ADVERTISEMENT

ಕುಮಟಾ | ಮಳೆ ಕೊರತೆ: ಅಪರೂಪವಾದ ಕಾಡು ಅಣಬೆ

ಮುಂಗಾರು ಅವಧಿಯಲ್ಲಿ ರುಚಿಕರ ಆಹಾರವಾಗಿ ಬಳಕೆಯಾಗುತ್ತಿದ್ದ ಪದಾರ್ಥ

ಎಂ.ಜಿ ನಾಯ್ಕ
Published 18 ಆಗಸ್ಟ್ 2023, 4:33 IST
Last Updated 18 ಆಗಸ್ಟ್ 2023, 4:33 IST
ಕಾಡು ಅಣಬೆ
ಕಾಡು ಅಣಬೆ   

ಕುಮಟಾ (ಉತ್ತರ ಕನ್ನಡ ಜಿಲ್ಲೆ): ಪ್ರತಿ ವರ್ಷ ಮುಂಗಾರಿನ ಅವಧಿಯಲ್ಲಿ ತಾಲ್ಲೂಕಿನ ಸುತ್ತಮುತ್ತಲಿನ ಕಾಡುಗಳಲ್ಲಿ ಹೇರಳವಾಗಿ ಸಿಗುತ್ತಿದ್ದ ರುಚಿಕರ ಅಣಬೆ ಈ ವರ್ಷ ಮಳೆಯ ಕೊರತೆ ಕಾರಣಕ್ಕೆ ನಿರೀಕ್ಷಿತ ಪ್ರಮಾಣದಲ್ಲಿ ಲಭಿಸಿಲ್ಲ.

ತಾಲ್ಲೂಕಿನ ಮಾಸ್ತಿಹಳ್ಳ, ದೇವಿಮನೆ ಘಟ್ಟ ಪ್ರದೇಶ, ಯಾಣ, ಸಂಡಳ್ಳಿ-ಮತ್ತಳ್ಳಿ, ಸಂತೆಗುಳಿ, ಶಿರಗುಂಜಿ, ಮೇದನಿ ಕಾಡಿನಲ್ಲಿ ಹೇರಳ ಪ್ರಮಾಣದಲ್ಲಿ ಸಿಗುತ್ತಿದ್ದ ಕಾಡು ಅಣಬೆ ಈ ಬಾರಿ ಕಡಿಮೆಯಾಗಿದೆ. ಕೆಲ ಕಡೆ ಅಣಬೆ ಬೆಳೆಯಲೇ ಇಲ್ಲ. ಕಾಡು ಅಣಬೆಗೆ ಹುಡುಕಾಟ ನಡೆಸಿದವರು ಬರಿಗೈಲಿ ಮರಳುವಂತಾಗಿದೆ.

ಸಾಮಾನ್ಯವಾಗಿ ಜುಲೈ, ಆಗಸ್ಟ್ ತಿಂಗಳಲ್ಲಿ ಕಾಡಿನಲ್ಲಿ ಅಣಬೆ ಕಾಣಿಸಿಗುತ್ತಿದ್ದವು. ಕಾಡಿನಿಂದ ಸಂಗ್ರಹಿಸಿಕೊಂಡು ಬಂದು ಅಣಬೆಯನ್ನು ಪಟ್ಟಣದ ಗಿಬ್ ವೃತ್ತ, ಹೊಸ ಬಸ್ ನಿಲ್ದಾಣ ಪ್ರದೇಶದಲ್ಲಿ ನಿತ್ಯ ಹತ್ತಾರು ಜನರು ಮಾರುತ್ತಿದ್ದರು. ಅಣಬೆ ಹುಟ್ಟುವ ಜಾಗ ಗೊತ್ತಿದ್ದವರಿಗೆ ಅದನ್ನು ಮಾರಾಟ ಮಾಡಿ ಹಣ ಗಳಿಸುವುದು ಮಳೆಗಾಲದಲ್ಲಿ ಉದ್ಯೋಗವಾಗಿತ್ತು.

ADVERTISEMENT

ಕಳೆದ ವರ್ಷ 15 ಅಣಬೆ ಮೊಗ್ಗು ಇರುವ ಒಂದು ಪೊಟ್ಟಣಕ್ಕೆ ₹100 ದರ ಇತ್ತು. ಈ ವರ್ಷ ಮಳೆಯ ಕೊರತೆ ಕಾರಣ ಅಪರೂಪಕ್ಕೆ ಅಣಬೆ ಮಾರುಕಟ್ಟೆಗೆ ಬಂದರೂ ದರ ಮಾತ್ರ ಮೂರು ಪಟ್ಟು ಹೆಚ್ಚಾಗಿದೆ.

