ಶಿರಸಿ: ನಗರ ಪ್ರದೇಶಕ್ಕೆ ಹೊಂದಿಕೊಂಡಿರುವ ಕೆಲ ಗ್ರಾಮ ಪಂಚಾಯಿತಿಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ 9 ವರ್ಷಗಳಿಂದಲೂ ನನೆಗುದಿಗೆ ಬಿದ್ದಿದೆ.
ನಗರದ ಅಂಚಿನಲ್ಲೇ ಇರುವ ಕೆಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು 2016ರಲ್ಲಿಯೇ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಂದ ಒಪ್ಪಿಗೆ ಸಿಕ್ಕಿದ್ದರೂ, ಈವರೆಗೆ ಸೇರ್ಪಡೆ ಪ್ರಕ್ರಿಯೆ ನಡೆದಿಲ್ಲ. ಜನವಸತಿ ವ್ಯಾಪ್ತಿ ಬದಲಾಗಿದ್ದು, ಇದರಿಂದ ಈಗ ಮತ್ತೆ ಹೊಸದಾಗಿ ನಿರಾಕ್ಷೇಪಣಾ ಪತ್ರ ಪಡೆಯುವ ಸಂದರ್ಭ ಎದುರಾಗಿದೆ.
‘ಹುತ್ಗಾರ, ಇಸಳೂರು, ದೊಡ್ನಳ್ಳಿ, ಕುಳವೆ, ಯಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಆಯ್ದ ಕೆಲವು ಭಾಗಗಳನ್ನು ನಗರಸಭೆಗೆ ಸೇರಿಸಿಕೊಳ್ಳಲು 2016ರಲ್ಲಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಲ್ಲಿ ಠರಾವು ಮಾಡಿ ನಗರಸಭೆಗೆ ಸಲ್ಲಿಸಲಾಗಿತ್ತು. ಆದರೆ ಈವರೆಗೆ ಯಾವುದೇ ಬೆಳವಣಿಗೆ ಆಗಿಲ್ಲ’ ಎಂಬುದು ಆ ಭಾಗದ ಮುಖಂಡರ ಅಭಿಪ್ರಾಯ.
‘ನಗರಸಭೆಯ ಸಾಮಾನ್ಯ ಸಭೆಯ ನಡಾವಳಿ ಮೂಲಕ ನಿರ್ಣಯ ಕೈಗೊಂಡು ಕರ್ನಾಟಕ ಪೌರ ಸಭೆಗಳ ಅಧಿನಿಯಮ 1964 ಕಲಂ 4(ಎ) ಅನುಸಾರ ಈ ಗ್ರಾಮಗಳನ್ನು ನಗರಸಭೆ ವ್ಯಾಪ್ತಿಗೆ ಸೇರ್ಪಡೆ ಮಾಡಲು ಅನುಮೋದನೆ ನೀಡುವಂತೆ ಜಿಲ್ಲಾಧಿಕಾರಿ ಮೂಲಕ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ 2020ರಲ್ಲಿ ಪ್ರಸ್ತಾವ ಸಲ್ಲಿಸಲಾಗಿತ್ತು. ಆದರೆ ಈವರೆಗೂ ಸೇರ್ಪಡೆಗೆ ಯಾವುದೇ ಸೂಚನೆ ಬಂದಿಲ್ಲ’ ಎಂದು ನಗರಸಭೆ ಅಧಿಕಾರಿಯೊಬ್ಬರು ಹೇಳಿದರು.
‘2016ರಲ್ಲಿ ಜನಸಂಖ್ಯೆ, ಕಟ್ಟಡಗಳ ಸಂಖ್ಯೆ ಆಧರಿಸಿ ಕೆಲವು ಸರ್ವೆ ನಂಬರ್‌ಗಳನ್ನು ಮಾತ್ರ ಸೇರಿಸಲು ಗ್ರಾಮ ಪಂಚಾಯಿತಿಗಳಿಂದ ಒಪ್ಪಿಗೆ ಸಿಕ್ಕಿತ್ತು. ಆಗ ಕೈಬಿಟ್ಟ ಸರ್ವೆ ನಂಬರ್‌ಗಳೂ ಕಳೆದ ಐದು ವರ್ಷಗಳೀಚೆಗೆ ಸೇರ್ಪಡೆಯ ಅರ್ಹತೆ ಪಡೆದಿವೆ. ಪ್ರಸ್ತುತ ಹಳೆಯ ಪ್ರಸ್ತಾವಕ್ಕೆ ಇನ್ನೂ ಸರ್ಕಾರ ಒಪ್ಪಿಗೆ ಸೂಚಿಸಿಲ್ಲ. ಹಳೆಯ ಪ್ರಸ್ತಾವಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದರೆ ಆಗ ಕೈಬಿಟ್ಟ ಕೆಲ ಪ್ರದೇಶದ ನಿವಾಸಿಗಳಿಗೆ ಅನ್ಯಾಯವಾಗುತ್ತದೆ. ಭವಿಷ್ಯದಲ್ಲಿ ಈಗಿರುವ ಸಮಸ್ಯೆಯೇ ಮುಂದುವರೆಯುತ್ತದೆ. ಹೀಗಾಗಿ ಆ ಎಲ್ಲ ಪ್ರದೇಶಗಳನ್ನು ಸೇರಿಸಿಕೊಂಡು ಮತ್ತೆ ಪಂಚಾಯಿತಿಗಳಿಂದ ಹೊಸದಾಗಿ ನಿರಾಕ್ಷೇಪಣಾ ಪತ್ರ ಪಡೆದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲು ನಗರಸಭೆ ಚಿಂತನೆ ನಡೆಸಿದೆ’ ಎಂದೂ ಹೇಳಿದರು.
