ADVERTISEMENT

ಉತ್ತರ ಕನ್ನಡ | ಮುಂಗಾರಿನ ರಭಸಕ್ಕೆ ₹ 61 ಕೋಟಿ ನಷ್ಟ

ಅಲ್ಪ ಅವಧಿಯಲ್ಲಿ ವಾಡಿಕೆಗಿಂತ ಶೇ 34 ರಷ್ಟು ಹೆಚ್ಚು ಮಳೆ

ಗಣಪತಿ ಹೆಗಡೆ
Published 24 ಜುಲೈ 2024, 5:27 IST
Last Updated 24 ಜುಲೈ 2024, 5:27 IST
ಗೋಕರ್ಣದಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಕೆಲ ದಿನಗಳ ಹಿಂದೆ ವಿದ್ಯುತ್ ಪರಿವರ್ತಕವೊಂದು ಮುರಿದು ಬಿದ್ದು ಹಾನಿಗೀಡಾಗಿತ್ತು.
ಗೋಕರ್ಣದಲ್ಲಿ ಗಾಳಿ ಮಳೆಯ ಅಬ್ಬರಕ್ಕೆ ಕೆಲ ದಿನಗಳ ಹಿಂದೆ ವಿದ್ಯುತ್ ಪರಿವರ್ತಕವೊಂದು ಮುರಿದು ಬಿದ್ದು ಹಾನಿಗೀಡಾಗಿತ್ತು.   

ಕಾರವಾರ: ವಾಡಿಕೆಗಿಂತಲೂ ಅಧಿಕ ಮಳೆ ಬಿದ್ದಿರುವ ಪರಿಣಾಮ ಮುಂಗಾರಿನ ಅವಧಿಯ ಒಂದೂವರೆ ತಿಂಗಳಿನಲ್ಲಿಯೇ ಜಿಲ್ಲೆಯಲ್ಲಿ ಹಲವು ಸೌಕರ್ಯಗಳು ಹಾನಿಗೀಡಾಗಿದ್ದು, ಸುಮಾರು ₹ 61.45 ಕೋಟಿಯಷ್ಟು ಮೊತ್ತದ ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ.

ಜಿಲ್ಲೆಯಲ್ಲಿ ಜೂನ್ ಆರಂಭದಿಂದ ಜುಲೈ ಮಧ್ಯಂತರದವರೆಗೆ ಸರಾಸರಿ 133.9 ಸೆಂ.ಮೀ ವಾಡಿಕೆ ಮಳೆ ಬೀಳುತ್ತಿತ್ತು. ಈ ಬಾರಿ 1,79.7 ಸೆಂ.ಮೀ ಮಳೆ ಸುರಿದಿದ್ದು, ವಾಡಿಕೆಗಿಂತ ಶೇ 34 ರಷ್ಟು ಹೆಚ್ಚು ಪ್ರಮಾಣದಲ್ಲಿ ವರ್ಷಧಾರೆ ಆಗಿದೆ. ಭೂಕುಸಿತ, ಪ್ರವಾಹ ಸೇರಿದಂತೆ ಹಲವು ಅವಾಂತರಗಳನ್ನು ಈ ಮಳೆ ಸೃಷ್ಟಿಸಿದೆ.

ಜೂನ್ ತಿಂಗಳಿನಲ್ಲಿ ಸುರಿದ ಮಳೆಗೆ ಅಷ್ಟಾಗಿ ಹಾನಿ ಇರದಿದ್ದರೂ ಜುಲೈ ತಿಂಗಳಿನಲ್ಲಿ ಸರಿಯುತ್ತಿರುವ ಭಾರಿ ಮಳೆಗೆ ಜಿಲ್ಲೆಯ ವಿವಿಧೆಡೆ ನಿರಂತರವಾಗಿ ಹಾನಿ ಉಂಟಾಗುತ್ತಿದೆ. ಗಂಗಾವಳಿ, ಅಘನಾಶಿನಿ, ಗುಂಡಬಾಳ ನದಿಗಳಲ್ಲಿ ಉಂಟಾದ ಪ್ರವಾಹದಿಂದ ಎರಡೂವರೆ ಸಾವಿರಕ್ಕೂ ಹೆಚ್ಚು ಜನರು ಸಂತ್ರಸ್ತರಾಗಿ 19 ಕಾಳಜಿ ಕೇಂದ್ರಗಳಲ್ಲಿ ಆಸರೆ ಪಡೆದಿದ್ದರು.

