ಭಟ್ಕಳ: ಒಂದೂವರೆ ವರ್ಷದಿಂದ ಮುರುಡೇಶ್ವರದಲ್ಲಿ ನಿಂತುಹೋಗಿದ್ದ ಜಲಸಾಹಸ ಕ್ರೀಡೆಗಳು ಕಳೆದ ವಾರದಿಂದ ಪುನಃ ಆರಂಭಗೊಂಡಿದ್ದು, ಸ್ಥಳೀಯ ವ್ಯಾಪಾರಿಗಳ ಮುಖದಲ್ಲಿ ಮಂದಹಾಸ ಮರುಕಳಿಸಿದೆ.
ಮುರುಡೇಶ್ವರದಲ್ಲಿ ಕಳೆದ ವರ್ಷ ಸಂಭವಿಸಿದ ಸಾಲು ಸಾಲು ಪ್ರವಾಸಿಗರ ಸಾವುಗಳಿಂದ ಎಚ್ಚೆತ್ತ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಜಲಸಾಹಸ ಕ್ರೀಡೆ ಹಾಗೂ ಸಮುದ್ರ ಕಡಲತೀರ ಪ್ರವೇಶಕ್ಕೆ ನಿರ್ಬಂಧ ವಿಧಿಸಿತ್ತು. ಇದರಿಂದಾಗಿ ಇಲ್ಲಿ ನಿತ್ಯ ಭೇಟಿ ಕೊಡುವ ಪ್ರವಾಸಿಗರು ಮುರುಡೇಶ್ವರ ಶಿವನ ದೇವಾಲಯ ಗೋಪುರ ವಿಕ್ಷಣೆ ಮಾಡಿ, ಸಂಜೆ ಹೊನ್ನಾವರದ ಇಕೋ ಬೀಚ್ ಇಲ್ಲವೇ ಕುಂದಾಪುರದ ಮರವಂತೆ ಬೀಚ್ಕಡೆ ಸಾಗುತ್ತಿದ್ದರು. ಇದರ ಪರಿಣಾಮ ಪ್ರವಾಸಿಗರನ್ನೇ ನೆಚ್ಚಿ ಕುಳಿತ ಲಾಡ್ಜ್, ಹೋಟೆಲ್ ಉದ್ಯಮಿಗಳು ಸಹಿತ ಸಣ್ಣ ಸಣ್ಣ ವ್ಯಾಪಾರಿಗಳು, ವಾಹನ ಚಾಲಕರು ನಷ್ಟ ಅನುಭವಿಸಬೇಕಾಯಿತು.
ಈಗ ಪುನಃ ಜಿಲ್ಲಾಡಳಿತ ಪ್ರವಾಸಿಗರಿಗೆ ಬೀಚ್ ಮುಕ್ತಗೊಳಿಸಿರುವುದು ಸ್ಥಳೀಯ ವ್ಯಾಪಾರಿಗಳಿಗೆ ಹೊಸ ಚೈತನ್ಯ ಸಿಕ್ಕಂತಾಗಿದೆ. ಬೀಚ್ ಮುಕ್ತವಾದ ಬಳಿಕ ಸ್ಥಳೀಯ ವ್ಯಾಪಾರಿಗಳು ಅದ್ದೂರಿಯಾಗಿ ಮುರುಡೇಶ್ವರನಿಗೆ ಪೂಜೆ ಸಲ್ಲಿಸಿ ಸಮುದ್ರರಾಜನಿಗೆ ಸಮುದ್ರ ಆರತಿ ನೆರವೇರಿಸಿ ಪ್ರವಾಸೋದ್ಯಮ ಚಟುವಟಿಕೆಗಳಿಗೆ ಯಾವುದೇ ಕರಿನೆರಳು ಬೀಳದಂತೆ ಪ್ರಾರ್ಥಿಸಿದ್ದಾರೆ. ಮತ್ತೊಂದೆಡೆ ಕ್ಷೇತ್ರಕ್ಕೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗತೊಡಗಿದೆ.
‘ಮುರುಡೇಶ್ವರಕ್ಕೆ ಬಂದ ಪ್ರವಾಸಿಗರು ನೀರಿನಲ್ಲಿ ಮುಳುಗಿ ಮೃತಪಟ್ಟಾಗ ರಾಜ್ಯದಾದ್ಯಂತ ಸುದ್ದಿ ಆಗುತ್ತದೆ. ಮುರುಡೇಶ್ವರಕ್ಕೆ ಬರುವ ಬಹುತೇಕ ಎಲ್ಲ ಪ್ರವಾಸಿಗರಿಗೂ ಆಳ ಸಮುದ್ರಕ್ಕೆ ಹೋದರೆ ಅಪಾಯ ಇದೆ ಎನ್ನುವ ಅರಿವಿದೆ. ಆದರೂ ಮೋಜು ಮಸ್ತಿಯ ಗುಂಗಿನಲ್ಲಿ ಪ್ರಾಣಾಪಾಯ ಮರೆತು ಆಳ ನೀರಿಗೆ ಹೋಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಾರೆ. ಸಾವಿರಾರು ಮಂದಿ ಒಮ್ಮೆಲೆ ಬೀಚ್‌ನಲ್ಲಿ ಆಟವಾಡುವಾಗ ಎಷ್ಟು ಜನರ ಮೇಲೆ ನಿಗಾ ಇರಿಸಲು ಸಾಧ್ಯ. ಪ್ರವಾಸಿಗರೇ ಅಪಾಯದ ಬಗ್ಗೆ ಅರಿತು ತಮ್ಮ ಹಾಗೂ ತಮ್ಮ ಕುಟುಂಬದ ಸ್ವಯಂ ರಕ್ಷಣೆಗೆ ಜಾಗೃತಿವಹಿಸಬೇಕು’ ಎನ್ನುತ್ತಾರೆ ಸ್ಥಳೀಯರಾದ ಉದ್ಯಮಿ ಮಂಜುನಾಥ ನಾಯ್ಕ.
ಒಂದೂವರೆ ವರ್ಷದ ಬಳಿಕ ಮುರುಡೇಶ್ವರದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಪುನರಾರಂಭವಾಗಿದ್ದು ವ್ಯಾಪಾರಿಗಳು ನಷ್ಟದಿಂದ ಚೇತರಿಸಿಕೊಳ್ಳುವ ವಿಶ್ವಾಸದಲಿದ್ದಾರೆಸಂತೋಷ ನಾಯ್ಕ ಲಾಡ್ಜ್ ಉದ್ಯಮಿ
ಮುರುಡೇಶ್ವರ ದೇವಸ್ಥಾನ ವೀಕ್ಷಣೆ ಜೊತೆಗೆ ಇಲ್ಲಿನ ಕಡಲತಡಿಯಲ್ಲಿ ನಡೆಯುವ ಜಲಸಾಹಸ ಕ್ರೀಡೆ ಆಡಲೆಂದೇ ನಾವು ಇಲ್ಲಿಗೆ ಬರುತ್ತೇವೆ. ಅದು ಮನಸಿಗೆ ಮುದ ನೀಡುತ್ತದೆರೋಹಿಣಿ ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.