ADVERTISEMENT

ಮುಂಡಗೋಡ: ಬೀದಿ ನಾಯಿಗಳ ನಿಯಂತ್ರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 6:55 IST
Last Updated 12 ಅಕ್ಟೋಬರ್ 2025, 6:55 IST
ಮುಂಡಗೋಡ ಪಟ್ಟಣದ ಹೊಸ ಓಣಿಯಲ್ಲಿ ಬೀದಿ ನಾಯಿಗಳ ಗುಂಪು ನಿಂತಿರುವುದು
ಮುಂಡಗೋಡ ಪಟ್ಟಣದ ಹೊಸ ಓಣಿಯಲ್ಲಿ ಬೀದಿ ನಾಯಿಗಳ ಗುಂಪು ನಿಂತಿರುವುದು   

ಮುಂಡಗೋಡ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಗುಂಪು ಗುಂಪಾಗಿ ಓಡಾಡುವ ನಾಯಿಗಳಿಂದ ಜನರು ಆತಂಕದಿಂದಲೇ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಬಸ್ ನಿಲ್ದಾಣ, ಜ್ಯೂನಿಯ‌ರ್ ಕಾಲೇಜು ರಸ್ತೆ, ಶಿವಾಜಿ ವೃತ್ತ ಸೇರಿದಂತೆ ಜನನೀಬಿಡ ಪ್ರದೇಶಗಳಲ್ಲಿ ಓಡಾಡಲು ಹೆದರುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಮನೆಯ ಎದುರು ಮಕ್ಕಳು ಆಟವಾಡುತ್ತಿರುವಾಗ ಬೀದಿ ನಾಯಿಗಳು ಬಂದು ಮಕ್ಕಳನ್ನು ಹೆದರಿಸುತ್ತಿವೆ. ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ನಿಯಂತ್ರಣಕ್ಕೆ ಒತ್ತಾಯಿಸುತ್ತಾ ಬಂದಿದ್ದರೂ. ಆದರೆ, ಸಂಬಂಧಿಸಿದ ಅಧಿಕಾರಿಗಳು ಟೆಂಡರ್‌ ಕರೆಯಲಾಗುವುದು, ನಿಯಂತ್ರಿಸಲಾಗುವುದು ಎಂಬ ಹಾರಿಕೆ  ಉತ್ತರದಿಂದಲೇ ತಿಂಗಳುಗಳನ್ನು ಕಳೆದಿದ್ದಾರೆ. ಇದು, ಈಗಲೂ ಮುಂದುವರೆದಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.

‘ಬಸ್‌ ನಿಲ್ದಾಣದಲ್ಲಿಯೂ ನಾಯಿಗಳ ಹಿಂಡು ಓಡಾಡುತ್ತಿವೆ. ನಾಯಿಗಳನ್ನು ಹೆದರಿಸಿ, ಓಡಿಸುತ್ತಾ ಬಸ್‌ಗಾಗಿ ಕಾಯುವ ಸ್ಥಿತಿ ಉಂಟಾಗಿದೆ. ಕೆಲವು ತಿಂಗಳ ಹಿಂದೆ ಪಟ್ಟಣದ ವಿವಿಧೆಡೆ ಮಕ್ಕಳಿಗೆ ಬೀದಿ ನಾಯಿ ಕಚ್ಚಿ ಗಾಯಗೊಳಿಸಿದ ಘಟನೆಗಳು ಜರುಗಿವೆ’ ಎಂದು ಸಾಮಾಜಿಕ ಕಾರ್ಯಕರ್ತ ಪ್ರಕಾಶ ಬಡಿಗೇರ ದೂರಿದರು.

ADVERTISEMENT

‘ಬೀದಿ ನಾಯಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ. ಅವುಗಳ ನಿಯಂತ್ರಣಕ್ಕೆ ಈಗಾಗಲೇ ಸಾಮಾನ್ಯ ಸಭೆಗಳಲ್ಲಿ ಸದಸ್ಯರು ಒಕ್ಕೋರಲಿನಿಂದ ಆಗ್ರಹಿಸಿದ್ದಾರೆ. ನಾಯಿಗಳ ನಿಯಂತ್ರಣಕ್ಕೂ ಕೆಲವು ನಿಯಮಗಳನ್ನು ಪಾಲನೆ ಮಾಡಬೇಕಾಗಿದೆ’ ಎಂದು ಪಟ್ಟಣ ಪಂಚಾಯಿತಿ ಸದಸ್ಯ ಮಂಜುನಾಥ ಹರಮಲಕರ ಹೇಳಿದರು.

‘ಪಟ್ಟಣದ ಹೊರವಲಯದ ರಾಜ್ಯ ಹೆದ್ದಾರಿ ಪಕ್ಕ ಕೆಲವರು ತ್ಯಾಜ್ಯ ಎಸೆಯುತ್ತಿದ್ದು, ಬೀದಿ ನಾಯಿಗಳ ಗುಂಪುಗಾರಿಕೆಗೆ ಕಾರಣವಾಗಿದೆ. ಗುಂಪು ಗುಂಪಾಗಿ ಕಂಡುಬರುವ ನಾಯಿಗಳಿಂದ ಬೈಕ್ ಸವಾರರು ಬೆಳಿಗ್ಗೆ ಹಾಗೂ ಸಂಜೆ ವಾಕಿಂಗ್ ಮಾಡುವವರಲ್ಲಿ ಆತಂಕ ಸೃಷ್ಟಿಸಿದೆ’ ಎಂದು ಅವರು ಹೇಳಿದರು.

ಬೀದಿ ನಾಯಿಗಳ ಹಾವಳಿ ಕುರಿತು ದೂರುಗಳು ಬಂದಿದ್ದು ಅವುಗಳ ನಿಯಂತ್ರಣಕ್ಕೆ ಈಗಾಗಲೇ ಟೆಂಡರ್‌ ಕರೆಯಲಾಗಿದ್ದು ಪ್ರಕ್ರಿಯೆ ಜಾರಿಯಲ್ಲಿದೆ
ಸಂತೋಷಕುಮಾರ ಎಚ್‌. ಮುಖ್ಯಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.