ADVERTISEMENT

ಕುಮಟಾ: ಆಡಳಿತ ಮಂಡಳಿ ಕಾಣದ ಕಲ್ಲಬ್ಬೆ ಗ್ರಾಮ ಅರಣ್ಯ

2007 ರಿಂದಲೂ ಎಸಿಎಫ್ ಆಡಳಿತಾಧಿಕಾರಿ: ಹೊಸ ಮಂಡಳಿ ರಚನೆಗೆ ಹಕ್ಕೊತ್ತಾಯ

ಎಂ.ಜಿ.ನಾಯ್ಕ
Published 13 ಜನವರಿ 2025, 4:56 IST
Last Updated 13 ಜನವರಿ 2025, 4:56 IST
ಕುಮಟಾ ತಾಲ್ಲೂಕಿನ ಕಲ್ಲಬ್ಬೆ-ಹೊಸಾಡ-ಮೂರೂರು ವಿಲೇಜ್ ಫಾರೆಸ್ಟ್‌ ನೋಟ 
ಕುಮಟಾ ತಾಲ್ಲೂಕಿನ ಕಲ್ಲಬ್ಬೆ-ಹೊಸಾಡ-ಮೂರೂರು ವಿಲೇಜ್ ಫಾರೆಸ್ಟ್‌ ನೋಟ    

ಕುಮಟಾ: ತಾಲ್ಲೂಕಿನ ಕಲ್ಲಬ್ಬೆ-ಮೂರೂರು-ಹೊಸಾಡ ಸೇರಿದಂತೆ ಎರಡು ಗ್ರಾಮ ಪಂಚಾಯಿತಿಗಳ ಎಂಟು ಹಳ್ಳಿಗಳನ್ನೊಳಗೊಂಡ ಸುಮಾರು 1,800 ಹೆಕ್ಟೇರ್ ನೈಸರ್ಗಿಕ ಅರಣ್ಯ ಪ್ರದೇಶವನ್ನೊಳಗೊಂಡ ಗ್ರಾಮ ಅರಣ್ಯಕ್ಕೆ (ವಿಲೇಜ್ ಫಾರೆಸ್ಟ್) ಹೊಸ ಆಡಳಿತ ಸಮಿತಿ ರಚನೆಯಾಗದೆ ಸುಮಾರು ಇಪ್ಪತ್ತು ವರ್ಷ ಕಳೆದಿದೆ.

ಈಚೆಗೆ ಶತಮಾನೋತ್ಸವ ಆಚರಿಸಿಕೊಂಡ ತಾಲ್ಲೂಕಿನ ಹಳಕಾರ ಗ್ರಾಮ ಅರಣ್ಯದ ಜೊತೆಯಲ್ಲೇ ಅಸ್ತಿತ್ವಕ್ಕೆ ಬಂದ ಕಲ್ಲಬ್ಬೆ-ಹೊಸಾಡ-ಮೂರೂರು ವಿಲೇಜ್ ಫಾರೆಸ್ಟ್ ಅನ್ನು ಸುಮಾರು 55 ವರ್ಷಗಳ ಹಿಂದೆ ಉಳಿಸಿಕೊಳ್ಳಲು ಊರಿನ ಪರಿಸರ ಪ್ರೇಮಿಗಳು ಸುಮಾರು ಹತ್ತು ವರ್ಷ ಸರ್ಕಾರದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿ ಯಶಸ್ಸು ಕಂಡಿದ್ದರು. ಆಡಳಿತಾಧಿಕಾರಿ ಗ್ರಾಮ ಅರಣ್ಯದ ಆಡಳಿತ ನೋಡಿಕೊಳ್ಳುತ್ತಿದ್ದಾರೆ.

