ADVERTISEMENT

ಆನ್‍ಲೈನ್‍ನಲ್ಲಿ ಸಾವಯವ ಬೀಜ ಮಾರಾಟ

ತೋಟಗಾರಿಕಾ ಕಾಲೇಜು ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸಿಕ್ಕ ವೇದಿಕೆ

ಗಣಪತಿ ಹೆಗಡೆ
Published 16 ಡಿಸೆಂಬರ್ 2021, 5:21 IST
Last Updated 16 ಡಿಸೆಂಬರ್ 2021, 5:21 IST
ಶಿರಸಿಯ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿನಿಯರು ಸಾವಯವ ಕೈತೋಟದ ಬೀಜಗಳ ಪೊಟ್ಟಣ ಸಿದ್ಧಪಡಿಸುತ್ತಿರುವುದು
ಶಿರಸಿಯ ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿನಿಯರು ಸಾವಯವ ಕೈತೋಟದ ಬೀಜಗಳ ಪೊಟ್ಟಣ ಸಿದ್ಧಪಡಿಸುತ್ತಿರುವುದು   

ಶಿರಸಿ: ಇಲ್ಲಿನ ತೋಟಗಾರಿಕಾ ಕಾಲೇಜು ವಿದ್ಯಾರ್ಥಿಗಳು ಸಾವಯವ ಪದ್ಧತಿಯಲ್ಲಿ ಸಿದ್ಧಪಡಿಸುವ ಕೈತೋಟ ಬೀಜಗಳಿಗೆ ಈ ಬಾರಿ ಆನ್‍ಲೈನ್ ಮಾರುಕಟ್ಟೆ ಸಿಕ್ಕಿದೆ.

ಹೊನ್ನಾವರದ ರೇವಣಸಿದ್ದೇಶ್ ಜಿ.ಎಸ್. ಎಂಬುವವರು ‘www.krushimitra.com’ ವೆಬ್‍ಸೈಟ್ ಮೂಲಕ ವಿದ್ಯಾರ್ಥಿಗಳು ಸಿದ್ಧಪಡಿಸಿದ ಕೈತೋಟದ ಬೀಜಗಳ ಮಾರಾಟ ಪ್ರಕ್ರಿಯೆಗೆ ಕೈಜೋಡಿಸಿದ್ದಾರೆ. ಕೇವಲ ವಾರದ ಅವಧಿಯಲ್ಲಿ ಸುಮಾರು ಒಂದು ಸಾವಿರದಷ್ಟು ಪೊಟ್ಟಣಗಳು ಮಾರಾಟ ಆಗಿವೆ.

ತೋಟಗಾರಿಕಾ ವಿಜ್ಞಾನ ವಿಭಾಗದ ಏಳನೇ ಸೆಮಿಸ್ಟರ್ ವಿದ್ಯಾರ್ಥಿಗಳು ಪ್ರಾಯೋಗಿಕ ಜ್ಞಾನಕ್ಕೆ ಸಾವಯವ ಕೈತೋಟದ ಬೀಜಗಳನ್ನು ಪ್ರತಿವರ್ಷ ಸಿದ್ಧಪಡಿಸುತ್ತಾರೆ. ಅದನ್ನು ಸ್ಥಳೀಯವಾಗಿ ಮಾರಾಟ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ಆನ್‍ಲೈನ್ ಮಾರುಕಟ್ಟೆಯಲ್ಲೂ ಈ ಬೀಜ ಲಭಿಸುತ್ತಿರುವ ಪರಿಣಾಮ ಹೊರ ಜಿಲ್ಲೆಗಳಿಂದಲೂ ಬೇಡಿಕೆ ಬರುತ್ತಿದೆ.

ADVERTISEMENT

16 ಬಗೆಯ ತರಕಾರಿ ಬೀಜಗಳು ಪ್ರತಿ ಕಿಟ್‍ನಲ್ಲಿವೆ. ಹಾಗಲಕಾಯಿ, ಬದನೆ, ಕೊತ್ತಂಬರಿ, ಪಾಲಕ್, ಹರಿವೆ, ಮೂಲಂಗಿ, ಕುಂಬಳಕಾಯಿ,ಸಾಂಬರ ಸೌತೆ ಸೇರಿ ವಿವಿಧ ಬಗೆಯ ತರಕಾರಿ ಬೀಜಗಳಿವೆ. ₹150 ಬೆಲೆಯ ಕಿಟ್‍ ಇದಾಗಿದೆ.

