ADVERTISEMENT

ಕಾರವಾರ: ಹಬ್ಬದ ಸಾಮಗ್ರಿ ಖರೀದಿಗೆ ಜನದಟ್ಟಣೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2021, 13:57 IST
Last Updated 4 ನವೆಂಬರ್ 2021, 13:57 IST
ಕಾರವಾರದ ಗಣಪತಿ ದೇಗುಲದ ಬಳಿ ಗುರುವಾರ ಕಂಡುಬಂದ ಜನದಟ್ಟಣೆ
ಕಾರವಾರದ ಗಣಪತಿ ದೇಗುಲದ ಬಳಿ ಗುರುವಾರ ಕಂಡುಬಂದ ಜನದಟ್ಟಣೆ   

ಕಾರವಾರ: ಬೆಳಕಿನ ಹಬ್ಬ ದೀಪಾವಳಿಗೆ ಅಗತ್ಯ ವಸ್ತುಗಳ ಖರೀದಿಗೆ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಗುರುವಾರ ದಿನವಿಡೀ ಜನದಟ್ಟಣೆ ಕಂಡುಬಂತು. ಇತ್ತ ಪಟಾಕಿಗಳ ಖರೀದಿಯೂ ಜೋರಾಗಿ ನಡೆಯಿತು.

ಗುರುವಾರ ಲಕ್ಷಿಪೂಜೆಗೆ ಬೇಕಾಗಿದ್ದ ಸಾಮಗ್ರಿ ಖರೀದಿಗೆ ಬುಧವಾರ ಸಂಜೆ ಅಷ್ಟಾಗಿ ಜನದಟ್ಟಣೆ ಇರಲಿಲ್ಲ. ಜೊತೆಗೆ, ಗುಡುಗು ಸಹಿತ ಮಳೆಯೂ ಬಂದ ಕಾರಣ ಹೆಚ್ಚಿನ ಸಂಖ್ಯೆಯಲ್ಲಿ ಜನ ಮಾರುಕಟ್ಟೆಯತ್ತ ಬಂದಿರಲಿಲ್ಲ. ಅದರ ಬದಲಾಗಿ ಗುರುವಾರ ಬೆಳಿಗ್ಗೆಯಿಂದಲೇ ಖರೀದಿ ಆರಂಭಿಸಿದರು.

ನಗರದ ಗಾಂಧಿ ಮಾರುಕಟ್ಟೆ, ಹೂವಿನ ಚೌಕ, ಸವಿತಾ ಹೋಟೆಲ್ ವೃತ್ತ, ಗಣಪತಿ ದೇವಸ್ಥಾನ ಸೇರಿದಂತೆ ಮಾರುಕಟ್ಟೆಯ ಪ್ರಮುಖ ಪ್ರದೇಶಗಳು ಗಿಜಿಗುಟ್ಟಿದವು. ರಸ್ತೆ ಬದಿಯಲ್ಲಿ ಹೂವು, ಹಣ್ಣು ಹಂಪಲು, ಹಣತೆ, ದೀಪಾವಳಿಯಲ್ಲಿ ಮನೆಗಳನ್ನು, ಜಾನುವಾರನ್ನು ಅಲಂಕರಿಸಲು ಬೇಕಾದ ಸಾಮಗ್ರಿಯನ್ನು ಖರೀದಿಸಿದರು. ವರ್ತಕರೂ ಉತ್ತಮ ವ್ಯಾಪಾರವಾಗಿ ನಿಟ್ಟುಸಿರು ಬಿಟ್ಟರು.

ADVERTISEMENT

ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳು ರಸ್ತೆಗಿಳಿದ ಕಾರಣ ಸುಗಮ ಸಂಚಾರ ವ್ಯವಸ್ಥೆ ಮಾಡಲು ಪೊಲೀಸರೂ ಶ್ರಮಿಸಬೇಕಾಯಿತು. ದ್ವಿಚಕ್ರ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಸಿಗದೇ ಸವಾರರು ಪರದಾಡಿದರು.

ಪಟಾಕಿಗೆ ಭಾರಿ ಬೇಡಿಕೆ: ನಗರದ ಮಿತ್ರ ಸಮಾಜ ಮೈದಾನದಲ್ಲಿ ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ. ಕಳೆದ ವರ್ಷ ಕೋವಿಡ್ ಕಾರಣದಿಂದ ಪಟಾಕಿಗಳಿಗೆ ಅಷ್ಟಾಗಿ ಬೇಡಿಕೆ ಇರಲಿಲ್ಲ. ಆದರೆ, ಈ ಬಾರಿ ವರ್ತಕರ ನಿರೀಕ್ಷೆಗೂ ಮೀರಿ ವ್ಯಾಪಾರವಾಗಿದೆ.

‘ಈ ಬಾರಿ ಉತ್ತಮ ವ್ಯಾಪಾರವಾಗುತ್ತಿದೆ. ಗ್ರಾಹಕರನ್ನು ನಿಭಾಯಿಸಲಾಗದಷ್ಟು ಬೇಡಿಕೆಯಿದೆ. ಇಷ್ಟೊಂದು ಗ್ರಾಹಕರು ಬರಬಹುದು ಎಂಬ ನಿರೀಕ್ಷೆಯಿಲ್ಲದ ಕಾರಣ, ದೊಡ್ಡ ಪ್ರಮಾಣದಲ್ಲಿ ಪಟಾಕಿ ಸಂಗ್ರಹವೂ ಇಲ್ಲ. ಪಟಾಕಿಗಳ ದರದಲ್ಲಿ ಭಾರಿ ವ್ಯತ್ಯಾಸವಾಗಿಲ್ಲ. ಜನರ ಸ್ಪಂದನೆ ನೋಡಿ ಕಳೆದ ವರ್ಷದ ನಷ್ಟವನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಿಕೊಳ್ಳುವ ವಿಶ್ವಾಸ ಮೂಡಿದೆ’ ಎನ್ನುತ್ತಾರೆ ಪಟಾಕಿ ಮಳಿಗೆ ಮಾಲೀಕ ಮನೋಜ ಭಟ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.