1923 ರಲ್ಲಿ ಬೆಲೆ ಬಾಳುವ ಮರಮಟ್ಟುಗಳ ಅರಣ್ಯವನ್ನು ರಕ್ಷಿಸಲು ಬ್ರಿಟಿಷ್ ಸರ್ಕಾರ ನೇಮಿಸಿದ ಅರಣ್ಯ ವಸಾಹತು ಅಧಿಕಾರಿ ಜಿ.ಎಫ್.ಎಸ್.ಕಾಲಿನ್ ಎನ್ನುವವರು ಅರಣ್ಯ ಅಧ್ಯಯನ ಮಾಡಿ ಜನರೇ ಅರಣ್ಯವನ್ನು ರಕ್ಷಿಸಿಕೊಂಡಿದ್ದು, ಅದರ ಉತ್ಪನ್ನ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಅವರಿಗೇ ಅದರ ಉಸ್ತುವಾರಿ ವಹಿಸುವುದು ಸೂಕ್ತ ಎಂದು ವರದಿ ನೀಡಿದರು. ಹೀಗಾಗಿ ಕೆಲ ಕಟ್ಟುನಿಟ್ಟಿನ ನಿಯಮ ರೂಪಿಸಿ ಜಿಲ್ಲಾಧಿಕಾರಿ ಹಾಗು ತಹಶೀಲ್ದಾರ್ ಆಡಳಿತ ಅಡಿಯಲ್ಲಿ ತಾಲ್ಲೂಕಿನಲ್ಲಿ ಸುಮಾರು 9 ಗ್ರಾಮ ಅರಣ್ಯ ರಚಿಸಿ ಗ್ರಾಮಸ್ಥರ ನಿರ್ವಹಣೆಗೆ ನೀಡಲಾಗಿತ್ತು.

ADVERTISEMENT

ಸುಮಾರು 20 ವರ್ಷಗಳ ಹಿಂದೆ ಆಡಳಿತ ಲೋಪ ಎಸಗಿದ ಆಡಳಿತ ಸಮಿತಿಯನ್ನು ಗ್ರಾಮಸ್ಥರ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ವಜಾಗೊಳಿಸಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯನ್ನು ಆಡಳಿತಾಧಿಕಾರಿಯಾಗಿ ನೇಮಿಸಿದ್ದರು.

‘ಎರಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲಬ್ಬೆ, ಮೂರೂರು, ಹೊಸಾಡ, ಬೊಗರಿಬೈಲ,ಕುಡುವಳ್ಳಿ, ಕಂದವಳ್ಳಿ, ಹಟ್ಟಿಕೇರಿ, ಬಸವನಕೆರೆ ಮುಂತಾದ ಗ್ರಾಮಗಳ ವ್ಯಾಪ್ತಿಯಲ್ಲಿರುವ ಅರಣ್ಯ ಸಂರಕ್ಷಣೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಹಳಕಾರ ಗ್ರಾಮ ಅರಣ್ಯದ ಮಾದರಿಯಲ್ಲೇ ಹೊಸ ಸಮಿತಿ ರಚಿಸುವುದು ಸೂಕ್ತ’ ಎಂದು ಕಲ್ಲಬ್ಬೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರವಿ ಹೆಗಡೆ ಹೇಳಿದರು.

2007 ರಲ್ಲಿ ಕಲ್ಲಬ್ಬೆ ಗ್ರಾಮ ಅರಣ್ಯಕ್ಕೆ ಕುಮಟಾ ಎಸಿಎಫ್ ಆಡಳಿತಾಧಿಕಾರಿ ಎಂದು ನೇಮಿಸಿ ಉಪವಿಭಾಗಾಧಿಕಾರಿ ಆದೇಶಿಸಿದ್ದರು. ಅದು ಈಗಲೂ ಮುಂದುವರಿದಿದ್ದು ಗ್ರಾಮಸ್ಥರು ಹೊಸ ಆಡಳಿತ ಸಮಿತಿ ರಚನೆಗೆ ಮುಂದಾಗಲಿಲ್ಲ.
–ಕೃಷ್ಣ ಗೌಡ, ಕುಮಟಾ ಎಸಿಎಫ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.