‘ಕಾಡಿನಲ್ಲಿ ಅಣಬೆ ಹುಟ್ಟುವ ಜಾಗ ಗೊತ್ತಿದ್ದವರು ಹಿಂದಿನ ದಿನವೇ ಅದು ಹುಟ್ಟಿಬರುವ ಸುಳಿವು ತಿಳಿದಿರುತ್ತಾರೆ. ಮರುದಿನ ಬೆಳಗಿನ ಜಾವ ಅಲ್ಲಿಗೆ ತೆರಳಿ ಮೊಗ್ಗಿರುವಾಗಲೇ ಸಂಗ್ರಹಿಸುತ್ತಾರೆ. ಅಣಬೆ ಮೊಗ್ಗಿರುವಾಗ ಸಂಗ್ರಹಿಸಿದರೆ ಅದಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ. ಅದು ಹೂವಿನಂತೆ ಅರಳಿದರೆ ಅದನ್ನು ಬಳಸುವುದು ಕಡಿಮೆ’ ಎಂದು ಮಾಸ್ತಿಹಳ್ಳ ಗ್ರಾಮದ ರಾಜು ತಿಳಿಸಿದರು.

‘ಕಾಡಿನ ಪ್ರದೇಶದಲ್ಲಿ ಗ್ರಾಮಗಳ ಜನರು ಪಟ್ಟಣದ ಸ್ನೇಹಿತರಿಗೆ ಅಣಬೆ ತಂದುಕೊಟ್ಟು ಖುಷಿಪಡುತ್ತಿದ್ದರು. ಯಾವಾಗ ಅದಕ್ಕೆ ಹೆಚ್ಚಿನ ಬೇಡಿಕೆ ಬಂತೋ ಅದು ಮೊಗ್ಗಾಗಿ ಬೆಳೆಯಲು ಬಿಡದೆ ಹೀಚಿರುವಾಗಲೇ ಕಿತ್ತು ತಂದು ಮಾರಾಟ ಮಾಡುತ್ತಿದ್ದಾರೆ. ನಮ್ಮ ತೋಟದ ಅಂಚಿನಲ್ಲಿ ಪ್ರತಿ ವರ್ಷ ಹುಟ್ಟುವ ಅಣಬೆ ಈ ವರ್ಷ ಕಾಣಸಿಗಲಿಲ್ಲ’ ಎಂದು ಅವರು ತಿಳಿಸಿದರು.

ಹವಾಮಾನ ವೈಪರೀತ್ಯದ ಪರಿಣಾಮ

‘ಕಾಡಿನಲ್ಲಿ ಸತ್ತ ಮರದ ಬುಡ ಅಥವಾ ತರೆಗೆಲೆ ರಾಶಿ ಮಣ್ಣಿನಲ್ಲಿ ಸೇರುವ ಜಾಗದ ನೆಲದಡಿ ಅಣಬೆಯ ಜೀವ ಕಣದ ಎಳೆಗಳು ಸೃಷ್ಟಿಯಾಗುತ್ತವೆ. ಮಳೆ ಬಿದ್ದು ಬಿಡುವು ಸಿಕ್ಕ  ನಂತರ ಅವು ಶಿಲೀಂಧ್ರ ಅಂದರೆ ಅಣಬೆ ರೂಪದಲ್ಲಿ ಭೂಮಿಯಿಂದ ಹೊರಕ್ಕೆ ಬರುವುದು ಒಂದು ಜೈವಿಕ ಕ್ರಿಯೆ. ಹವಾಮಾನ ಬದಲಾವಣೆಯೂ ಅಣಬೆಯ ಮೇಲೆ ಪರಿಣಾಮ ಬೀರುತ್ತವೆ. ಈ ಬಾರಿ ಮಳೆ ಕಡಿಮೆಯಾಗಿ ಬಿಸಿಲಿನ ವಾತಾವರಣ ಮೂಡಿರುವುದರಿಂದ ಅಣಬೆ ಬೆಳೆಯಲು ಅಡ್ಡಿಯಾಗಿದೆ’ ಎಂದು ಸಸ್ಯಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕಿ ಗೀತಾ ನಾಯಕ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.