‘ಸುರಕ್ಷತೆ ಆಧಾರಿತ ಕೃಷಿ’ ಅಡಿಯಲ್ಲಿ ಸಾವಯವ ಪದ್ಧತಿಯಲ್ಲಿ ಪ್ರತಿ 20 ವಿದ್ಯಾರ್ಥಿಗಳ ತಂಡ ಎರಡು ತಿಂಗಳ ಅವಧಿಯಲ್ಲಿ ಬೀಜಗಳ ಕಿಟ್ ಸಿದ್ಧಪಡಿಸುತ್ತದೆ. ಈ ಬಾರಿ ಹಿಂದಿಗಿಂತ ಬೇಡಿಕೆ ಹೆಚ್ಚು ಸಿಗುತ್ತಿದೆ. ಆನ್‍ಲೈನ್‍ನಲ್ಲೂ ಲಭ್ಯವಿರುವ ಕಾರಣ ಹೊರಗಿನಿಂದ ಬೇಡಿಕೆ ಪ್ರಮಾಣ ಏರಿಕೆ ಕಂಡಿದೆ’ ಎನ್ನುತ್ತಾರೆ ತೋಟಗಾರಿಕಾ ವಿಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಿವಾನಂದ ಹೊಂಗಲ್.

‘ಪೌಷ್ಟಿಕ ತರಕಾರಿಗಳ ಕೈತೋಟ ನಿರ್ಮಿಸಲು ಜನರಲ್ಲಿ ಈಚಿನ ದಿನದಲ್ಲಿ ಆಸಕ್ತಿ ಹೆಚ್ಚಿದೆ. ಕೋವಿಡ್‍ ನಂತರ ಮನೆಯಲ್ಲೇ ತರಕಾರಿ, ಹಣ್ಣು ಬೆಳೆಯಲು ಜನರು ಮುಂದಾಗುತ್ತಿರುವ ಪರಿಣಾಮ ವಿದ್ಯಾರ್ಥಿಗಳು ಸಿದ್ಧಪಡಿಸುವ ಕಿಟ್ ಹೆಚ್ಚೆಚ್ಚು ಮಾರಾಟ ಕಾಣುತ್ತಿದೆ’ ಎಂದರು.

‘ಆಫ್‍ಲೈನ್ ಮಾರುಕಟ್ಟೆಯಲ್ಲೂ ಬೀಜದ ಪೊಟ್ಟಣಗಳನ್ನು ಮಾರುತ್ತಿದ್ದೇವೆ. ಆನ್‍ಲೈನ್ ಮೂಲಕ ದಿನ ನೂರಾರು ಪೊಟ್ಟಣಗಳಿಗೆ ಬೇಡಿಕೆ ಬರುತ್ತಿದ್ದು ಅದನ್ನು ಹೊಂದಿಸಿಕೊಡಲಾಗುತ್ತಿದೆ’ ಎಂದು ವಿದ್ಯಾರ್ಥಿಗಳಾದ ನೀಲಂ, ಸಚಿನ್ ಹೇಳಿದರು.

ಮೌಲ್ಯವರ್ಧಿತ ಉತ್ಪನ್ನಕ್ಕೆ ಮಾರುಕಟ್ಟೆ: ‘ವೆಬ್‍ಸೈಟ್ ಮೂಲಕ ಕೃಷಿ ಸಂಬಂಧಿತ ಮಾಹಿತಿಯನ್ನು ಜನರಿಗೆ ನೀಡುವುದು ಉದ್ದೇಶವಾಗಿತ್ತು. ಅದಕ್ಕೆ ಪೂರಕ ಮಾಹಿತಿಯನ್ನು ಆಯಾ ರೈತರಿಂದಲೇ ಪಡೆದುಕೊಳ್ಳಲು ಅನುಕೂಲ ಮಾಡಿಕೊಡುತ್ತಿದ್ದೇವೆ. ತೋಟಗಾರಿಕಾ ಕಾಲೇಜಿನ ವಿದ್ಯಾರ್ಥಿಗಳ ಪರಿಶ್ರಮಕ್ಕೆ ಸೂಕ್ತ ವೇದಿಕೆ ಕಲ್ಪಿಸಲು ಬೀಜಗಳ ಪೊಟ್ಟಣ ಮಾರಾಟಕ್ಕೆ ಅವಕಾಶ ನೀಡಲಾಗಿದೆ’ ಎನ್ನುತ್ತಾರೆ ಕೃಷಿಮಿತ್ರ ವೆಬ್‍ಸೈಟ್ ಮುನ್ನಡೆಸುವ ಹೊನ್ನಾವರದ ರೇವಣಸಿದ್ದೇಶ ಜಿ.ಎಸ್.

‘ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲವು ರೈತರು ವಿವಿಧ ಬಗೆಯ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ತೊಡಗಿದ್ದಾರೆ. ಅವುಗಳನ್ನು ಹೊರಜಗತ್ತಿಗೆ ಪರಿಚಯಿಸಿ ಮಾರುಕಟ್ಟೆ ಒದಗಿಸುವ ಗುರಿ ಇಟ್ಟುಕೊಳ್ಳಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.