ADVERTISEMENT

ಶರಾವತಿ ಜಲವಿದ್ಯುತ್ ಯೋಜನೆಗೆ ವಿರೋಧ

ಹೊನ್ನಾವರ: ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಒಕ್ಕೂಟದ ಸಭೆ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 16:24 IST
Last Updated 5 ಫೆಬ್ರುವರಿ 2025, 16:24 IST
ಹೊನ್ನಾವರದಲ್ಲಿ ಬುಧವಾರ ನಡೆದ ತಾಲ್ಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಒಕ್ಕೂಟದ ಸಭೆಯಲ್ಲಿ ತಾಲ್ಲೂಕಿನ ವಿವಿಧ ಸಮಸ್ಯೆಗಳ ಕುರಿತು ಸದಸ್ಯರು ಚರ್ಚೆ ನಡೆಸಿದರು
ಹೊನ್ನಾವರದಲ್ಲಿ ಬುಧವಾರ ನಡೆದ ತಾಲ್ಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಒಕ್ಕೂಟದ ಸಭೆಯಲ್ಲಿ ತಾಲ್ಲೂಕಿನ ವಿವಿಧ ಸಮಸ್ಯೆಗಳ ಕುರಿತು ಸದಸ್ಯರು ಚರ್ಚೆ ನಡೆಸಿದರು   

ಹೊನ್ನಾವರ: ಪರಿಸರ ಸೂಕ್ಷ್ಮ ಪ್ರದೇಶವಾಗಿರುವ ಪಶ್ಚಿಮ ಘಟ್ಟದ ವ್ಯಾಪ್ತಿಯಲ್ಲಿ ಜಾರಿಗೆ ತರಲು ಉದ್ದೇಶಿಸಿರುವ ಶರಾವತಿ ಭೂಗತ ಜಲವಿದ್ಯುತ್ ಯೋಜನೆ (ಶರಾವತಿ ಪಂಪ್ಡ್ ಸ್ಟೋರೇಜ್ ಪ್ರಾಜೆಕ್ಟ್)ಗೆ ತಾಲ್ಲೂಕು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

ತಾಲ್ಲೂಕಿನ ಗ್ರಾಮೀಣ ಭಾಗಗಳಲ್ಲಿನ ವಿವಿಧ ಸಮಸ್ಯೆಗಳ ಕುರಿತು ಬುಧವಾರ ಇಲ್ಲಿನ ತಾಲ್ಲೂಕು ಪಂಚಾಯಿತಿಯಲ್ಲಿ ನಡೆದ ಒಕ್ಕೂಟದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆಸಲಾಯಿತು.

ಶರಾವತಿ ಭೂಗತ ಜಲವಿದ್ಯುತ್ ಯೋಜನೆಯಿಂದ ಪಶ್ಚಿಮ ಘಟ್ಟದಲ್ಲಿ ಭೂಕುಸಿತ ಇನ್ನಷ್ಟು ಹೆಚ್ಚಲಿದೆ. ಅರಣ್ಯ ನಾಶ ಹಾಗೂ ಯಂತ್ರಗಳ ಶಬ್ಧಕ್ಕೆ ಹೆದರಿ ಕಾಡುಪ್ರಾಣಿಗಳು ನಾಡಿನತ್ತ ಮುಖ ಮಾಡಲಿವೆ. ನದಿಯಲ್ಲಿ ನೀರಿನ ಹರಿವು ಕಡಿಮೆಯಾಗಿ ಸಮುದ್ರದಿಂದ ನದಿ ಗುಂಟ ಉಪ್ಪು ನೀರು ವಿಸ್ತರಣೆಯಾಗುವ ಜಾಗ ಇನ್ನಷ್ಟು ಹೆಚ್ಚಲಿದೆ’ ಎಂದು ಸದಸ್ಯರು ಆತಂಕ ವ್ಯಕ್ತಪಡಿಸಿದರು.

ADVERTISEMENT

ಗ್ರಾಮದಲ್ಲಿ ಸಭೆ ನಡೆಸಿ ಯೋಜನೆಯನ್ನು ವಿರೋಧಿಸಿ ಗ್ರಾಮ ಪಂಚಾಯಿತಿಗಳ ವತಿಯಿಂದ ನಿರ್ಣಯ ಅಂಗೀಕರಿಸಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

1978ರ ಪೂರ್ವದ ಅರಣ್ಯ ಸಾಗುವಳಿ ಭೂಮಿಯನ್ನು ಸಕ್ರಮಗೊಳಿಸುವ ಜೊತೆಗೆ ಜೀವನೋಪಾಯಕ್ಕೆ 2005ರ ಪೂರ್ವದಿಂದ ಅರಣ್ಯ ಭೂಮಿಯನ್ನು ಆಶ್ರಯಿಸಿದವರಿಗೆ ಭೂಮಿಯ ಹಕ್ಕು ನೀಡಲು ಅಗತ್ಯ ಕ್ರಮ ಜರುಗಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಹಾಗೂ ತಾಲ್ಲೂಕಿನ ಸಮಸ್ಯೆಗಳ ಕುರಿತು ಗಮನ ಸೆಳೆಯಲು ಇದೇ ತಿಂಗಳ ಕೊನೆಯ ವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ, ಶಾಸಕರು ಹಾಗೂ ಪ್ರಮುಖರ ಉಪಸ್ಥಿತಿಯಲ್ಲಿ ಸಭೆ ನಡೆಸಬೇಕು' ಎಂದು ನಿರ್ಧರಿಸಲಾಯಿತು.

ಒಕ್ಕೂಟದ ಅಧ್ಯಕ್ಷ ಗಣೇಶ ನಾಯ್ಕ ಸಭೆಯ ಅಧ್ಯಕ್ಷತೆ ವಹಿಸಿದ್ದರು.

ಉತ್ತರ ಕನ್ನಡ ಜಿಲ್ಲಾ ಅರಣ್ಯಭೂಮಿ ಸಾಗುವಳಿದಾರರ ಹೋರಾಟ ಸಮಿತಿಯ ಅಧ್ಯಕ್ಷ ಚಂದ್ರಕಾಂತ ಕೊಚರೇಕರ, ವಿವಿಧ ಗ್ರಾಮ ಪಂಚಾಯಿತಿಗಳ ಅಧ್ಯಕ್ಷರಾದ ಸಾವಿತ್ರಿ ಭಟ್ ಕಡತೋಕಾ, ಶ್ಯಾಮಲಾ ನಾಯ್ಕ ಚಿಕ್ಕನಕೋಡ, ಪ್ರೇಮಾ ನಾಯ್ಕ ಚಂದಾವರ, ಲಕ್ಷ್ಮೀ ಗೌಡ ಮೇಲಿನ ಇಡಗುಂಜಿ, ಮೇರಿ ಡಾಯಸ್ ಹೆರಂಗಡಿ, ಶ್ರೀಧರ ನಾಯ್ಕ ಖರ್ವ, ಐ.ವಿ.ನಾಯ್ಕ ಮುಗ್ವ, ತಿಮ್ಮಪ್ಪ ನಾಯ್ಕ ಕೊಡಾಣಿ, ಸುಬ್ರಹ್ಮಣ್ಯ ಭಟ್ಟ ಕಡ್ಲೆ, ಮಹಾದೇವಿ ನಾಯ್ಕ ನವಿಲಗೋಣ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.