ADVERTISEMENT

ಸಂಪುಟದಿಂದ ಅಶ್ವತ್ಥನಾರಾಯಣ ವಜಾಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 15 ಮೇ 2022, 14:18 IST
Last Updated 15 ಮೇ 2022, 14:18 IST
ವಿಶ್ವ ಗಜಾನನ ಗೌಡ
ವಿಶ್ವ ಗಜಾನನ ಗೌಡ   

ಕಾರವಾರ: ‘ಪಿ.ಎಸ್.ಐ ನೇಮಕಾತಿ ಹಾಗೂ ಲ್ಯಾಪ್‌ಟಾಪ್ ಹಗರಣದಲ್ಲಿ ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರ ಹೆಸರೂ ಕೇಳಿಬಂದಿದೆ. ಅವರನ್ನು ಸಂಪುಟದಿಂದ ಉಚ್ಛಾಟನೆ ಮಾಡಬೇಕು ಎಂದು ಮೇ 17ಕ್ಕೆ ದಾಂಡೇಲಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ’ ಎಂದು ಎನ್.ಎಸ್.ಯು.ಐ ಜಿಲ್ಲಾ ಘಟಕದ ಅಧ್ಯಕ್ಷ ವಿಶ್ವ ಗಜಾನನ ಗೌಡ ತಿಳಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸುಮಾರು ₹ 150 ಕೋಟಿ ಮೊತ್ತದ ಹಗರಣ ಇದಾಗಿದೆ. ಅವರನ್ನು ಸಂಪುಟದಲ್ಲಿ ಮುಂದುವರಿಸಬಾರದು ಎಂದು ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗುವುದು’ ಎಂದರು.

‘ಸರ್ಕಾರವು ಕೋವಿಡ್ ನಂತರ ವಿದ್ಯಾರ್ಥಿಗಳನ್ನು ಕಡೆಗಣಿಸುತ್ತಿದೆ. ಕಲಿಕಾ ಸಾಮಗ್ರಿಗಳ ಮೇಲೆ ಜಿ.ಎಸ್.ಟಿ ವಿಧಿಸಿದ್ದರಿಂದ ಹೊರೆಯಾಗಿದೆ. ಮಳೆಗಾಲದಲ್ಲಿ ಕೊಡೆಗಳ ಖರೀದಿಯೂ ದುಬಾರಿಯಾಗಿದೆ. ಗ್ರಾಮೀಣ ಭಾಗಗಳಿಗೆ ಬಸ್ ಸಂಚಾರ ಸಮರ್ಪಕವಾಗಿಲ್ಲ. ಸಿದ್ದಾಪುರದಲ್ಲಿ ಸರ್ಕಾರಿ ಪದವಿ ಕಾಲೇಜು ಸಮೀಪ ಬಸ್ ನಿಲ್ದಾಣವಿಲ್ಲ. ಈ ಎಲ್ಲ ಕುಂದುಕೊರತೆಗಳನ್ನು ಸರಿಪಡಿಸಲು ಆಗ್ರಹಿಸಿ ಮುಂದಿನ ದಿನಗಳಲ್ಲಿ ವಾಹನ ಸಂಚಾರ ತಡೆದು ಪ್ರತಿಭಟಿಸಲೂ ಚಿಂತಿಸಲಾಗಿದೆ’ ಎಂದು ಹೇಳಿದರು.

ADVERTISEMENT

‘ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಕೀರ್ತಿ ಗಣೇಶ ಅವರು ಜಿಲ್ಲೆಯಲ್ಲಿ ಸಂಘಟನಾ ಕಾರ್ಯಗಳನ್ನು ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಈ ವಾರದಲ್ಲಿ ವಿಧಾನಸಭೆ ಕ್ಷೇತ್ರವಾರು ಹಾಗೂ ತಾಲ್ಲೂಕು ಮಟ್ಟದಲ್ಲಿ ಪದಾಧಿಕಾರಿಗಳನ್ನು ನೇಮಕ ಮಾಡಲಾಗುವುದು. ಪ್ರತಿ ವಿದ್ಯಾರ್ಥಿಯೂ ಸಂಘಟನೆಯ ಸದಸ್ಯರಾಗಬೇಕು ಎಂಬ ಗುರಿ ಹೊಂದಿದ್ದೇವೆ’ ಎಂದರು.

ಪ್ರಮುಖರಾದ ಅಶ್ರಫ್, ಇದ್ರಿಸ್ ಖಾನ್, ಕಾರ್ತಿಕ್ ನಾಯ್ಕ, ಪುನೀತ್ ನಾಯ್ಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.