ADVERTISEMENT

ಶಿರಸಿಯಲ್ಲಿ ಕಾರ್ಯಕರ್ತರ ಅದ್ಧೂರಿ ಸ್ವಾಗತ ಸ್ವೀಕರಿಸಿದ ಸಚಿವ ಶಿವರಾಮ ಹೆಬ್ಬಾರ

​ಪ್ರಜಾವಾಣಿ ವಾರ್ತೆ
Published 9 ಆಗಸ್ಟ್ 2021, 13:04 IST
Last Updated 9 ಆಗಸ್ಟ್ 2021, 13:04 IST
ಎರಡನೇ ಬಾರಿ ಸಚಿವರಾದ ಬಳಿಕ ಶಿರಸಿಗೆ ಮೊದಲ ಬಾರಿ ಭೇಟಿ ನೀಡಿದ ಶಿವರಾಮ ಹೆಬ್ಬಾರ ಅವರನ್ನು ಮಾರಿಕಾಂಬಾ ದೇವಾಲಯದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು
ಎರಡನೇ ಬಾರಿ ಸಚಿವರಾದ ಬಳಿಕ ಶಿರಸಿಗೆ ಮೊದಲ ಬಾರಿ ಭೇಟಿ ನೀಡಿದ ಶಿವರಾಮ ಹೆಬ್ಬಾರ ಅವರನ್ನು ಮಾರಿಕಾಂಬಾ ದೇವಾಲಯದ ಆವರಣದಲ್ಲಿ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು   

ಶಿರಸಿ: ಅತಿವೃಷ್ಟಿಯಿಂದ ಜಿಲ್ಲೆಯ ವಿವಿಧ ಸೇತುವೆಗಳ ಧಾರಣ ಸಾಮರ್ಥ್ಯದ ಮೇಲೆ ಬೀರಿರಬಹುದಾದ ಪರಿಣಾಮದ ಕುರಿತು ಪರಿಶೀಲಿಸಿ ವರದಿ ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವ ಶಿವರಾಮ ಹೆಬ್ಬಾರ ಹೇಳಿದರು.

ಎರಡನೇ ಬಾರಿ ಸಂಪುಟ ಸೇರ್ಪಡೆಗೊಂಡ ಬಳಿಕ ನಗರಕ್ಕೆ ಮೊದಲ ಬಾರಿ ಭೇಟಿ ನೀಡಿದ ಅವರನ್ನು ಮಾರಿಕಾಂಬಾ ದೇವಾಲಯದ ಎದುರು ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು.

ದೇವಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ‘ಸೇತುವೆಗಳಿಗೆ ಉಂಟಾದ ಹಾನಿಯಿಂದ ₹70ರಿಂದ 80 ಕೋಟಿ ಹಾನಿ ಸಂಭವಿಸಿರುವ ಅಂದಾಜಿದೆ. ನೀರಿನ ಮಟ್ಟ ಇಳಿಮುಖಗೊಂಡ ತಕ್ಷಣ ಪ್ರಮುಖ ಸೇತುವೆಗಳದುರಸ್ತಿ ಆರಂಭಿಸಲಾಗುವುದು’ ಎಂದರು.

ADVERTISEMENT

‘ಐದು ತಾಲ್ಲೂಕುಗಳಲ್ಲಿ ಕೃಷಿ ಹಾನಿ, ಆರು ತಾಲ್ಲೂಕುಗಳಲ್ಲಿ ತೋಟಗಾರಿಕಾ ಕ್ಷೇತ್ರದ ಹಾನಿ ಸಮೀಕ್ಷೆ ಪೂರ್ಣಗೊಂಡಿದೆ. ಮುಂದಿನ ವಾರದೊಳಗೆ ಜಿಲ್ಲೆಯ ಸಮಗ್ರ ಹಾನಿ ವಿವರ ಲಭಿಸಲಿದೆ. ಕೇಂದ್ರದ ತಂಡವೊಂದನ್ನು ಪರಿಶೀಲನೆಗೆ ಕಳುಹಿಸುವ ಕುರಿತು ಮುಖ್ಯಮಂತ್ರಿ ಅವರು ಕೇಂದ್ರ ಸರ್ಕಾರದ ಜತೆಗೂ ಮಾತನಾಡಿದ್ದಾರೆ’ ಎಂದರು.

‘ಮಳೆಗಾಲದ ಬಳಿಕ ಹಾನಿಯಾದ ಪ್ರದೇಶದಲ್ಲಿ ಪುನರ್ ನಿರ್ಮಾಣ ಕೆಲಸ ಕೈಗೊಳ್ಳಲಾಗುವುದು. ಸದ್ಯ ಮಳೆನೀರು ನುಗ್ಗಿದ್ದ 795 ಮನೆಗಳಿಗೆ ತುರ್ತು ಪರಿಹಾರ ವಿತರಿಸಲಾಗಿದೆ’ ಎಂದು ತಿಳಿಸಿದರು.

ಸಚಿವರು ಮಾರಿಕಾಂಬಾ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದ ವತಿಯಿಂದ ಸನ್ಮಾನ ಸ್ವೀಕರಿಸಿದರು. ಅವರನ್ನು ಸ್ವಾಗತಿಸಿದ ಬಳಿಕ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷ ರಾಘು ಶೆಟ್ಟಿ, ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಆರ್.ಜಿ. ನಾಯ್ಕ, ಉಪಾಧ್ಯಕ್ಷ ಸುಧೀಶ ಜೋಗಳೇಕರ, ಧರ್ಮದರ್ಶಿ ಶಿವಾನಂದ ಶೆಟ್ಟಿ, ಪ್ರಮುಖರಾದ ದ್ಯಾಮಣ್ಣ ದೊಡ್ಮನಿ, ನರಸಿಂಹ ಹೆಗಡೆ ಬಕ್ಕಳ, ನಂದನ ಸಾಗರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.