ADVERTISEMENT

ಕೃಷಿ, ತೋಟಗಾರಿಕೆ ಕ್ಷೇತ್ರಕ್ಕೆ ಹಾನಿಯುಂಟಾಗಿದ್ದು, ಸುಮಾರು 499 ಹೆಕ್ಟೇರ್ ಕೃಷಿ ಭೂಮಿ ಮಳೆಯಿಂದಾಗಿ ಹಾನಿಗೀಡಾಗಿದೆ. ಘಟ್ಟದ ಮೇಲಿನ ಮತ್ತು ಹೊನ್ನಾವರದ ಗುಂಡಬಾಳ ನದಿತೀರದ ಅಡಿಕೆ ತೋಟಗಳಿಗೆ ಹಾನಿ ಉಂಟಾಗಿದೆ.

ಗಾಳಿ–ಮಳೆಯ ಅಬ್ಬರಕ್ಕೆ ಐದು ಸಾವಿರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿದ್ದರೆ, 500ಕ್ಕೂ ಅಧಿಕ ವಿದ್ಯುತ್ ಪರಿವರ್ತಕಗಳಿಗೆ ಹಾನಿಯುಂಟಾಗಿತ್ತು. 169 ಕಿ.ಮೀ ಉದ್ದದ ವಿದ್ಯುತ್ ತಂತಿಗೂ ಹಾನಿಯುಂಟಾಗಿದ್ದು, ಹೆಸ್ಕಾಂನ ಶಿರಸಿ ವೃತ್ತವು ₹ 10 ಕೋಟಿಗೂ ಅಧಿಕ ನಷ್ಟ ಎದುರಿಸಿದೆ.

290 ಕಿ.ಮೀ ಗೂ ಹೆಚ್ಚಿನ ಉದ್ದದ ರಸ್ತೆ, 49ರಷ್ಟು ಸೇತುವೆ ಮತ್ತು ಅಡ್ಡ ಚರಂಡಿಗಳು, ಶಾಲೆ, ಅಂಗನವಾಡಿ, ಸರ್ಕಾರಿ ಕಟ್ಟಡಗಳು ಸೇರಿದಂತೆ ಸಾರ್ವಜನಿಕ ಆಸ್ತಿಗಳಿಗೆ ಹಾನಿ ಪ್ರಮಾಣ ಕಳೆದೊಂದು ತಿಂಗಳಿನಲ್ಲಿ ವ್ಯಾಪಕವಾಗಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

‘ಕಡಿಮೆ ಅವಧಿಯಲ್ಲಿ ಸುರಿದ ಹೆಚ್ಚು ಮಳೆಯಿಂದಾಗಿ ದೊಡ್ಡ ಪ್ರಮಾಣದಲ್ಲಿ ಸರ್ಕಾರಿ ಆಸ್ತಿ ನಷ್ಟವಾಗಿದೆ. ಮನೆ, ಜಮೀನು, ಜಾನುವಾರುಗಳ ಹಾನಿಯನ್ನೂ ಲೆಕ್ಕ ಹಾಕಿದರೆ ಹಾನಿ ಪ್ರಮಾಣ ಇನ್ನಷ್ಟು ಹೆಚ್ಚಬಹುದು’ ಎಂದು ತಿಳಿಸಿದರು.

‌ನಿರಂತರ ಭೂಕುಸಿತ: 9 ಸಾವು

ಮಳೆ ರಭಸಗೊಂಡ ಬೆನ್ನಲ್ಲೇ ಜಿಲ್ಲೆಯಲ್ಲಿ ಭೂಕುಸಿತ ಘಟನೆಗಳು ಹೆಚ್ಚುತ್ತಿವೆ. ಅಂಕೋಲಾದ ಶಿರೂರು ಬಳಿ ಗುಡ್ಡ ಕುಸಿದು ಎಂಟು ಮಂದಿ ಮೃತಪಟ್ಟಿದ್ದಾರೆ. ಕಾರವಾರದ ಕಿನ್ನರದಲ್ಲಿ ಗುಡ್ಡ ಕುಸಿದು ವೃದ್ಧರೊಬ್ಬರು ಮೃತಪಟ್ಟಿದ್ದಾರೆ. ಮಂದ್ರಾಳಿ ಶಿರಸಿಯ ರಾಗಿಹೊಸಳ್ಳಿ ಸಂಪಖಂಡ ಮೊಸಳೆಗುಂಡಿ ಕುಮಟಾದ ಉಳ್ಳೂರುಮಠ ಬರ್ಗಿ ಯಾಣ ಗೋಕರ್ಣ ಸಮೀಪದ ದೇವರಬಾವಿ ಹೊನ್ನಾವರದ ಕರ್ನಲ್ ಹಿಲ್ ಖರ್ವಾ ಭಾಸ್ಕೇರಿ ಸೇರಿದಂತೆ ಹಲವೆಡೆ ಗುಡ್ಡ ಕುಸಿತದ ಘಟನೆಗಳು ನಡೆದಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.