ಸಿ.ಇ) ಹೊಂದಿರುವ 200ಕ್ಕೂ ಹೆಚ್ಚು ಮತದಾರರ ಹೆಸರು ಕೂಡ ಪಟ್ಟಿಯಿಂದ ಹೊರಬಿದ್ದಿದೆ.

‘ಪ್ರತಿ ಬಾರಿಯೂ ಸರಾಸರಿ ನಾಲ್ಕರಿಂದ ಆರು ಸಾವಿರದಷ್ಟು ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಡುವ, ಹೊಸ ಮತದಾರರನ್ನು ಸೇರಿಸುವ ಪ್ರಕ್ರಿಯೆ ನಡೆಯುತ್ತದೆ. ಈ ಬಾರಿ ಮತದಾರರ ಪಟ್ಟಿಯಲ್ಲಿ ಪರಿಷ್ಕರಣೆಗೆ ಹೆಚ್ಚು ಸಮಯಾವಕಾಶವೂ ಸಿಕ್ಕಿದ್ದರಿಂದ ಕೂಲಂಕಷವಾಗಿ ಪರಿಶೀಲಿಸಿ ಹಲವು ಹೆಸರುಗಳನ್ನು ತೆಗೆದು ಹಾಕಲಾಗಿದೆ. ಆದರೆ, ಪಟ್ಟಿಯಿಂದ ಕೈಬಿಟ್ಟ ಬಹುತೇಕ ಹೆಸರುಗಳು ಮೃತಪಟ್ಟವರು ಮತ್ತು ವಲಸೆ ಹೋದವರದ್ದು’ ಎಂದು ಚುನಾವಣಾ ಶಾಖೆಯ ಅಧಿಕಾರಿಯೊಬ್ಬರು ಹೇಳಿದರು.

‘ತಾಂತ್ರಿಕ ದೋಷದಿಂದ 5,677 ಮತದಾರರ ಫೋಟೊ ಗೊಂದಲ ಉಂಟಾಗಿತ್ತು. ಒಬ್ಬರನ್ನೇ ಹೋಲುವ ಭಾವಚಿತ್ರಗಳು ಪಟ್ಟಿಯಲ್ಲಿ ಎರಡು ಅಥವಾ ಮೂರು ಕಡೆ ದಾಖಲಾಗಿದ್ದವು. ಕೆಲವರ ಹೆಸರುಗಳು ಎರಡು ಬೇರೆ ಬೇರೆ ಸ್ಥಳದಲ್ಲಿ ಪತ್ತೆಯಾಗಿದ್ದವು. ಅಂತಹವರಿಗೆ ನೋಟಿಸ್ ಜಾರಿ ಮಾಡಿ ಖಚಿತ ಮಾಹಿತಿ ಒದಗಿಸಲು ಸೂಚಿಸಲಾಗಿತ್ತು. ಸೂಕ್ತ ಮಾಹಿತಿ ನೀಡದ 200ಕ್ಕೂ ಹೆಚ್ಚು ಜನರ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಆದರೆ ಅವರ ಹೆಸರು ಅವರು ನೆಲೆಸಿದ ಪ್ರದೇಶದ ಮತದಾರರ ಪಟ್ಟಿಯಲ್ಲಿರುವಂತೆ ನೋಡಿಕೊಳ್ಳಲಾಗಿದೆ’ ಎಂದೂ ಹೇಳಿದರು.

ಕಳೆದ ಮೂರು ತಿಂಗಳ ಅವಧಿಯಲ್ಲಿ 15,879 ಜನರ ಹೆಸರು ಮತದಾರರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಂಡಿದೆ. ಈ ಪೈಕಿ ಈಗಷ್ಟೆ 18 ವರ್ಷ ದಾಟಿದ ಯುವ ಮತದಾರರ ಸಂಖ್ಯೆ ಹೆಚ್ಚಿದೆ. ಕೆಲವೇ ಸಂಖ್ಯೆಯಲ್ಲಿ ಅನ್ಯ ಜಿಲ್ಲೆಯಿಂದ ವಲಸೆ ಬಂದ ಮತದಾರರು ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.