
ಹಳಿಯಾಳ: ‘ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹3,200 ಪಾವತಿಸುವುದಾಗಿ ಸಕ್ಕರೆ ಕಾರ್ಖಾನೆ ಅವರು ತಿಳಿಸಿದ್ದಾರೆ’ ಎಂದು ಜಿಲ್ಲಾಧಿಕಾರಿ ಕೆ ಲಕ್ಷ್ಮಿಪ್ರಿಯಾ ಹೇಳಿದರು.
ಇಲ್ಲಿನ ತಹಶೀಲ್ದಾರ್ ಕಾರ್ಯಾಲಯದ ಸಭಾ ಭವನದಲ್ಲಿ ಶುಕ್ರವಾರ ಸಕ್ಕರೆ ಕಾರ್ಖಾನೆ ಅಧಿಕಾರಿಗಳ ಜೊತೆ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ನಡೆದ ಸಭೆಯಲ್ಲಿ ಮಾತನಾಡಿದರು.
‘ಬೆಳೆಗಾರರ ಹಿಂದಿನ ಬಾಕಿ ಕಬ್ಬು ಕಟಾವು ಮತ್ತು ಸಾಗಾಣಿಕೆ ವೆಚ್ಚ ₹256 ರಂತೆ ಪ್ರತಿ ಕ್ವಿಂಟಲ್‌ಗೆ ಪಾವತಿಸಬೇಕಾಗಿತ್ತು ಆದರೆ ಕಾರ್ಖಾನೆಯವರು ಹೈಕೋರ್ಟ್‌ನಲ್ಲಿ ವ್ಯಾಜ್ಯ ದಾಖಲಿಸಿದ್ದಾರೆ. ನ್ಯಾಯಾಲಯದ ನಿರ್ದೇಶನದಂತೆ ₹10 ಕೋಟಿಯನ್ನು ಸಹ ಮುಂಗಡವಾಗಿ ನ್ಯಾಯಾಲಯದಲ್ಲಿ ಠೇವಣಿ ಇಟ್ಟಿದ್ದಾರೆ. ನ್ಯಾಯಾಲಯದ ತೀರ್ಪಿನ ಅನುಸಾರ ನಿರ್ಣಯ ತೆಗೆದುಕೊಳ್ಳಲಾಗುವುದು’ ಎಂದರು.
‘ಕಬ್ಬು ಬೆಳೆಗಾರರ ಬೇಡಿಕೆಯಂತೆ ತೂಕದ ಯಂತ್ರವನ್ನು ಕಾರ್ಖಾನೆಯ ಗೇಟಿನ ಹೊರಗಡೆ ಅಳವಡಿಸಲು ಕಾರ್ಖಾನೆಯವರು ಕ್ರಮ ಕೈಗೊಂಡಿದ್ದಾರೆ. ತೂಕದ ಯಂತ್ರ ಪರಿಶೀಲಿಸಲು ಸಹ ಸಮಿತಿ ರಚಿಸಲಾಗಿದೆ. ತೂಕದಲ್ಲಿ ವ್ಯತ್ಯಾಸ ಕಂಡು ಬಂದಲ್ಲಿ ಸಮಿತಿಯ ಸದಸ್ಯರೊಂದಿಗೆ ತೂಕ ಪರಿಶೀಲಿಸಲು ಅವಕಾಶ ನೀಡಲಾಗಿದೆ’ ಎಂದು ತಿಳಿಸಿದರು.
ಕಬ್ಬು ಕಡಿಯಲು ಲಗಾಣಿ ಗ್ಯಾಂಗ್‌ಗಳು ಹಣದ ಬೇಡಿಕೆ ಇಡುವ ಕುರಿತು ಸಭೆಯಲ್ಲಿ ದೂರು ಬಂದಿದ್ದು ಅಂತಹ ಗ್ಯಾಂಗ್ ವಿರುದ್ಧ ದೂರು ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು. ಸಕ್ಕರೆ ಕಾರ್ಖಾನೆಯಿಂದ ಹೊರ ಸೂಸುವ ಹೊಗೆಯಿಂದ ಪಟ್ಟಣದಲ್ಲಿ ಕಲುಷಿತ ವಾತಾವರಣ ಉಂಟಾಗಿ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದೆ ಎಂದು ಸಹ ಅನೇಕ ದೂರುಗಳು ಬಂದಿದ್ದು, ಈ ಬಗ್ಗೆ ವಾಯುಮಾಲಿನ್ಯ ಮಂಡಳಿ ಕಮಿಟಿಗೆ ಪರೀಶಿಲಿಸಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಹೇಳಿದರು.
‘ಕಾರ್ಖಾನೆ ವ್ಯಾಪ್ತಿಯ ಎಲ್ಲಾ ಗ್ರಾಮ ಪಂಚಾಯಿತಿ, ತಹಶೀಲ್ದಾರ್ ಕಾರ್ಯಾಲಯದಲ್ಲಿ ಪಟ್ಟಿ ಪ್ರಕಟಿಸಲು ನಿರ್ದೇಶನ ನೀಡಿದ್ದು ಈಗಾಗಲೇ ಕಾರ್ಖಾನೆ ಅವರು ಸಹ ಕಟಾವು ಮಾಡುವುದರ ಬಗ್ಗೆ ಲಿಸ್ಟ್ ಅನ್ನು ತಹಶೀಲ್ದಾರ್, ಪಂಚಾಯಿತಿ ಕಾರ್ಯಾಲಯಕ್ಕೆ ಸಲ್ಲಿಸಿದ್ದಾರೆ’ ಎಂದರು.
ಮಾಜಿ ಶಾಸಕ ಸುನಿಲ ಹೆಗಡೆ, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್‌ಎಲ್ ಘೋಟ್ನೇಕರ, ಕಬ್ಬು ಬೆಳೆಗಾರರ ಮುಖಂಡ ಕುಮಾರ ಬೋಬಾಟಿ, ನಾಗೇಂದ್ರ ಜೀವೋಜಿ, ಪ್ರಕಾಶ ಫಾಕರೆ, ಅಶೋಕ ಮೇಟಿ, ಪರಶುರಾಮ ಎತ್ತಿನಗುಡ್ಡ, ಮಹೇಶ ಬೆಳಗಾಂವಕರ, ಉಳವೆಪ್ಪಾ ಬಳಿಗೇರ ಮಾತನಾಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎನ್.ಎಂ, ಹೆಚ್ಚುವರಿ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಜಂಟಿ ನಿರ್ದೇಶಕ ಡಿವೈಎಸ್‌ಪಿ ಶಿವಾನಂದ ಮದಖಂಡಿ, ಕಲಘಟಗಿ ಧಾರವಾಡದ, ಹಳಿಯಾಳ, ಅಳ್ಳಾವರ ಭಾಗದ ಕಬ್ಬು ಬೆಳೆಗಾರರು, ಎಂ.ಬಾಲಾಜಿ, ರೆಡ್ಡಿ, ಅಂಗಡಿ ಪಾಲ್ಗೊಂಡಿದ್ದರು.
ಈ ಮೊದಲು ಪ್ರತಿ ಟನ್ ಕಬ್ಬಿಗೆ ₹3170 ದರ ನಿಗದಿಪಡಿಸಲಾಗಿತ್ತು. ಆದರೆ ಕಬ್ಬು ಬೆಳೆಗಾರರ ಒತ್ತಾಯದ ಮೇರೆಗೆ ₹ 3200 ಪಾವತಿಸಲು ಕಾರ್ಖಾನೆಯವರು ಒಪ್ಪಿದ್ದಾರೆಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.