ADVERTISEMENT

ದಾಂಡೇಲಿಯಲ್ಲಿ ನಾ ಮೆಚ್ಚಿದ ಪುಸ್ತಕ ಓದು ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 13 ಮಾರ್ಚ್ 2025, 12:13 IST
Last Updated 13 ಮಾರ್ಚ್ 2025, 12:13 IST
ದಾಂಡೇಲಿ ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ‘ನಾ ಮೆಚ್ಚಿದ ಪುಸ್ತಕ ಓದು’ ಕಾರ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿ ಸಂತೋಷ ‘ಮನುಷ್ಯರನ್ನು ಹುಡುಕುತ್ತಾ’ ಪುಸ್ತಕ ಓದಿದರು
ದಾಂಡೇಲಿ ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ನಡೆದ ‘ನಾ ಮೆಚ್ಚಿದ ಪುಸ್ತಕ ಓದು’ ಕಾರ್ಯಕ್ರಮದಲ್ಲಿ ಪದವಿ ವಿದ್ಯಾರ್ಥಿ ಸಂತೋಷ ‘ಮನುಷ್ಯರನ್ನು ಹುಡುಕುತ್ತಾ’ ಪುಸ್ತಕ ಓದಿದರು   

ದಾಂಡೇಲಿ: ‘ಪುಸ್ತಕ ಓದುವ ಹವ್ಯಾಸ ಬದುಕನ್ನು ಬದಲಿಸುವ ಬಹುದೊಡ್ಡ ಮಾರ್ಗವೊಂದನ್ನು ತೋರಿಸುತ್ತಿದೆ. ಈ ಮಣ್ಣಿನ ಕತೆಗಳಾದ ಮಹಾಭಾರತ, ರಾಮಾಯಣಗಳು ಬದುಕಿನ ಏರಿಳಿತಗಳನ್ನು ಬಿಂಬಿಸುವ ಮಹಾಕಾವ್ಯಗಳಾಗಿವೆ. ಪ್ರತಿಯೊಬ್ಬರೂ ಓದಲೇಬೇಕು. ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯ ಭರದಲ್ಲಿ ವಿದ್ಯಾರ್ಥಿಗಳು ಸಾಹಿತ್ಯದ ಓದಿನಿಂದ ದೂರ ಉಳಿದಿರುವುದು ಖೇದಕರ ಸಂಗತಿ’ ಎಂದು ಬಿ.ಎನ್. ವಾಸರೆ ಹೇಳಿದರು.

ಗುರುವಾರ ಅಂಬೇವಾಡಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಪುಸ್ತಕ ಪ್ರಾಧಿಕಾರ, ಅಭಿರುಚಿ ಪುಸ್ತಕ ಬಳಗ, ಕಾಲೇಜಿನ ಕನ್ನಡ ವಿಭಾಗಗಳ ಸಹಯೋಗದಲ್ಲಿ ನಡೆದ ‘ನಾ ಮೆಚ್ಚಿದ ಪುಸ್ತಕ ವಿದ್ಯಾರ್ಥಿಗಳಿಂದ ಓದು’ ಎಂಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳು ಅಂಬೇಡ್ಕರ್ ಬರೆಹಗಳನ್ನು ಓದಿ ಕೊಂಡಾಗ ಸಮಾನತೆಯ ತತ್ವವನ್ನು, ಬಸವಣ್ಣನವರ ವಚನಗಳು ಜೀವನಾನುಭವವನ್ನು ತಿಳಿಸುತ್ತವೆ. ಪುಸ್ತಕಗಳು ವಿಚಾರಗಳನ್ನು ಹಂಚುವ ಪಂಜು ಇದ್ದ ಹಾಗೆ. ಹೀಗಾಗಿ ವಿದ್ಯಾರ್ಥಿಗಳು ಸಾಹಿತ್ಯದ ಓದಿಗೆ ತಮ್ಮನ್ನು ತೆರೆದುಕೊಳ್ಳಬೇಕು’ ಎಂದು ಹೇಳಿ ನಾಗಮೋಹನ ದಾಸ ಬರೆದ ಲೇಖನದ ತುಣುಕುಗಳನ್ನು ಓದಿದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಡಿ. ಒಕ್ಕುಂದ ಮಾತನಾಡಿ, ‘ಇಂದಿನ ಪೀಳಿಗೆಗೆ ಓದು ದುಬಾರಿಯಾಗಿದೆ. ಓದು ಪರೀಕ್ಷೆಗೆ ಮಾತ್ರ ಸೀಮಿತವಾಗಿರುವ ಸಮಯದಲ್ಲಿ ಮಕ್ಕಳಲ್ಲಿ ಸೃಜನಶೀಲತೆ, ಸಂವೇದಿ, ವಿಮರ್ಶಾತ್ಮಕ ಪ್ರವೃತ್ತಿ ಬೆಳೆಸುವ ಜರೂರತ್ತು ಇದೆ. ಪುಸ್ತಕ ಸಮಾಜವನ್ನು ತೆರೆದು ಕಣ್ಣಿನಿಂದ ನೋಡುವ ಶಕ್ತಿ ಬೆಳೆಸುತ್ತ ಹೋಗುತ್ತದೆ. ಪುಸ್ತಕಗಳಿಂದ ಒಳ್ಳೆಯ ಬೀಜಗಳನ್ನು ಬಿತ್ತುವ ಕೆಲಸವಾಗಬೇಕಿದೆ’ ಎಂದರು.

30 ವಿದ್ಯಾರ್ಥಿಗಳು ವಿವಿಧ ಪುಸ್ತಕಗಳ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿದರು. ಉಪನ್ಯಾಸಕರಾದ ಉಮೇಶ ಗೌಡ ಪಾಟೀಲ, ವಿನಯ ನಾಯ್ಕ, ಚಂದ್ರಶೇಖರ ಲಮಾಣಿ, ಗೀತಾ ಕೊಟೆನ್ನವರ, ಉಷಾ ನಾಯಕ, ಪದ್ಮಾವತಿ ಅನಷರಕ, ಬಸವರಾಜ ಹೂಲಿಕಟ್ಟಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.