ADVERTISEMENT

ಗೋಕರ್ಣ: ಮಳೆಯಲ್ಲಿಯೂ ಕಟ್ಟಿಗೆ ಹಿಡಿಯುವ ಕಾಯಕ

ಘಟ್ಟದ ಮೇಲೆ ಮಳೆಯಾದರೆ, ಘಟ್ಟದ ಕೆಳಗೆ ತೇಲಿಬರುವ ಕಟ್ಟಿಗೆ

​ಪ್ರಜಾವಾಣಿ ವಾರ್ತೆ
Published 18 ಜುಲೈ 2024, 6:00 IST
Last Updated 18 ಜುಲೈ 2024, 6:00 IST
ಗೋಕರ್ಣ ಸಮೀಪದ ದುಬ್ಬನಸಸಿಯಲ್ಲಿ ಸಮುದ್ರದಲ್ಲಿ ತೇಲಿ ಬಂದ ಕಟ್ಟಿಗೆಯ ರಾಶಿಯಲ್ಲಿ ತಮಗೆ ಬೇಕಾದ ಕಟ್ಟಿಗೆಯನ್ನು ಜನರು ಆರಿಸಿಕೊಳ್ಳುತ್ತಿದ್ದಾರೆ
ಗೋಕರ್ಣ ಸಮೀಪದ ದುಬ್ಬನಸಸಿಯಲ್ಲಿ ಸಮುದ್ರದಲ್ಲಿ ತೇಲಿ ಬಂದ ಕಟ್ಟಿಗೆಯ ರಾಶಿಯಲ್ಲಿ ತಮಗೆ ಬೇಕಾದ ಕಟ್ಟಿಗೆಯನ್ನು ಜನರು ಆರಿಸಿಕೊಳ್ಳುತ್ತಿದ್ದಾರೆ   

ಗೋಕರ್ಣ: ಗಂಗಾವಳಿ, ಅಘಿನಾಶಿನಿ ನದಿಯ ತೀರದ ಘಟ್ಟದ ಮೇಲಿನ ಪ್ರದೇಶದಲ್ಲಿ ಹೆಚ್ಚಿನ ಮಳೆ ಬೀಳುತ್ತಿರುವ ಪರಿಣಾಮ ದೊಡ್ಡ ಮರದ ದಿಮ್ಮಿಗಳು ನದಿಯಲ್ಲಿ ತೇಲಿ ಬರುತ್ತಿದ್ದು ಅದನ್ನು ಹಿಡಿಯಲು ಜನರು ಮುಗಿ ಬೀಳುತ್ತಿದ್ದಾರೆ. ಇದು ಬಹಳ ಅಪಾಯದ ಕೆಲಸವಾಗಿದ್ದು ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಕಟ್ಟಿಗೆಯ ಸಂಗಡ ಇವರೂ ಕೊಚ್ಚಿ ಹೋಗುವ ಸಂಭವವೇ ಜಾಸ್ತಿ. ಆದರೂ ಮಳೆಯಲ್ಲಿಯೇ ನದಿಯಲ್ಲಿ ತೇಲಿಬರುವ ಕಟ್ಟಿಗೆ ಹಿಡಿಯುವ ಕಾಯಕದಲ್ಲಿ ಹಲವರು ನಿರತರಾಗಿದ್ದಾರೆ.

ಪ್ರತಿ ವರ್ಷ ದುಬ್ಬನಸಸಿ, ಗಂಗಾವಳಿ, ಗೋಕರ್ಣ ಗ್ರಾಮದ ಅನೇಕರು ಈ ಹುಚ್ಚು ಸಾಹಸಕ್ಕೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಈ ವರ್ಷವಂತೂ ಮಳೆಯ ಅವಾಂತರಕ್ಕೆ ಲೆಕ್ಕವಿಲ್ಲದಷ್ಟು ಮರದ ದಿಮ್ಮಿ, ಕಟ್ಟಿಗೆಗಳು ನೀರಿನಲ್ಲಿ ತೇಲಿ ಬಂದಿವೆ. ಜೀವದ ಹಂಗು ತೊರೆದು ಹರಿಯುತ್ತಿರುವ ನದಿಯಿಂದ ಕಟ್ಟಿಗೆಯನ್ನು ಮೇಲಕ್ಕೆ ತರಲಾಗುತ್ತಿದೆ.