‘ನಗರಕ್ಕೆ ಹೊಂದಿಕೊಂಡ ಬಹುತೇಕ ಗ್ರಾಮಗಳಲ್ಲಿ ವಾಸ ಮಾಡುತ್ತಿರುವ ಕುಟುಂಬಗಳು ವ್ಯವಸಾಯೇತರ ಚಟುವಟಿಕೆಗಳಲ್ಲಿ ತೊಡಗಿದ್ದು, ಕೈಗಾರಿಕಾ ಪ್ರದೇಶಗಳೂ ಒಳಗೊಂಡಿವೆ. ಈ ಪ್ರದೇಶಗಳಿಗೆ ಗ್ರಾಮ ಪಂಚಾಯಿತಿ ಸೌಲಭ್ಯ ಸಿಗುತ್ತಿಲ್ಲ. ನಗರಸಭೆಯ ಸೌಕರ್ಯ ಒದಗುತ್ತಿಲ್ಲ’ ಎಂದು ಸುಪ್ರಸನ್ನ ನಗರದ ರಘುರಾಮ ಭಟ್ ದೂರಿದರು.
ನಗರದ ಹೊರವಲಯದ ಪ್ರದೇಶ ಸೇರ್ಪಡೆಯಿಂದ ಸುಮಾರು 20–25 ಸಾವಿರ ಜನಸಂಖ್ಯೆ ನಗರಸಭೆ ವ್ಯಾಪ್ತಿಗೆ ಸೇರ್ಪಡೆಯಾಗುತ್ತದೆ. ಇದರಿಂದ ಆಯಾ ಪ್ರದೇಶಗಳ ಅಭಿವೃದ್ಧಿ ಕೂಡ ಸಾಧ್ಯವಾಗುತ್ತದೆರಮಾಕಾಂತ ಭಟ್ ನಗರಸಭೆ ಉಪಾಧ್ಯಕ್ಷ
ಯಾವೆಲ್ಲ ಸ್ಥಳ ಸೇರ್ಪಡೆ
ಪಟ್ಟಿಯಲ್ಲಿ ‘ಹುತ್ಗಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಣಜವಳ್ಳಿ ಶ್ರೀರಾಂ ಕಾಲೋನಿ ಸುಪ್ರಸನ್ನ ನಗರ ಭಂಡಾರಕೇರಿ ಕೊಪ್ಪಳ ಕಾಲೋನಿ ಗುರುನಗರ ಗಣೇಶನಗರದ ಕೆಲ ಭಾಗ ಶಾಂತಿನಗರ ಇಸಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿಪಗಿ ಗ್ರಾಮದ ಕೆಲ ಭಾಗ ದಮನಬೈಲ್ ನಾರಾಯಣಗುರುನಗರ ಲಂಡಕನಳ್ಳಿ ಎಸಳೆಕೆರೆ ಬಚಗಾಂವ ಹೆಂಚಿನಕೇರಿ ಯಡ್ಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಿಡಮಾವಿನಕಟ್ಟೆ ಕಲ್ಕುಣಿ ಸಂಪಿನಕೆರೆ ಕುಳವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆರಕನಹಳ್ಳಿ ಗ್ರಾಮದ ಟಿಪ್ಪುನಗರ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಲಗೌಡರ್ ನಗರ ಲಿಡ್ಕರ್ ಕಾಲೊನಿ ಶ್ರೀಗಂಧದ ಸಂಕೀರ್ಣ ಶ್ರೀನಗರ ಪ್ರದೇಶ ಸೇರ್ಪಡೆಗೆ ಈ ಹಿಂದೆ ಒಪ್ಪಿಗೆ ನೀಡಲಾಗಿತ್ತು’ ಎಂದು ನಗರಸಭೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.