
ಭಟ್ಕಳ: ಮ್ಹಾತೋಬಾರ ಶ್ರೀ ಮುರುಡೇಶ್ವರ ದೇವರ ಮಹಾ ರಥೋತ್ಸವ ಸಂಬಂಧ ದೇವರ ಧಾರ್ಮಿಕ ಕಾರ್ಯಕ್ರಮ, ಉತ್ಸವ ಜ.15ರಂದು ಗುರುವಾರ (ಮಕರ ಸಂಕ್ರಮಣ)ಯಂದು ಬೆಳಿಗ್ಗೆ ಗಣೇಶ ಪೂಜಾ, ಮೃತ್ತಿಕಾಹರಣ, ಧ್ವಜಾರೋಹಣ. ರಾತ್ರಿ ಬೀಜವಾಪನ, ಭೇರಿತಾಡನ, ಐನಬಲಿ, ಶಿಬಿಕಾ ಯಂತ್ರೋತ್ಸವ, ಪುಷ್ಪ ರಥೋತ್ಸವದೊಂದಿಗೆ ಆರಂಭವಾಗಿದೆ.
ಜ.20ರಂದು ಮಹಾ ರಥೋತ್ಸವ ನಡೆಯಲಿದೆ. ಬೆಳಿಗ್ಗೆ ಕಲಶ ಸ್ಥಾಪನೆ, ಅಧಿವಾಸ ಹವನಾದಿಗಳು. ರಥಾದಿವಾಸ ಹವನ ಪೂರ್ವಾಹ್ನ ಶ್ರೀ ದೇವರ ರಥಾರೋಹಣ. ಸಂಜೆ ಮಹಾ ರಥೋತ್ಸವ ನಡೆಯಲಿದೆ. ರಾತ್ರಿ ಮೃಗ ಬೇಟೆ, ಮುಡಿಗಂಧ ಪ್ರಸಾದ ವಿತರಣೆ ಹಾಗೂ ಜ.22ರಂದು ಗುರುವಾರ ಬೆಳಿಗ್ಗೆ ಚೂರ್ಣೋತ್ಸವ, ಅವಭ್ಯಥ ಸ್ನಾನ, ಧ್ವಜಾವರೋಹಣ, ಅಂಕುರಾರೋಪಣ, ಮಹಾಪೂಜೆ, ಮುಡಿಗಂಧ ಪ್ರಸಾದ ವಿತರಣೆಯೊಂದಿಗೆ ರಥೋತ್ಸವದ ಧಾರ್ಮಿಕ ಕಾರ್ಯಕ್ರಮ ಮುಕ್ತಾಯವಾಗಲಿದೆ.
ರಥೋತ್ಸವದ ಅಂಗವಾಗಿ ನಡೆಯುವ ಎಲ್ಲ ಧಾರ್ಮಿಕ ಕಾರ್ಯಕ್ರಮದಲ್ಲಿ ಭಕ್ತರು ಸಕುಟುಂಬ, ಪರಿವಾರದೊಂದಿಗೆ ಬಂದು ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದ ಸ್ವೀಕರಿಸಿ, ದೇವರ ಕೃಪೆಗೆ ಪಾತ್ರರಾಗಬೇಕು ಎಂದು ಆಡಳಿತ ಮಂಡಳಿ ಧರ್ಮದರ್ಶಿ ಸತೀಶ ಆರ್. ಶೆಟ್ಟಿ ಕೋರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.