ಶಿರಸಿ ತಾಲ್ಲೂಕಿನ ಅಜ್ಜೀಬಳದಲ್ಲಿರುವ ಗೋಶಾಲೆ ಕಟ್ಟಡ
ಶಿರಸಿ: ಬಿಡಾಡಿ, ಅನಾಥ ಹಾಗೂ ವಧಾಲಯಗಳಿಗೆ ಸಾಗಿಸುವ ವೇಳೆ ರಕ್ಷಿಸಿದ ಜಾನುವಾರುಗಳ ಪಾಲನೆಗಾಗಿ ತಾಲ್ಲೂಕಿನ ಅಜ್ಜೀಬಳದಲ್ಲಿ ವರ್ಷದ ಹಿಂದೆ ಗೋಶಾಲೆ ನಿರ್ಮಿಸಲಾಗಿದ್ದು, ಇನ್ನೂ ಉದ್ಘಾಟನೆಗೊಂಡಿಲ್ಲ. ಗೋಶಾಲೆ ನಿರ್ವಹಣೆಗೆ ಅನುದಾನ ಬಿಡುಗಡೆಯಾಗದ ಕಾರಣ ನೂತನ ಕಟ್ಟಡ ವ್ಯರ್ಥವಾಗಿದೆ.
ಈ ಹಿಂದಿನ ಸರ್ಕಾರವು, ಜಾನುವಾರುಗಳಿಗೆ ಆಶ್ರಯ ನೀಡಲು ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆ ನಿರ್ಮಿಸಲು ಮುಂದಾಗಿತ್ತು. ಅದರಂತೆ, ಶಿರಸಿ ತಾಲ್ಲೂಕಿನ ಅಜ್ಜೀಬಳದಲ್ಲಿ ಸುಮಾರು ಏಳು ಎಕರೆ ಜಾಗ ಗುರುತಿಸಿ, ₹50 ಲಕ್ಷ ಅನುದಾನದಲ್ಲಿ ಗೋಶಾಲೆ ಕಟ್ಟಡ ನಿರ್ಮಿಸಲಾಗಿದೆ.
ಈ ಗೋಶಾಲೆಯಲ್ಲಿ ಗರಿಷ್ಠ 100 ಗೋವುಗಳಿಗೆ ಆಶ್ರಯ ನೀಡಬಹುದಾಗಿದೆ. ಗೋವುಗಳಿಗೆ ಮೇವು ಒದಗಿಸಲು ಹುಲ್ಲುಗಾವಲು, ಬೇಲಿ ವ್ಯವಸ್ಥೆ, 50,000 ಲೀಟರ್ ಸಾಮರ್ಥ್ಯದ ಟ್ಯಾಂಕ್, ವಿದ್ಯುತ್, ಬೋರ್‌ವೆಲ್‌ಗಳ ಮೂಲಕ ನೀರಿನ ವ್ಯವಸ್ಥೆ, ಗೋಕಟ್ಟೆಗಳ ನಿರ್ಮಾಣ, ಮೇವು ಸಂಗ್ರಹಣಾ ಗೋದಾಮು, ಪಶು ವೈದ್ಯಾಧಿಕಾರಿಗಳ ವಸತಿ ಗೃಹ ಕಾಮಗಾರಿ ಮುಕ್ತಾಯಗೊಂಡು ವರ್ಷ ಕಳೆದಿದೆ.
ಇಲ್ಲಿ ಜಾನುವಾರುಗಳನ್ನು ಇರಿಸಿ, ನಿರ್ವಹಣೆ ಮಾಡಲು ಸರ್ಕಾರದಿಂದ ಅನುದಾನ ಬಿಡುಗಡೆಯಾಗಿಲ್ಲ. ಈ ಕಾರಣದಿಂದಲೇ ಇಲಾಖೆ ಅಧಿಕಾರಿಗಳು ಗೋಶಾಲೆಯನ್ನು ಈವರೆಗೂ ಉದ್ಘಾಟನೆ ಮಾಡಿಲ್ಲ.
