ADVERTISEMENT

ಮೊದಲ ಹಂತದ ಚುನಾವಣೆಗೆ 4,432 ನಾಮಪತ್ರ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2020, 16:20 IST
Last Updated 12 ಡಿಸೆಂಬರ್ 2020, 16:20 IST

ಕಾರವಾರ: ಜಿಲ್ಲೆಯಲ್ಲಿ ಡಿ.22ರಂದು ನಡೆಯಲಿರುವ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಗೆ ಒಟ್ಟು 4,432 ನಾಮಪತ್ರಗಳು ಸಲ್ಲಿಕೆಯಾಗಿವೆ. ಆದರೆ, ಕಾರವಾರ ತಾಲ್ಲೂಕಿನ ಎರಡು, ಹೊನ್ನಾವರ ಮತ್ತು ಭಟ್ಕಳ ತಾಲ್ಲೂಕಿನ ತಲಾ ಒಂದು ಕ್ಷೇತ್ರಗಳಿಗೆ ಒಂದೂ ಉಮೇದುವಾರಿಕೆ ಬಂದಿಲ್ಲ.

ಸ್ಥಳೀಯ ಮಟ್ಟದ ಚುನಾವಣೆಗೆ ಇಷ್ಟೊಂದು ಪ್ರಮಾಣದಲ್ಲಿ ಉಮೇದುವಾರಿಕೆ ಇದೇ ಮೊದಲ ಬಾರಿಗೆ ಕಂಡುಬಂದಿದೆ. ನಾಮಪತ್ರ ಸಲ್ಲಿಕೆಯ ಮೊದಲ ದಿನವಾದ ಡಿ.7ರಂದೇ 40ಕ್ಕೂ ಅಧಿಕ ನಾಮಪತ್ರಗಳು ಸಲ್ಲಿಕೆಯಾಗಿದ್ದವು. ಕೊನೆಯ ದಿನಗಳಾದ ಡಿ.9 ಮತ್ತು 10ರಂದು 1,500ಕ್ಕೂ ಅಧಿಕ ಉಮೇದುವಾರಿಕೆಗಳು ಬಂದಿದ್ದವು.

ಶನಿವಾರ ಮಧ್ಯಾಹ್ನ 3 ಗಂಟೆಗೆ ನಾಮಪತ್ರ ಸಲ್ಲಿಕೆಯ ಅವಧಿ ಮುಕ್ತಾಯವಾಗಿದೆ. ಹೊನ್ನಾವರ ತಾಲ್ಲೂಕಿನಲ್ಲಿ 1,072, ಕುಮಟಾ ತಾಲ್ಲೂಕಿನಲ್ಲಿ 1,068, ಭಟ್ಕಳ ತಾಲ್ಲೂಕಿನಲ್ಲಿ 853, ಅಂಕೋಲಾ ತಾಲ್ಲೂಕಿನಲ್ಲಿ 745 ಹಾಗೂ ಕಾರವಾರ ತಾಲ್ಲೂಕಿನಲ್ಲಿ 694 ಉಮೇದುವಾರಿಕೆಗಳು ಕಂಡುಬಂದಿವೆ.

ADVERTISEMENT

ನಾಮಪತ್ರಗಳನ್ನು ಹಿಂಪಡೆಯಲು ಡಿ.14 ಕೊನೆಯ ದಿನವಾಗಿದೆ. ನಾಮಪತ್ರಗಳ ಪರಿಶೀಲನೆಯು ಶನಿವಾರ ನಡೆದಿದ್ದು, ಸ್ವೀಕೃತ ಮತ್ತು ತಿರಸ್ಕೃತವಾದವುಗಳ ಮಾಹಿತಿ ತಿಳಿದುಬರಬೇಕಿದೆ. ಕರಾವಳಿಯ ಐದು ತಾಲ್ಲೂಕುಗಳಲ್ಲಿ 101 ಗ್ರಾಮ ಪಂಚಾಯಿತಿಗಳ 1,380 ಕ್ಷೇತ್ರಗಳಿಗೆ ಡಿ.22ರಂದು ಮತದಾನ ನಡೆಯಲಿದೆ.

31 ತಿರಸ್ಕೃತ

ಭಟ್ಕಳ ತಾಲ್ಲೂಕಿನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆಗೆ ಸಲ್ಲಿಕೆಯಾದ 31 ನಾಮಪತ್ರಗಳು ತಿರಸ್ಕೃತಗೊಂಡಿವೆ.

ಕಾಯ್ಕಿಣಿಯಲ್ಲಿ 9, ಬೈಲೂರಿನಲ್ಲಿ 6, ಮಾವಿನಕುರ್ವಾ ಮತ್ತುಮಾವಿನಕುರ್ವಾದಲ್ಲಿ ತಲಾ 4, ಮುಂಡಳ್ಳಿಯಲ್ಲಿ 3, ಬೆಳಕೆ, ಬೇಂಗ್ರೆ, ಮಾವಳ್ಳಿ– 1 ಗ್ರಾಮದಲ್ಲಿ ಹಾಗೂ ಯಲ್ವಡಿಕವೂರದಲ್ಲಿ ತಲಾ 2 ಹಾಗೂ ಹಾಡುವಳ್ಳಿಯಲ್ಲಿ ಒಂದು ನಾಮಪತ್ರಗಳು ಕ್ರಮಬದ್ಧವಾಗಿರಲಿಲ್ಲ.

ಮಾವಳ್ಳಿ 2 – ಕೋಟದಮಕ್ಕಿ ಅನುಸೂಚಿತ ಜಾತಿ ಕ್ಷೇತ್ರಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ. ನಾಮಪತ್ರ ಹಿಂಪಡೆಯಲುಡಿ.14 ಕೊನೆಯ ದಿನವಾಗಿದೆ.

ಎರಡನೇ ಹಂತದ ಚುನಾವಣೆ

ಉತ್ತರ ಕನ್ನಡದ ಗ್ರಾಮ ಪಂಚಾಯಿತಿಗಳ ಎರಡನೇ ಹಂತದ ಚುನಾವಣೆಗೆ ಜಿಲ್ಲೆಯಲ್ಲಿ ಶನಿವಾರ 178 ನಾಮಪತ್ರಗಳು ಸಲ್ಲಿಕೆಯಾಗಿವೆ.

ಶಿರಸಿ ತಾಲ್ಲೂಕಿನಲ್ಲಿ 55, ಸಿದ್ದಾಪುರ ತಾಲ್ಲೂಕಿನಲ್ಲಿ 40, ಜೊಯಿಡಾ ತಾಲ್ಲೂಕಿನಲ್ಲಿ 37, ಯಲ್ಲಾಪುರ ತಾಲ್ಲೂಕಿನಲ್ಲಿ 28, ಮುಂಡಗೋಡ ತಾಲ್ಲೂಕಿನಲ್ಲಿ 13, ಹಳಿಯಾಳ ತಾಲ್ಲೂಕಿನಲ್ಲಿ 5 ಉಮೇದುವಾರಿಕೆಗಳು ಬಂದಿವೆ.

ಎರಡನೇ ಹಂತದಲ್ಲಿ 126 ಗ್ರಾಮ ಪಂಚಾಯಿತಿಗಳ 1,282 ಕ್ಷೇತ್ರಗಳಿಗೆ ಡಿ.27ರಂದು ಚುನಾವಣೆ ನಡೆಯಲಿದೆ. 1,073 ಕ್ಷೇತ್ರಗಳಿಗೆ ಇನ್ನೂ ಒಂದೂ ನಾಮಪತ್ರ ಸಲ್ಲಿಕೆಯಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.