ADVERTISEMENT

ಗ್ರಾಮೀಣ ಪ್ರತಿಭೆಗೆ ಅಕಾಡೆಮಿ ಗೌರವ

​ಪ್ರಜಾವಾಣಿ ವಾರ್ತೆ
Published 4 ಜನವರಿ 2020, 13:37 IST
Last Updated 4 ಜನವರಿ 2020, 13:37 IST
ಗಣಪತಿ ಬಿ.ಹೆಗಡೆ ಹಿತ್ಲಕೈ
ಗಣಪತಿ ಬಿ.ಹೆಗಡೆ ಹಿತ್ಲಕೈ   

ಸಿದ್ದಾಪುರ: ಕರ್ನಾಟಕ ನಾಟಕ ಅಕಾಡೆಮಿಯ ಈ ಬಾರಿಯ ವಾರ್ಷಿಕ ರಂಗ ಪ್ರಶಸ್ತಿ ತಾಲ್ಲೂಕಿನ ರಂಗ ನಿರ್ದೇಶಕ, ನಟ ಗಣಪತಿ ಬಿ.ಹೆಗಡೆ ಹಿತ್ಲಕೈ ಅವರಿಗೆ ಸಂದಿದೆ.

ಗ್ರಾಮೀಣ ಭಾಗದ ಹಿತ್ಲಕೈ ಎಂಬ ಹಳ್ಳಿಯ ಗಣಪತಿ ಬಿ. ಹೆಗಡೆ, ನೀನಾಸಂನಲ್ಲಿ ರಂಗಶಿಕ್ಷಣದ ಡಿಪ್ಲೊಮಾ ಪೂರೈಸಿದ್ದಾರೆ. ನೀನಾಸಂ ಶೈಲಿಯ ನಾಟಕಗಳನ್ನು, ತಮ್ಮತನದ ಎರಕದೊಂದಿಗೆ ರಂಜನೀಯವಾಗಿ ಕಟ್ಟುವುದಲ್ಲಿ ಅವರು ಸಿದ್ಧಹಸ್ತರು. ಅವರು ನಟನೆ, ರಂಗಸಿದ್ಧತೆ, ಬೆಳಕು, ವಸ್ತ್ರವಿನ್ಯಾಸ, ನಿರ್ದೇಶನದಲ್ಲಿ ಅಧ್ಯಯನ ಹಾಗೂ ಪ್ರಾಯೋಗಿಕ ಅನುಭವ ಹೊಂದಿದ್ದಾರೆ. ಅವರ ನಾಟಕದ ಪ್ರತಿಭೆಗೆ ಯಕ್ಷಗಾನ ಕಲೆಯ ಹಿನ್ನೆಲೆ ಇದೆ.

ಸತತ ಆರು ವರ್ಷಗಳ ಕಾಲ(1990–96) ನೀನಾಸಂ ತಿರುಗಾಟದ ಪ್ರಮುಖ ನಾಟಕಗಳಲ್ಲಿ ಪಾತ್ರಧಾರಿಯಾಗಿ ಅಭಿನಯಿಸಿದ ಗಣಪತಿ ಹಿತ್ಲಕೈ, ನಾಡಿನ ಹಲವು ಹವ್ಯಾಸಿ ರಂಗ ತಂಡಗಳಿಗೆ ನಾಟಕ ನಿರ್ದೇಶಿಸಿದ್ದಾರೆ. ಮಕ್ಕಳಿಗಾಗಿ ಶಿಬಿರ ಏರ್ಪಡಿಸಿ, ರಂಗ ತರಬೇತಿ ನೀಡಿದ್ದಾರೆ. ಟಿ.ವಿ ಧಾರಾವಾಹಿಯಲ್ಲಿ ನಟಿಸಿರುವ ಅನುಭವ ಕೂಡ ಅವರಿಗಿದೆ. ಸಿ.ಆರ್.ಜಂಬೆ ಅವರ ನಿರ್ದೇಶನದಲ್ಲಿ ದೆಹಲಿಯ ರಾಷ್ಟ್ರೀಯ ನಾಟಕ ಶಾಲೆ(ಎನ್‌.ಎಸ್‌.ಡಿ)ಯ ವಿದ್ಯಾರ್ಥಿಗಳಿಗೆ ಯಕ್ಷಗಾನ ನಡೆಗಳನ್ನು ಕಲಿಸಿದ್ದಾರೆ.

ADVERTISEMENT

1998–99ರಲ್ಲಿ ಹುಟ್ಟಿದೂರಿನಲ್ಲಿ ‘ಒಡ್ಡೋಲಗ’ ಎಂಬ ಸಂಸ್ಥೆ ಆರಂಭಿಸಿರುವ ಅವರು, ಈ ತಂಡದಿಂದ ನಿರಂತರವಾಗಿ ನಾಟಕಗಳನ್ನು ಸಿದ್ಧಪಡಿಸಿ, ರಾಜ್ಯದಾದ್ಯಂತ ಪ್ರದರ್ಶನ ನೀಡುತ್ತಿದ್ದಾರೆ. ‘ರಂಗಭೂಮಿಯನ್ನೇ ಪ್ರಧಾನ ಕಾಯಕವೆಂದು ಪರಿಗಣಿಸಿದ್ದೇನೆ. ಗ್ರಾಮೀಣ ಪ್ರದೇಶದಲ್ಲಿ ಆಧುನಿಕ ಸಂವೇದನೆಯುಳ್ಳ ರಂಗಭೂಮಿ ಬೆಳೆಸುವುದು ನನ್ನ ಗುರಿ’ ಎಂಬುದು ಗಣಪತಿ ಬಿ.ಹೆಗಡೆ ಹಿತ್ಲಕೈ ಅವರ ಮಾತುಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.