ADVERTISEMENT

ಶಿರಸಿ, ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆ: ಸದ್ದಿಲ್ಲದೆ ಶಾಲೆ ವಿಲೀನ ಪಟ್ಟಿ ಸಿದ್ಧ?

15 ಶಾಲೆ ಕೆಪಿಎಸ್ ಪರಿವರ್ತನೆ: 100ಕ್ಕೂ ಹೆಚ್ಚು ಶಾಲೆ ಬಾಗಿಲು ಮುಚ್ಚುವ ಆತಂಕ

ಗಣಪತಿ ಹೆಗಡೆ
Published 14 ನವೆಂಬರ್ 2025, 4:05 IST
Last Updated 14 ನವೆಂಬರ್ 2025, 4:05 IST
<div class="paragraphs"><p>ಶಾಲೆ</p></div>

ಶಾಲೆ

   

(ಸಾಂಕೇತಿಕ ಚಿತ್ರ)

ಕಾರವಾರ: ಶಿರಸಿ ಮತ್ತು ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷದಿಂದ ಹೊಸದಾಗಿ 15 ಕರ್ನಾಟಕ ಪಬ್ಲಿಕ್ ಶಾಲೆಗಳನ್ನು (ಕೆಪಿಎಸ್) ಆರಂಭಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಅದರ ಬೆನ್ನಲ್ಲೇ ಆಯಾ ಕೆಪಿಎಸ್‍ಗೆ ಸಮೀಪದ  ಶೂನ್ಯ ದಾಖಲಾತಿ ಹೊಂದಿರುವ ಮತ್ತು ಅತಿ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳ ಪಟ್ಟಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸದ್ದಿಲ್ಲದೆ ಸಿದ್ಧಪಡಿಸಿದೆ.

ADVERTISEMENT

‘ಕೆಪಿಎಸ್ ಆಗಿ ಪರಿವರ್ತನೆಗೊಳ್ಳಲಿರುವ ಶಾಲೆಗಳ 1 ರಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಕಡಿಮೆ ಸೌಕರ್ಯ ಮತ್ತು ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳನ್ನು ಕೆಪಿಎಸ್ ಶಾಲೆಯೊಂದಿಗೆ ವಿಲೀನಗೊಳಿಸಲು ಕ್ರಮವಾಗಬೇಕು’ ಎಂದು ಹೊಸದಾಗಿ ರಚನೆಗೊಳ್ಳಲಿರುವ ಕೆಪಿಎಸ್ ಶಾಲೆಗಳ ಪಟ್ಟಿಯಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಾರ್ಯದರ್ಶಿ ಆದೇಶಿಸಿದ್ದಾರೆ.

‘ಈಗಾಗಲೆ ಇರುವ ಕೆಪಿಎಸ್ ಮತ್ತು ಹೊಸದಾಗಿ ರಚನೆಯಾಗುತ್ತಿರುವ ಕೆಪಿಎಸ್ ವ್ಯಾಪ್ತಿಯ 5 ಕಿ.ಮೀ ವ್ಯಾಪ್ತಿಯಲ್ಲಿ ಕಡಿಮೆ ವಿದ್ಯಾರ್ಥಿಗಳಿರುವ ಶಾಲೆಗಳ ಪಟ್ಟಿ ಸಿದ್ಧಪಡಿಸಿಟ್ಟುಕೊಳ್ಳಲು ಸೂಚನೆ ಇರುವುದು ನಿಜ. ಪ್ರತಿ ಕೆಪಿಎಸ್ ವ್ಯಾಪ್ತಿಯಲ್ಲಿ ಸರಾಸರಿ 5 ರಿಂದ 6 ಶಾಲೆಗಳಿವೆ. ವಿಲೀನ ಪ್ರಕ್ರಿಯೆ ನಡೆದರೆ ಜಿಲ್ಲೆಯ 100ಕ್ಕೂ ಹೆಚ್ಚು ಶಾಲೆಗಳು ಬಾಗಿಲು ಮುಚ್ಚಬಹುದು. ಈಗಾಗಲೆ ಪಟ್ಟಿಯೂ ಸಿದ್ಧಗೊಂಡಿದೆ. ಆದರೆ, ಅದನ್ನು ಬಹಿರಂಗಪಡಿಸಲು ಇಲಾಖೆ ಮುಂದಾಗುತ್ತಿಲ್ಲ’ ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಜಿಲ್ಲೆಯಲ್ಲಿರುವ ಈಗಾಗಲೆ ಕಾರ್ಯನಿರ್ವಹಿಸುತ್ತಿದ್ದ ಪ್ರೌಢಶಾಲೆಗಳನ್ನು ಕೆಪಿಎಸ್ ಶಾಲೆಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 8 ಮತ್ತು ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ7 ಶಾಲೆಗಳು ಮೇಲ್ದರ್ಜೆಗೆ ಏರಲಿವೆ.

