ADVERTISEMENT

ಕದ್ರಾ ಜಲಾಶಯದಿಂದ ಕಾಳಿ ನದಿಗೆ 40,331 ಕ್ಯುಸೆಕ್‌ ನೀರು

​ಪ್ರಜಾವಾಣಿ ವಾರ್ತೆ
Published 15 ಜುಲೈ 2022, 12:23 IST
Last Updated 15 ಜುಲೈ 2022, 12:23 IST
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ ಎಂಟು ಗೇಟ್‌ಗಳ ಮೂಲಕ ಕಾಳಿ ನದಿಗೆ ಶುಕ್ರವಾರ ನೀರು ಹರಿಸಲಾಯಿತು
ಕಾರವಾರ ತಾಲ್ಲೂಕಿನ ಕದ್ರಾ ಜಲಾಶಯದ ಎಂಟು ಗೇಟ್‌ಗಳ ಮೂಲಕ ಕಾಳಿ ನದಿಗೆ ಶುಕ್ರವಾರ ನೀರು ಹರಿಸಲಾಯಿತು   

ಕಾರವಾರ: ತಾಲ್ಲೂಕಿನ ಕದ್ರಾ ಜಲಾಶಯಕ್ಕೆ ಶುಕ್ರವಾರ ಒಳಹರಿವು ಮತ್ತಷ್ಟು ಹೆಚ್ಚಿದೆ. ಆದ್ದರಿಂದ ಹೊರ ಹರಿವನ್ನೂ ಅದೇ ಪ್ರಮಾಣದಲ್ಲಿ ಏರಿಕೆ ಮಾಡಲಾಗಿದೆ. ಜಲಾಶಯದ ಎಂಟು ಗೇಟ್‌ಗಳನ್ನು ತೆರೆಯಲಾಗಿದ್ದು, ಕಾಳಿ ನದಿಗೆ ಒಟ್ಟು 40,331 ಕ್ಯುಸೆಕ್‌ಗಳಷ್ಟು ನೀರನ್ನು ಹರಿಸಲಾಗಿದೆ.

ದಾಂಡೇಲಿ, ಬೊಮ್ಮನಹಳ್ಳಿ, ಕೊಡಸಳ್ಳಿ ಭಾಗದಲ್ಲಿ ನದಿಯ ಜಲಾನಯನ ಪ್ರದೇಶಗಳಲ್ಲಿ ಕೆಲವು ದಿನಗಳಿಂದ ವ್ಯಾಪಕ ಮಳೆಯಾಗುತ್ತಿದೆ. ಬೊಮ್ಮನಹಳ್ಳಿ ಪಿಕಪ್ ಜಲಾಶಯವು ಈಗಾಗಲೇ ಭರ್ತಿಯಾಗುವ ಹಂತಕ್ಕೆ ತಲುಪಿದ್ದು, ಗುರುವಾರ 3 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿತ್ತು. ಶುಕ್ರವಾರ ಬೆಳಿಗ್ಗೆ 8ರ ವೇಳೆಗೆ ಹೊರಹರಿವು7,196 ಕ್ಯುಸೆಕ್‌ಗಳಿಗೆ ಏರಿಕೆಯಾಗಿತ್ತು. ಅದು ಕೆಳಭಾಗದಲ್ಲಿರುವ ಕೊಡಸಳ್ಳಿ ಜಲಾಶಯಕ್ಕೆ ಹರಿದು ಬರುತ್ತದೆ.

ಕೊಡಸಳ್ಳಿ ಜಲಾಶಯದಿಂದ 13,878 ಕ್ಯುಸೆಕ್‌ಗಳಷ್ಟು ನೀರನ್ನು ಕೆಳಭಾಗಕ್ಕೆ ಹರಿಸಲಾಗಿದೆ. ಇದರೊಂದಿಗೆ ಮಳೆ ನೀರು ಕೂಡ ಸೇರಿಕೊಂಡು ಕದ್ರಾ ಜಲಾಶಯಕ್ಕೆ 38 ಸಾವಿರ ಕ್ಯುಸೆಕ್‌ಗಳಿಗೂ ಅಧಿಕ ಒಳಹರಿವು ದಾಖಲಾಗಿದೆ. ಹಾಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಜಲಾಶಯದ ಎಂಟು ಗೇಟ್‌ಗಳನ್ನು 0.75 ಮೀಟರ್‌ಗಳಷ್ಟು ತೆರೆದು ನದಿಗೆ ನೀರು ಹರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ADVERTISEMENT

ಜಲಾಶಯದ ಕೆಳಭಾಗದ ನಿವಾಸಿಗಳಿಗೆ ಸದ್ಯಕ್ಕೆ ಪ್ರವಾಹದ ಆತಂಕವಿಲ್ಲ. ಆದರೆ, ಜೋರಾಗಿ ಮಳೆ ಮುಂದುವರಿದು ಜಲಾಶಯದಿಂದ ಮತ್ತಷ್ಟು ಪ್ರಮಾಣದಲ್ಲಿ ನೀರು ಹರಿಸಿದರೆ ಆಗ ನದಿ ಉಕ್ಕೇರುವ ಸಾಧ್ಯತೆಯಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.