ಕಾರವಾರ: ಇಲ್ಲಿನ ಐ.ಎನ್.ಎಸ್ ಕದಂಬ ನೌಕಾನೆಲೆಯ ನೌಕಾದಳ ಭವನದ ಆವರಣದಲ್ಲಿ ಬುಧವಾರ ಭಾರತೀಯ ನೌಕಾ ದಿನಾಚರಣೆಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಡಿ.4ರಂದು ಕರಾಚಿಯ ಬಂದರಿನ ಮೇಲೆ ದಾಳಿ ನಡೆಸಿ ಭಾರತವು ವಿಜಯ ಸಾಧಿಸಿತು. ಈ ನೆನಪಿಗೆ ನೌಕಾದಿನ ಆಚರಿಸಲಾಗುತ್ತಿದೆ.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಜ್ಯಪಾಲರ ಆಗಮನವಾಗುತ್ತಿದ್ದಂತೆ ನೌಕಾಪಡೆಯ ಬ್ಯಾಂಡ್ ಸಿಬ್ಬಂದಿ ರಾಷ್ಟ್ರಗೀತೆ ಮೊಳಗಿಸಿದರು.
ವಾದ್ಯ ಪರಿಕರಗಳಲ್ಲಿ ನುಡಿಸಿದ ವಿವಿಧ ದೇಶಭಕ್ತಿ ಗೀತೆ ರೋಮಾಂಚನಗೊಳಿಸಿದವು. ವಂದೇ ಮಾತರಂ, ವೈಷ್ಣವ ಜನತೊ ಹಾಡುಗಳನ್ನು ನೌಕಾದಳ ಸಿಬ್ಬಂದಿ ಹಾಡಿದರು. ಬ್ಯಾಂಡ್ ಸಿಬ್ಬಂದಿ ಬೀಟಿಂಗ್ ರಿಟ್ರೀಟ್ ಮೂಲಕ ದೇಶದ ನೌಕಾಪಡೆಯ ಸಿಬ್ಬಂದಿಯ ತ್ಯಾಗ, ಬಲಿದಾನ ಮತ್ತು ಸಾಮರ್ಥ್ಯವನ್ನು ಸ್ಮರಿಸಿದರು. ನಂತರ ನೌಕಾಪಡೆಯ ಧ್ವಜದ ಅವರೋಹಣ ಮಾಡಲಾಯಿತು.
ಸಂಭ್ರಮಾಚರಣೆಯ ಭಾಗವಾಗಿ ನೌಕಾಪಡೆಯ ಐಎನ್ಎಸ್ ಮಕರ, ಐಎನ್ಎಸ್ ಸುವರ್ಣಾ, ಯಾರ್ಡ್ ಕ್ರಾಫ್ಟ್ ನೌಕೆಗಳಿಗೆ ಅಲಂಕಾರ ಮಾಡಲಾಗಿತ್ತು. ನೌಕೆಗಳಿಂದ ಸಿಡಿದ ಸುಡುಮದ್ದುಗಳ ಚಿತ್ತಾರವು ಆಗಸವನ್ನು ವರ್ಣಮಯಗೊಳಿಸಿತು. ಅಗ್ನಿವೀರರು, ನೌಕಾಪಡೆಯ ಸಿಬ್ಬಂದಿ, ನೌಕಾನೆಲೆಯ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸಿದರು.
ಇಲ್ಲಿನ ಕಾರ್ಯಕ್ರಮಕ್ಕೆ ಮುನ್ನ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಐಎನ್‍ಎಸ್ ವಿಕ್ರಾಂತ್‍ಗೆ ಭೇಟಿ ನೀಡಿದ್ದರು. ಅಂಜದೀವ್ ದ್ವೀಪದಲ್ಲಿರುವ ಹುತಾತ್ಮರ ಸ್ಮಾರಕಕ್ಕೆ ಗೌರವ ಅರ್ಪಿಸಿದ್ದರು.
ಕರ್ನಾಟಕ ನೌಕಾನೆಲೆಯ ಮುಖ್ಯಸ್ಥ ಫ್ಲ್ಯಾಗ್ ಕಮಾಂಡೆಂಟ್ ಆಫಿಸರ್ ರಿಯರ್ ಅಡ್ಮಿರಲ್ ಕೆ.ಎನ್.ರಾಮಕೃಷ್ಣನ್, ಕ್ಯಾಫ್ಟನ್ ಬೀರೇಂದ್ರ ಎಸ್.ಬೈನ್ಸ್, ಕಾರವಾರ ಉಪವಿಭಾಗಾಧಿಕಾರಿ ಕನಿಷ್ಕ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.