ಕಾರವಾರ: ಪರಿಶಿಷ್ಟ ಜಾತಿಗಳ ಒಳಮೀಸಲಾತಿಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ಆಯೋಗ ಸಮೀಕ್ಷೆ ನಡೆಸಿ, ಸರ್ಕಾರಕ್ಕೆ ಸಲ್ಲಿಸಿದ ವರದಿ ಅವೈಜ್ಞಾನಿಕವಾಗಿದ್ದು ಅದನ್ನು ಅಂಗೀಕರಿಸಬಾರದು ಎಂದು ಒತ್ತಾಯಿಸಿ ಬಲಗೈ ಜಾತಿಗಳ ಒಕ್ಕೂಟದ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಬುಧವಾರ ಪ್ರತಿಭಟನೆ ನಡೆಸಲಾಯಿತು.
‘ವರದಿಯು ದುರುದ್ದೇಶದಿಂದ ಕೂಡಿದೆ. ಅವೈಜ್ಞಾನಿಕವಾಗಿ ಮಾಹಿತಿ ಕಲೆ ಹಾಕಲಾಗಿದೆ. ಸರ್ಕಾರದ ನಿಬಂಧನೆಗಳನ್ನು ಉಲ್ಲಂಘಿಸಿ, ಅಧಿಕಾರದ ವ್ಯಾಪ್ತಿ ಮೀರಿ ಮಾಡಿರುವ ಶಿಫಾರಸ್ಸುಗಳಿರುವ ವರದಿಯನ್ನು ಸರ್ಕಾರ ತಿರಸ್ಕರಿಸಬೇಕು. ಇಲ್ಲವಾದರೆ ಹೋರಾಟ ತೀವ್ರಗೊಳಿಸಲಾಗುತ್ತದೆ’ ಎಂದು ಒಕ್ಕೂಟದ ವಿಭಾಗೀಯ ಸಂಚಾಲಕ ಶಿವಾಜಿ ಬನವಾಸಿ ಎಚ್ಚರಿಸಿದರು.
‘ಪರಿಶಿಷ್ಟ ಜಾತಿಯ ಬಲಗೈ ಸಮುದಾಯಗಳಿಗೆ ಅನ್ಯಾಯವಾಗುವ ರೀತಿಯಲ್ಲಿ ವರದಿಯಲ್ಲಿ ಶಿಫಾರಸ್ಸುಗಳನ್ನು ಸಲ್ಲಿಸಲಾಗಿದೆ. ಬಲಗೈ ವ್ಯಾಪ್ತಿಯ ಸಮುದಾಯಗಳನ್ನು ಎಡಗೈ ವ್ಯಾಪ್ತಿಗೆ ಸೇರಿಸಿ, ಜನಸಂಖ್ಯೆಗಳನ್ನು ತಪ್ಪಾಗಿ ನಮೂದಿಸಲಾಗಿದೆ’ ಎಂದೂ ಪ್ರತಿಭಟನಾಕಾರರು ಆರೋಪಿಸಿದರು.
‘ಬಲಗೈ ಸಮುದಾಯಕ್ಕೆ ಸೇರಿದ ವಿವಿಧ ಜಾತಿಗಳ ಸುಮಾರು 2.58 ಲಕ್ಷ ಜನಸಂಖ್ಯೆಯನ್ನು ಕಡಿಮೆ ತೋರಿಸಲಾಗಿದೆ. ಇವುಗಳನ್ನು ಮಾದಿಗ ಸಮುದಾಯಕ್ಕೆ ಸೇರಿಸಿ ಆ ಸಮುದಾಯದ ಸಂಖ್ಯೆ ಹೆಚ್ಚಿಸಲಾಗಿದೆ. ಇಂತಹ ಹಲವು ಲೋಪದೋಷಗಳು ವರದಿಯಲ್ಲಿವೆ’ ಎಂದು ದೂರಿದರು.
ವರದಿಯನ್ನು ಆ.16ರಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸದೆ, ತಿರಸ್ಕರಿಸಲು ನಿರ್ಣಯ ಕೈಗೊಳ್ಳಬೇಕು’ ಎಂದು ಒತ್ತಾಯಿಸಿ ಸರ್ಕಾರಕ್ಕೆ ಬರೆದ ಮನವಿ ಪತ್ರವನ್ನು ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಅವರಿಗೆ ನೀಡಿದರು.
ಒಕ್ಕೂಟದ ಪದಾಧಿಕಾರಿಗಳಾದ ಬಸವರಾಜ ದೊಡ್ಮನಿ, ರಾಘವೇಂದ್ರ ಟಪಾಲದವರ, ಬೊಮ್ಮಯ್ಯ ಹಳ್ಳೇರ, ಸುಧೀಂದ್ರ ಲಾಂಜೇಕರ, ಮಾದೇವ ಬಾಕಡ, ಮಂಜುನಾಥ ಹುಲಸ್ವಾರ, ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.