ADVERTISEMENT

ಮಿರ್ಜಾನ್‌ನಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ: ಆರೋಗ್ಯ ಸಚಿವ ಡಾ. ಸುಧಾಕರ್

ಕುಮಟಾದಲ್ಲಿ ಸ್ಥಳ ಪರಿಶೀಲಿಸಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2022, 15:38 IST
Last Updated 11 ಅಕ್ಟೋಬರ್ 2022, 15:38 IST
ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಸಂಬಂಧ ಕುಮಟಾ ತಾಲ್ಲೂಕಿನ ಮಿರ್ಜಾನ್‌ನಲ್ಲಿ ಸಚಿವ ಡಾ.ಸುಧಾಕರ್ ಮಂಗಳವಾರ ಸ್ಥಳ ಪರಿಶೀಲಿಸಿದರು. ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇದ್ದಾರೆ
ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಸ್ಥಾಪನೆ ಸಂಬಂಧ ಕುಮಟಾ ತಾಲ್ಲೂಕಿನ ಮಿರ್ಜಾನ್‌ನಲ್ಲಿ ಸಚಿವ ಡಾ.ಸುಧಾಕರ್ ಮಂಗಳವಾರ ಸ್ಥಳ ಪರಿಶೀಲಿಸಿದರು. ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಇದ್ದಾರೆ   

ಕುಮಟಾ: ‘ಸರ್ಕಾರವು ಜನರಿಗೆ ಮಾತು ಕೊಟ್ಟಂತೆ ಕುಮಟಾದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಿಸುವ ಬಗ್ಗೆ ಸಮೀಪದ ಮಿರ್ಜಾನಿನಲ್ಲಿ ಜಾಗ ನಿಗದಿಪಡಿಸಲಾಗಿದೆ. ಸರ್ಕಾರದಿಂದಲೇ ನಿರ್ಮಿಸಲಾಗುವುದು’ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಹೇಳಿದರು.

ಶಾಸಕ ದಿನಕರ ಶೆಟ್ಟಿ ಅವರ ಮನೆಗೆ ಮಂಗಳವಾರ ಭೇಟಿ ನೀಡಿದಾಗ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕುಮಟಾದಂಥ ಪ್ರದೇಶದಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ನಿರ್ಮಾಣವಾದರೆ ತಜ್ಞ ವೈದ್ಯರ ಸೇವೆ ಪಡೆಯಲು ದೊಡ್ಡ ಆಸ್ಪತ್ರೆಗಳ ಸಹಭಾಗಿತ್ವ ಪಡೆಯಲಾಗುವುದು. ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಶೀಘ್ರವೇ ಘೋಷಿಸಲಾಗುವುದು’ ಎಂದರು.

ಕುಮಟಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ, ‘ಕುಮಟಾ ಆಸ್ಪತ್ರೆಯ ಕಟ್ಟಡ ಹಳೆಯದಾದರೂ ಶುಚಿಯಾಗಿಟ್ಟಿರುವುದು ಶ್ಲಾಘನೀಯ. ಇಲ್ಲಿ ಶೂಶ್ರೂಷ ವಿಭಾಗದಲ್ಲಿ ಪೂರ್ಣ ಪ್ರಮಾಣದಲ್ಲಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಎಲ್ಲ 100 ಹಾಸಿಗೆಗಳಿಗೆ ಆಮ್ಲಜನಕ ಸೌಲಭ್ಯ, 25 ತುರ್ತು ನಿಗಾ ಹಾಸಿಗೆಗಳನ್ನು ಹೊಂದಿರುವುದು ವಿಶೇಷ. ಇಲ್ಲಿ ಉತ್ತಮವಾದ ಖಾಸಗಿ ಆಸ್ಪತ್ರೆ ಇಲ್ಲದಿರುವ ಕಾರಣ ಸುತ್ತಲಿನ ಜನರಿಗೆ ತೃತೀಯ ಹಂತದ ಸೇವೆ ಒದಗಿಸಲು ಶೀಘ್ರ ಉತ್ಕೃಷ್ಟವಾದ ಆಸ್ಪತ್ರೆ ಬರುತ್ತಿರುವುದು ಹೆಮ್ಮೆಯ ಸಂಗತಿ’ ಎಂದರು.

ADVERTISEMENT

‘ಸರ್ಕಾರಿ ಆಸ್ಪತ್ರೆಯ ತಜ್ಞ ವೈದ್ಯರು ಆಸ್ಪತ್ರೆಯಲ್ಲಿಯೇ ಲಭ್ಯವಿರುವ ಹೆಚ್ಚೆಚ್ಚು ಸೇವೆಗಳನ್ನು ಒದಗಿಸಲು ಮುಂದೆ ಬರಬೇಕು. ಪ್ರತಿ ವಾರಕ್ಕೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಿ ಗುರಿ ನಿಗದಿಪಡಿಸಬೇಕು' ಎಂದು ಸೂಚಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ದಿನಕರ ಶೆಟ್ಟಿ, ರೂಪಾಲಿ ನಾಯ್ಕ, ಇಲಾಖೆ ಆಯುಕ್ತ ಡಿ.ರಂದೀಪ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ ಸಿ.ಇ.ಒ ಪ್ರಿಯಾಂಗಾ, ಉಪವಿಭಾಗಾಧಿಕಾರಿ ರಾಘವೇಂದ್ರ ಜಗಳಾಸರ್, ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ ನಾಯ್ಕ, ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಆಜ್ಞಾ ನಾಯಕ, ಡಾ. ಶ್ರೀನಿವಾಸ ನಾಯಕ, ಡಾ. ನಾಗರತ್ನಾ ಪಟಗಾರ, ಡಾ. ಪಿ.ಬಿ. ಭಾರತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.