
ಕಾರವಾರ: ‘ಮುಂದಿನ ತಿಂಗಳು ಕಾರವಾರದಲ್ಲಿ ಪಿಂಚಣಿದಾರರ ಅದಾಲತ್ ನಡೆಯಲಿದ್ದು, ಸಮಸ್ಯೆಗಳಿದ್ದಲ್ಲಿ ಮುಂಚಿತವಾಗಿ ಗಮನಕ್ಕೆ ತನ್ನಿ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ದಿಲೀಷ್ ಶಶಿ ಹೇಳಿದರು.
‘ಅಕೌಂಟ್ ಜನರಲ್ ಅಧಿಕಾರಿಗಳು ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಜಿಲ್ಲಾ ಹಂತದಲ್ಲಿ ನಡೆಸುತ್ತಿದ್ದಾರೆ. ಸಮಸ್ಯೆಗಳ ಬಗ್ಗೆ ಅದಾಲತ್‌ನಲ್ಲಿ ಮಾತ್ರವಲ್ಲದೇ ಕಚೇರಿಗೆ ಬಂದು ಮಾಹಿತಿ ನೀಡಿದರೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುವುದು’ ಎಂದು ಇಲ್ಲಿನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜಾಗೃತಿ ಅರಿವು ಸಪ್ತಾಹ ಮತ್ತು ಡಿಜಿಟಲ್ ಲೈಪ್ ಸರ್ಟಿಫಿಕೇಟ್ ಅಭಿಯಾನ 4.0 ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಅಕೌಂಟ್ ಜನರಲ್ ಕಚೇರಿಯ ಹಿರಿಯ ಉಪ ಅಕೌಂಟ್ ಜನರಲ್ ವಿಘ್ನೇಶರನ್ ಜೆ. ಮಾತನಾಡಿ, ‘ಪಿಂಚಣಿದಾರರು ತಮ್ಮ ಜೀವನ ಪ್ರಮಾಣ ಪತ್ರವನ್ನು ಸಲ್ಲಿಸುವ ಪ್ರಕ್ರಿಯೆಯನ್ನು ಸರಳಗೊಳಿಸಲು ಡಿಜಿಟಲ್ ಲೈಪ್ ಸರ್ಟಿಫಿಕೇಟ್ ಜಾರಿಗೆ ತರಲಾಗಿದೆ. ಭಾರತ ಸರ್ಕಾರ ಅಧೀಕೃತ ಆ್ಯಪ್ ಮೂಲಕ ಪಿಂಚಣಿದಾರರು ಜೀವನ ಪ್ರಮಾಣಪತ್ರವನ್ನು ಬ್ಯಾಂಕ್‌ಗಳಿಗೆ ಸಲ್ಲಿಸಿ ಪಿಂಚಣಿ ಸೌಲಭ್ಯ ನಿರಂತರವಾಗಿ ಪಡೆಯಬಹುದು’ ಎಂದರು.
‘ಡಿಜಿಟಲ್ ಲೈಪ್ ಸರ್ಟಿಫಿಕೇಟ್ ಅಭಿಯಾನ ನ.1 ರಿಂದ 30ರವರೆಗೆ ನಡೆಯಲಿದ್ದು, ಪಿಂಚಣಿದಾರರು ಮನೆಯಲ್ಲಿಯೇ ತಮ್ಮ ಮೊಬೈಲ್ ಮೂಲಕ ಡಿಜಿಟಲ್ ಲೈಪ್ ಸರ್ಟಿಫಿಕೇಟ್ ಪಡೆಯಬಹುದು’ ಎಂದು ಸಹಾಯಕ ಅಕೌಂಟ್ ಅಧಿಕಾರಿ ಸುನೀಲ ಕುಮಾರ್ ತಿಳಿಸಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೆಸ್ತಾ, ಅಕೌಂಟ್ ಜನರಲ್ ಕಚೇರಿಯ ಅಧಿಕಾರಿ ಸಚೀನ ಮಲ್ನಾಡ, ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ವಿ.ಎಂ.ಹೆಗಡೆ, ಇತರರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.