ADVERTISEMENT

ಚಂಡಮಾರುತದ ವದಂತಿ: ನಿರ್ಲಕ್ಷಿಸಲು ಸೂಚನೆ

​ಪ್ರಜಾವಾಣಿ ವಾರ್ತೆ
Published 17 ಜುಲೈ 2022, 12:38 IST
Last Updated 17 ಜುಲೈ 2022, 12:38 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕಾರವಾರ: ಜಿಲ್ಲೆಯಾದ್ಯಂತ ಶನಿವಾರ ಅಬ್ಬರಿಸಿದ್ದ ಮಳೆಯು, ಭಾನುವಾರ ಬಿಡುವ ನೀಡಿತ್ತು. ನಿರಂತರ ಮಳೆಯಿಂದ ಕಂಗೆಟ್ಟಿದ್ದ ಹಳ್ಳಗಳು, ನದಿಗಳ ತೀರದ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಈ ನಡುವೆ, ಜುಲೈ 20ರಂದು ಚಂಡಮಾರುತ ಬೀಸಲಿದೆ ಎಂಬ ವದಂತಿಯ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲವು ದಿನಗಳಿಂದ ಭಾರಿ ಮಳೆಯ ಕಾರಣ ಕಂಗೆಟ್ಟಿರುವ ಜನರನ್ನು ಇದು ಆತಂಕಕ್ಕೆ ದೂಡಿದೆ.

ಈ ಕುರಿತು ಸ್ಪಷ್ಟನೆ ನೀಡಿರುವ ನೈಸರ್ಗಿಕ ವಿಕೋಪಗಳ ನಿರ್ವಹಣೆಗೆ ಕಾರವಾರದಲ್ಲಿ ತೆರೆಯಲಾಗಿರುವ ಕೇಂದ್ರದ ಅಧಿಕಾರಿಗಳು, ‘ಚಂಡಮಾರುತದ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಅಥವಾ ಕರ್ನಾಟಕ ರಾಜ್ಯ ಪ್ರಾಕೃತಿಕ ವಿಕೋ‍ಪಗಳ ನಿರ್ವಹಣಾ ಕೇಂದ್ರದಿಂದ ಯಾವುದೇ ಮುನ್ಸೂಚನೆಗಳು ಇಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಬರುತ್ತಿರುವ ಮಾಹಿತಿಯಲ್ಲಿ ಯಾವುದೇ ಮೂಲವನ್ನೂ ಉಲ್ಲೇಖಿಸಿಲ್ಲ. ಹಾಗಾಗಿ, ಇದನ್ನು ನಿರ್ಲಕ್ಷಿಸಬಹುದು’ ಎಂದು ತಿಳಿಸಿದ್ದಾರೆ.

ADVERTISEMENT
ವಾಟ್ಸ್‌ಆ್ಯಪ್‌ಗೆ ಬರುತ್ತಿರುವ ಸಂದೇಶ

ಎರಡು ದಿನಗಳಿಂದ ಹಲವರ ವಾಟ್ಸ್‌ಆ್ಯಪ್‌ಗೆ ಬರುತ್ತಿರುವ ಸಂದೇಶದಲ್ಲಿ, ‘ಜುಲೈ 20ರಂದು ಚಂಡಮಾರುತವು ಗೋವಾ, ಕಾರವಾರ ಅಥವಾ ರತ್ನಗಿರಿ ತೀರದ ಕಡಗೆ ಚಲಿಸಲು ಪ್ರಾರಂಭಿಸುತ್ತದೆ. 26ರವರೆಗೆ ದೊಡ್ಡ ಪ್ರಮಾಣದಲ್ಲಿ ಇರಲಿದೆ. ಜುಲೈ 20ರಂದು ಇಡೀ ಗೋವಾ ಕೊಂಕಣ, ಮುಂಬೈ, ಪುಣೆ, ಸತಾರಾ, ಕೊಲ್ಲಾಪುರದಲ್ಲಿ ಭಾರಿ ಮಳೆಯಾಗಲಿದೆ. ಇನ್ನು ಎಂಟು ದಿನ ಕೊಂಕಣ, ಗೋವಾ, ಗೋಕರ್ಣ, ಮುಂಬೈಗೆ ಯಾರೂ ಪ್ರವಾಸಕ್ಕೆ ಹೋಗಬಾರದು’ ಎಂದು ಬರೆಯಲಾಗಿದೆ.

‘ಜುಲೈ 20ರಿಂದ 26ರವರೆಗೆ ಚಂಡಮಾರುತವು ಪೂರ್ಣ ಪ್ರಮಾಣದಲ್ಲಿರುತ್ತದೆ. ಆದ್ದರಿಂದ ಕರಾವಳಿಯ ನಾಗರಿಕರು ಎಚ್ಚರಿಕೆಯಿಂದ ಇರಬೇಕು. ಈ ಚಂಡಮಾರುತವು ಬಹಳ ಹಾನಿ ಮಾಡಬಲ್ಲದು. ಶುಕ್ರವಾರದ ವೇಳೆಗೆ ಮಳೆ ಕಡಿಮೆಯಾಗುತ್ತದೆ. ನಂತರ ಚಂಡಮಾರುತದೊಂದಿಗೆ ಮಳೆಯ ತೀವ್ರತೆ ಹೆಚ್ಚಲಿದೆ’ ಎಂದು ಬರೆಯಲಾಗಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.