
ಕಾರವಾರ: ಇಲ್ಲಿನ ಕದಂಬ ನೌಕಾನೆಲೆಯಲ್ಲಿ ಗುರುವಾರ ಸಂಜೆ ಸೂರ್ಯಾಸ್ತ ಆಗುತ್ತಿದ್ದಂತೆ ನೌಕಾಪಡೆಯ ಧ್ವಜ ಅವರೋಹಣ ನೆರವೇರಿತು. ಅದರ ಬೆನ್ನಲ್ಲೇ ಸಮುದ್ರದಲ್ಲಿ ನಿಂತಿದ್ದ ಮೂರು ಯುದ್ಧನೌಕೆಗಳಿಂದ ಸಿಡಿಮದ್ದುಗಳು ಬಾನೆತ್ತರಕ್ಕೆ ಚಿಮ್ಮಿದವು. ಇದರೊಂದಿಗೆ ಇಂಪಾದ ವಾದ್ಯ ಪರಿಕರಗಳ ಸದ್ದು ನೌಕಾನೆಲೆಯಲ್ಲಿ ಕೇಳಿಬಂತು.
ಹೀಗೆ ಐಎನ್ಎಸ್ ಕದಂಬ ನೌಕಾನೆಲೆಯ ನೌಕಾದಳ ಭವನದ ಆವರಣದಲ್ಲಿ ಗುರುವಾರ ಭಾರತೀಯ ನೌಕಾ ದಿನಾಚರಣೆ ಕಳೆಗಟ್ಟಿತು.
ರಾಜ್ಯಪಾಲ ಥಾವರಚಂದ್ ಗೆಹಲೋತ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ರಾಜ್ಯಪಾಲರ ಆಗಮನವಾಗುತ್ತಿದ್ದಂತೆ ನೌಕಾಪಡೆಯ ಬ್ಯಾಂಡ್ ಸಿಬ್ಬಂದಿ ರಾಷ್ಟ್ರಗೀತೆ ಮೊಳಗಿಸಿದರು. ಬಳಿಕ ಅರ್ಧ ಗಂಟೆ ಕಾಲ ವಾದ್ಯ ಪರಿಕರಗಳಲ್ಲಿ ನುಡಿಸಿದ ವಿವಿಧ ದೇಶಭಕ್ತಿ ಗೀತೆ ರೋಮಾಂಚನಗೊಳಿಸಿದವು.
ವಂದೇ ಮಾತರಂ, ಜೈ ಜೈ ಭಾರತಿ, ಏ ಮೇರೆ ವತನ್ ಕೆ ಲೋಗೊ, ಇತರ ಹಾಡುಗಳನ್ನು ನೌಕಾದಳ ಸಿಬ್ಬಂದಿ ಹಲವು ವಾದ್ಯ ಪರಿಕರಗಳಲ್ಲಿ ನುಡಿಸಿದರು. ಬೀಟಿಂಗ್ ರಿಟ್ರೀಟ್ ಮೂಲಕ ದೇಶದ ನೌಕಾಪಡೆಯ ಸಿಬ್ಬಂದಿಯ ತ್ಯಾಗ, ಬಲಿದಾನ ಮತ್ತು ಸಾಮರ್ಥ್ಯವನ್ನು ಸ್ಮರಿಸಿದರು.
ಸಂಭ್ರಮಾಚರಣೆಯ ಭಾಗವಾಗಿ ನೌಕಾಪಡೆಯ ಯಾರ್ಡ್ ಕ್ರಾಫ್ಟ್ ನೌಕೆಗಳಿಗೆ ಅಲಂಕಾರ ಮಾಡಲಾಗಿತ್ತು. ನೌಕೆಗಳಿಂದ ಸಿಡಿದ ಸುಡುಮದ್ದುಗಳ ಚಿತ್ತಾರವು ಆಗಸವನ್ನು ವರ್ಣಮಯಗೊಳಿಸಿದವು. ಅಗ್ನಿವೀರರು, ನೌಕಾಪಡೆಯ ಸಿಬ್ಬಂದಿ, ನೌಕಾನೆಲೆಯ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಜನರನ್ನು ರಂಜಿಸಿದರು.
ಕರ್ನಾಟಕ ನೌನೆಲೆಯ ಮುಖ್ಯಸ್ಥ ಫ್ಲ್ಯಾಗ್ ಕಮಾಂಡೆಂಟ್ ಆಫಿಸರ್ ರಿಯರ್ ಅಡ್ಮಿರಲ್ ವಿಕ್ರಮ್ ಮೆನನ್, ‘1971ರಲ್ಲಿ ಪಾಕಿಸ್ತಾನ ವಿರುದ್ಧ ನಡೆದ ಯುದ್ಧದಲ್ಲಿ ಡಿ.4ರಂದು ಕರಾಚಿಯ ಬಂದರಿನ ಮೇಲೆ ದಾಳಿ ನಡೆಸಿ ಭಾರತವು ವಿಜಯ ಸಾಧಿಸಿತು. ಈ ನೆನಪಿಗೆ ನೌಕಾದಿನ ಆಚರಿಸಲಾಗುತ್ತಿದೆ’ ಎಂದು ಕಾರ್ಯಕ್ರಮಕ್ಕೆ ಮುನ್ನ ಮಾಧ್ಯಮ ಪ್ರತಿನಿಧಿಗಳಿಗೆ ವಿವರಿಸಿದರು.
ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ನೌಕಾದಳದ ಹಿರಿಯ ಅಧಿಕಾರಿಗಳು ಪಾಲ್ಗೊಂಡಿದ್ದರು.
ಮೂರು ಯುದ್ಧನೌಕೆಗಳಿಂದ ಸಿಡಿಮದ್ದು ಪ್ರದರ್ಶನ ಕದಂಬ ನೌಕಾಬ್ಯಾಂಡ್‌ನಿಂದ ಮನಸೆಳೆದ ವಾದನ 1971ರ ಯುದ್ಧದ ವಿಜಯದ ನೆನಪಿಗೆ ಆಚರಣೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.