‘ಅಜ್ಜೀಬಳದಲ್ಲಿ ನಿರ್ಮಿಸಿದ ಗೋಶಾಲೆಯಲ್ಲಿ ಗರಿಷ್ಠ 100 ಜಾನುವಾರುಗಳಿಗೆ ಆಶ್ರಯ ಒದಗಿಸಲು ಅವಕಾಶವಿದೆ. ಪ್ರತಿ ತಿಂಗಳ ನಿರ್ವಹಣೆಗೆ ಕನಿಷ್ಠ ₹5ರಿಂದ ₹6 ಲಕ್ಷ ಬೇಕಾಗುತ್ತದೆ. ಅನುದಾನ ಬಿಡುಗಡೆ ಮಾಡುವಂತೆ ಇಲಾಖೆ ಹಾಗೂ ಸರ್ಕಾರಕ್ಕೆ ಎರಡು ಬಾರಿ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುದಾನ ಲಭ್ಯವಿಲ್ಲ ಎಂಬುದಾಗಿ ತಿಳಿಸಿದ್ದಾರೆ’ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
‘ಗೋಶಾಲೆಯನ್ನು ಒಮ್ಮೆ ಆರಂಭ ಮಾಡಿದರೆ ಪ್ರತಿ ತಿಂಗಳ ನಿರ್ವಹಣೆಗೆ ಅನುದಾನ ಅವಶ್ಯವಿರುತ್ತದೆ. ಅನುದಾನ ಲಭ್ಯವಾದರೆ ಉದ್ಘಾಟನೆ ಮಾಡಬಹುದು’ ಎಂದರು.
‘ಸರ್ಕಾರದ ನಿಯಮದ ಪ್ರಕಾರ ಗೋಶಾಲೆಯಲ್ಲಿ ಆಶ್ರಯ ಪಡೆಯುವ ಗೋವುಗಳು ಬಿಡಾಡಿ ಗೋವುಗಳಾಗಿರಬೇಕು. ಅಕ್ರಮವಾಗಿ ಸಾಗಿಸುವಾಗ ಪೊಲೀಸರು ವಶಪಡಿಸಿಕೊಂಡ ಗೋವುಗಳು, ಅಶಕ್ತ ಗೋವುಗಳು ಅಥವಾ ಗೋವನ್ನು ಸಾಕಲು ಸಾಧ್ಯವಿಲ್ಲವೆಂದಾಗ ನಿಯೋಜಿತ ಸಮಿತಿ ಶಿಫಾರಸು ನೀಡಿದರೆ ಅಂತಹವುಗಳನ್ನು ಇಲ್ಲಿಗೆ ಕಳುಹಿಸಬಹುದು’ ಎಂದು ಪಶುಪಾಲನೆ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಹಿರಿಯ ಅಧಿಕಾರಿ ಹೇಳಿದರು.
‘ಆದರೆ, ಅಗತ್ಯ ಅನುದಾನವಿದ್ದರೆ ಮಾತ್ರ ಜಾನುವಾರುಗಳನ್ನು ಗೋಶಾಲೆಗೆ ಸೇರಿಸಿಕೊಳ್ಳಲು ಸಾಧ್ಯವಾಗುತ್ತದೆ. ಸರ್ಕಾರ ಈ ಬಗ್ಗೆ ತಕ್ಷಣ ಗಮನಹರಿಸಿ ಅನುದಾನ ಬಿಡುಗಡೆ ಮಾಡಬೇಕು. ಶಾಸಕ ಭೀಮಣ್ಣ ನಾಯ್ಕ ಅವರು ಈ ನಿಟ್ಟಿನಲ್ಲಿ ಯತ್ನಿಸುತ್ತಿದ್ದು, ಅನುದಾನ ಲಭ್ಯವಾಗುವ ವಿಶ್ವಾಸವಿದೆ’ ಎಂದರು.
ಗೋಶಾಲೆ ಪೂರ್ಣಗೊಂಡಿದೆ. ನಿರ್ವಹಣೆಯ ಅನುದಾನಕ್ಕೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದ್ದು, ಅನುದಾನ ಲಭ್ಯತೆಯ ನಂತರ ಗೋ ಶಾಲೆ ಆರಂಭಿಸಲಾಗುತ್ತದೆಡಾ.ಕೆ.ಎಂ.ಮೋಹನಕುಮಾರ, ಉಪನಿರ್ದೇಶಕ, ಪಶು ಪಾಲನೆ ಮತ್ತು ಪಶು ವೈದ್ಯಕೀಯ ಇಲಾಖೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.