ಗೋಕರ್ಣ ಸಮುದ್ರ ದಂಡೆಯಲ್ಲೂ ಹೇರಳವಾದ ಕಟ್ಟಿಗೆ ತೇಲಿ ಬಂದಿದೆ. ಕೆಲವರಂತೂ ಬೆಳ್ಳಿಗೆಯಿಂದ ಸಂಜೆಯವರೆಗೆ ಕುಟುಂಬ ಸಮೇತ ಕಟ್ಟಿಗೆ ಹಿಡಿಯುವ ಕಾಯಕದಲ್ಲಿಯೇ ನಿರತರಾಗಿದ್ದಾರೆ. ರಭಸದ ಅಲೆಗಳ ನಡುವೆಯೇ ನೀರಿಗೆ ಧುಮುಕಿ ಕಟ್ಟಿಗೆಯನ್ನು ಎಳೆದು ತರುವುದು ಸಾಹಸದ ಕ್ರಿಯೆಯಾಗಿದೆ. ಭಾರೀ ಗಾತ್ರದ ಕಟ್ಟಿಗೆ ಎಳೆದು ತರಲು ಸಾಧ್ಯವಾಗದಿದ್ದಾಗ, ಯಾರು ಮೊದಲು ಆ ಕಟ್ಟಿಗೆಯನ್ನು ಮುಟ್ಟುತ್ತಾರೆಯೋ ಅವರ ಪಾಲಿಗೆ ಆ ಕಟ್ಟಿಗೆ. ಈ ನಿಯಮ ಮಾತ್ರ ಪ್ರಾಮಾಣಿಕವಾಗಿ ಎಲ್ಲರೂ ಪಾಲಿಸುತ್ತಾರೆ.

ADVERTISEMENT

ಕಳೆದೆರಡು ವರ್ಷದ ಹಿಂದೆ ದುಬ್ಬನಸಸಿ ಗ್ರಾಮದ ಒಬ್ಬರು ನದಿಯಲ್ಲಿ ತೇಲಿ ಬರುತ್ತಿರುವ ಕಟ್ಟಿಗೆಯನ್ನು ಹಿಡಿಯಲು ಹೋಗಿ ಸುಳಿಯ ರಭಸಕ್ಕೆ ಸಿಕ್ಕಿ ಸಮುದ್ರಕ್ಕೆ ತೇಲಿ ಹೋಗಿದ್ದರು. ಸುಮಾರು ಒಂದು ಗಂಟೆಗಳ ಕಾಲ ನೀರಿನಲ್ಲಿಯೇ ಈಜಿ ತಮ್ಮ ಜೀವ ಉಳಿಸಿಕೊಂಡು ಸಾಹಸ ಮೆರೆದಿದ್ದರು. ಒಟ್ಟಿನಲ್ಲಿ ಅಪಾಯವಿದ್ದರೂ ಜೀವನೋಪಾಯಕ್ಕಾಗಿ ಹೆಂಗಸರು, ಮಕ್ಕಳು, ಯುವಕರು ಕಟ್ಟಿಗೆ ಹಿಡಿಯುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಉರುವಲಕ್ಕೆ ಸಾಕಾಗುವಷ್ಟು ಕಟ್ಟಿಗೆಯನ್ನು ಒಟ್ಟುಮಾಡುವುದರಲ್ಲಿ ಶ್ರಮಿಸುತ್ತಿದ್ದಾರೆ.

ಗೋಕರ್ಣ ಸಮೀಪದ ದುಬ್ಬನಸಸಿಯಲ್ಲಿ ಸಮುದ್ರದಲ್ಲಿ ತೇಲಿ ಬಂದ ಕಟ್ಟಿಗೆಯ ರಾಶಿ. ಮತ್ತು ಹಿಡಿಯುವ ಕಾಯಕದಲ್ಲಿ ಜನರು.

ವರ್ಷದವರೆಗೂ ಉರುವಲಿಗೆ ಆಗುವ ಕಟ್ಟಿಗೆ

ಸಣ್ಣಪುಟ್ಟ ಕಟ್ಟಿಗೆಗಳನ್ನೆಲ್ಲಾ ಉರುವಲಕ್ಕೆ ಬಳಸುತ್ತೇವೆ. ಬೆಲೆ ಬಾಳುವ ಒಳ್ಳೆಯ ಜಾತಿಯ ಮರಗಳಿದ್ದರೆ ಅದನ್ನು ಮಾರಾಟ ಮಾಡುತ್ತೇವೆ. ಇಲ್ಲಿ ಹಿಡಿಯುವ ಕಟ್ಟಿಗೆ ನಮಗೆ ವರ್ಷದವರೆಗೂ ಉರುವಲಿಗೆ ಸಾಕಾಗುತ್ತದೆ ಎಂದು ಅದೇ ಕಾಯಕದಲ್ಲಿ ನಿರತರಾಗಿರುವ ಉಮೇಶ ಅಂಬಿಗ ಪ್ರತಿಕ್ರಿಯಿಸಿದ್ದಾರೆ. ಕಳೆದ ವರ್ಷ ಒಂದು ಮರದ ದಿಮ್ಮಿ ₹ 50 ಸಾವಿರಕ್ಕೆ ಮಾರಾಟವಾಗಿದೆ ಎಂದೂ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.