ADVERTISEMENT

ಸರ್ಕಾರಿ ಆಸ್ಪತ್ರೆಯಲ್ಲಿ ಅಪರೂಪದ ಶಸ್ತ್ರಚಿಕಿತ್ಸೆ

ಚಕಿತ್ಸೆಗೊಳಗಾದ ಮಹಿಳೆ ಗುಣಮುಖ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2019, 11:18 IST
Last Updated 12 ಡಿಸೆಂಬರ್ 2019, 11:18 IST
ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿ
ಶಸ್ತ್ರಚಿಕಿತ್ಸೆಗೊಳಗಾದ ಮಹಿಳೆ ಹಾಗೂ ಚಿಕಿತ್ಸೆ ನೀಡಿದ ವೈದ್ಯರು, ಸಿಬ್ಬಂದಿ   

ಶಿರಸಿ: ಇಲ್ಲಿನ ಪಂಡಿತ ಸಾರ್ವಜನಿಕ ಆಸ್ಪತ್ರೆಯ ವೈದ್ಯರ ತಂಡವು ಅಪರೂಪದ ಶಸ್ತ್ರಚಿಕಿತ್ಸೆ ನಡೆಸಿ, ಯಶಸ್ವಿಯಾಗಿದೆ.

ಗೋಟಗೋಡಿಯ 22 ವರ್ಷದ ಮಹಿಳೆಯೊಬ್ಬರು ಗರ್ಭಕೋಶದ ಶಸ್ತ್ರಚಿಕಿತ್ಸೆಗೆ ಒಳಗಾದ ಸಂದರ್ಭದಲ್ಲಿ, ಅವರ ಮೂತ್ರನಾಳ ತುಂಡಾಗಿತ್ತು. ಇದರಿಂದಾಗಿ ಆರು ತಿಂಗಳಿನಿಂದ ಅವರಿಗೆ ನಿಯಂತ್ರಣವಿಲ್ಲದೇ ಮೂತ್ರ ಸೋರಿಕೆಯಾಗುತ್ತಿತ್ತು. ಅನೇಕ ವೈದ್ಯರ ಬಳಿ ಚಿಕಿತ್ಸೆ ಪಡೆದರೂ ಪ್ರಯೋಜನವಾಗಿರಲಿಲ್ಲ. ಕೆಲ ದಿನಗಳ ಹಿಂದೆ ಅವರು ಪಂಡಿತ ಸಾರ್ವಜನಿಕ ಆಸ್ಪತ್ರೆಗೆ ದಾಖಲಾಗಿದ್ದರು.

ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಜಾನನ ಭಟ್ಟ ಅವರು ಮೂರುವರೆ ತಾಸು ಶಸ್ತ್ರಚಿಕಿತ್ಸೆ ನಡೆಸಿ, ಮೂತ್ರಚೀಲ ಮತ್ತು ಎಡಭಾಗದ ಮೂತ್ರ ನಾಳಗಳನ್ನು ಕಸಿ ಮಾಡಿದ್ದಾರೆ. ಡಾ. ಬಸವನಗೌಡ, ಡಾ.ಪದ್ಮಿನಿ, ಡಾ.ರೇವಣಕರ್, ನೇತ್ರಾವತಿ ಸಿರ್ಸಿಕರ್, ಸುಶ್ರೂಷಕಿ ಎಸ್ಟರ್ ರಾಣಿ, ನರಸಿಂಹ ಅವರಿಗೆ ಸಹಕರಿಸಿದರು.

ADVERTISEMENT

’ಎರಡು ಕ್ಯಾಥೆಟರ್, ಸ್ಟಂಟ್ ಮಾತ್ರ ಹೊರಗಿನಿಂದ ತರಿಸಲಾಗಿದೆ. ಉಳಿದ ಎಲ್ಲ ಅಗತ್ಯಗಳನ್ನು ಆಸ್ಪತ್ರೆಯಲ್ಲಿರುವ ಸೌಲಭ್ಯದಿಂದ ಭರಿಸಿ, ಉಚಿತ ಚಿಕಿತ್ಸೆ ನೀಡಲಾಗಿದೆ. ವೈದ್ಯರ ಮೇಲೆ ನಂಬಿಕೆ ಇಟ್ಟರೆ ಉತ್ತಮ ಚಿಕಿತ್ಸೆ ಸಾಧ್ಯ ಎಂಬುದಕ್ಕೆ ಈ ಶಸ್ತ್ರಚಿಕಿತ್ಸೆ ಸಾಕ್ಷಿಯಾಗಿದೆ. ತಾಲೂಕಾ ಆಸ್ಪತ್ರೆಯಲ್ಲಿ ಈ ಶಸ್ತ್ರಚಿಕಿತ್ಸೆ ನಡೆಸಲು ನಮಗೆ ಅಳುಕಿತ್ತು. ಪ್ರಾಮಾಣಿಕ ಪ್ರಯತ್ನ ಹಾಗೂ ಗುಣಮಟ್ಟದ ಚಿಕಿತ್ಸೆ ಮೂಲಕ ರೋಗಿ ಗುಣಮುಖರಾಗುತ್ತಿದ್ದಾರೆ’ ಎಂದು ಡಾ. ಗಜಾನನ ಭಟ್ಟ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.