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲೇ ಎರಡೂ ಶೈಕ್ಷಣಿಕ ಜಿಲ್ಲೆ ವ್ಯಾಪ್ತಿಯ 21 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಇದೆ. 140ಕ್ಕೂ ಹೆಚ್ಚು ಶಾಲೆಗಳಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳಿದ್ದಾರೆ. ವರ್ಷದಿಂದ ವರ್ಷಕ್ಕೆ ಸರ್ಕಾರಿ ಶಾಲೆಗಳಲ್ಲಿ ದಾಖಲಾತಿ ಪ್ರಮಾಣ ಕುಸಿಯುತ್ತಿದೆ. ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯ 913 ಪ್ರಾಥಮಿಕ ಶಾಲೆಯಲ್ಲಿ 36,689 ಮತ್ತು 49 ಪ್ರೌಢಶಾಲೆಗಳಲ್ಲಿ 6,562 ವಿದ್ಯಾರ್ಥಿಗಳಿದ್ದಾರೆ. ಶಿರಸಿ ಶೈಕ್ಷಣಿಕ ಜಿಲ್ಲೆಯ 1,089 ಪ್ರಾಥಮಿಕ ಶಾಲೆಯಲ್ಲಿ 41,224 ಮತ್ತು 76 ಪ್ರೌಢಶಾಲೆಗಳಲ್ಲಿ 7,259 ವಿದ್ಯಾರ್ಥಿಗಳಿದ್ದಾರೆ.

ಗಡಿಭಾಗದ ಶಾಲೆಗಳಿಗೆ ಏಟು
ರಾಜ್ಯದ ಗಡಿಭಾಗದಲ್ಲಿರುವ ಕಾರವಾರ ತಾಲ್ಲೂಕಿನಲ್ಲಿ ಕಳೆದ ಶೈಕ್ಷಣಿಕ ವರ್ಷದಲ್ಲಿ ಐದು ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ ಇರಲಿಲ್ಲ. ಈ ಬಾರಿಯೂ ಮೂರು ಶಾಲೆಗಳು ಇದೇ ಸ್ಥಿತಿಗೆ ತಲುಪಿವೆ. ಜೊಯಿಡಾ ತಾಲ್ಲೂಕಿನಲ್ಲಿಯೂ ಪ್ರತಿ ವರ್ಷ ಸರಾಸರಿ 2–3 ಶಾಲೆಗಳು ಬಾಗಿಲು ಮುಚ್ಚುತ್ತಿವೆ. ಕಡಿಮೆ ವಿದ್ಯಾರ್ಥಿಗಳಿರುವ ಶಾಲೆ ವಿಲೀನಗೊಳಿಸಿದರೆ ಗಡಿಭಾಗದ ಹಲವು ಕನ್ನಡ ಶಾಲೆಗಳು ಮುಚ್ಚಬಹುದು ಎಂಬ ಆತಂಕ ವ್ಯಕ್ತಪಡಿಸುತ್ತಾರೆ ಚಿತ್ತಾಕುಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸೂರಜ್ ದೇಸಾಯಿ.

ಎಲ್ಲೆಲ್ಲಿ ಹೊಸ ಕೆಪಿಎಸ್ ಆರಂಭ

ಉತ್ತರ ಕನ್ನಡ ಶೈಕ್ಷಣಿಕ ಜಿಲ್ಲೆಯಲ್ಲಿ ಭಟ್ಕಳದ ತೆಂಗಿನಗುಂಡಿ, ಗೊರಟೆ, ಅಂಕೋಲಾದ ಅವರ್ಸಾ, ಹಿಲ್ಲೂರು, ಕುಮಟಾದ ಅಘನಾಶಿನಿ, ಮಾದನಗೇರಿ, ಹೊನ್ನಾವರದ ನಾಗಂತೂರು. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ ಹಳಿಯಾಳದ ತೇರಗಾಂವ, ಜೊಯಿಡಾದ ರಾಮನಗರ, ದಾಂಡೇಲಿ, ಸಿದ್ದಾಪುರದ ಹಾಳದಕಟ್ಟಾ, ಮುಂಡಗೋಡದ ಮೈನಳ್ಳಿ, ಹುನಗುಂದ, ಶಿರಸಿಯ ಬಂಡಲ ಮತ್ತು ಮಾರಿಕಾಂಬಾ ಪದವಿಪೂರ್ವ ಕಾಲೇಜ್‌ನಲ್ಲಿ ಕೆಪಿಎಸ್ ಮುಂಬರುವ ಜೂನ್‌ನಿಂದ ಆರಂಭಗೊಳ್ಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.