ADVERTISEMENT

ಪಿ.ಜಿ– ನೀಟ್‌ಗಾಗಿ ಹುದ್ದೆ ತೊರೆದ ವೈದ್ಯರು; ಚಿಕಿತ್ಸೆಗೆ ಹಳ್ಳಿಗರ ಪೇಟೆ ಪಯಣ

ಪಿ.ಜಿ– ನೀಟ್‌ಗಾಗಿ ಹುದ್ದೆ ತೊರೆದ ವೈದ್ಯರು: 17 ಕೇಂದ್ರಗಳಲ್ಲಿ ಸಮಸ್ಯೆ

ಗಣಪತಿ ಹೆಗಡೆ
Published 24 ಮೇ 2025, 5:56 IST
Last Updated 24 ಮೇ 2025, 5:56 IST
ವೈದ್ಯರಿಲ್ಲದ ಕಾರವಾರ ತಾಲ್ಲೂಕಿನ ಉಳಗಾದ ಪ್ರಾಥಮಿಕ ಆರೋಗ್ಯ ಕೇಂದ್ರ
ವೈದ್ಯರಿಲ್ಲದ ಕಾರವಾರ ತಾಲ್ಲೂಕಿನ ಉಳಗಾದ ಪ್ರಾಥಮಿಕ ಆರೋಗ್ಯ ಕೇಂದ್ರ   

ಕಾರವಾರ: ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಆರೋಗ್ಯ ಸಮಸ್ಯೆಗೆ ಚಿಕಿತ್ಸೆ ನೀಡುವ ವೈದ್ಯರಿಲ್ಲದ ಕೊರಗು ಎದುರಿಸುತ್ತಿವೆ.

ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಸಮಸ್ಯೆ ಉಲ್ಬಣಗೊಳ್ಳುತ್ತದೆ. ಆರೋಗ್ಯ ಸಮಸ್ಯೆಗಳು ಎದುರಾದರೆ ಜಿಲ್ಲೆಯ ಗ್ರಾಮೀಣ ಪ್ರದೇಶದ ಜನರು ನಗರದ ಆಸ್ಪತ್ರೆಯತ್ತ ಮುಖಮಾಡುವ ಸ್ಥಿತಿ ಉಂಟಾಗುತ್ತಿದೆ. 83 ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ 17 ಕೇಂದ್ರಗಳಲ್ಲಿ ವೈದ್ಯರ ಸೇವೆ ಸ್ಥಗಿತಗೊಂಡು ಹಲವು ದಿನ ಕಳೆದಿದ್ದು, ಇಂತಹ ಸಮಸ್ಯೆಗೆ ಕಾರಣವಾಗಿದೆ.

ಕಟ್ಟಡಗಳು, ಸೌಲಭ್ಯಗಳಿದ್ದರೂ ಚಿಕಿತ್ಸೆ ನೀಡುವ ವೈದ್ಯರಿಲ್ಲದ ಕಾರಣದಿಂದಾಗಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಭಣಗುಡುತ್ತಿವೆ. ಶುಶ್ರೂಷಕರು, ಡಿ ದರ್ಜೆಯ ಸಿಬ್ಬಂದಿ ಮಾತ್ರವೇ ಅಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ADVERTISEMENT

‘ನಾಲ್ಕೈದು ಗ್ರಾಮಗಳಿಗೆ ಅನುಕೂಲವಾಗುವಂತೆ ಗ್ರಾಮದ ಕೇಂದ್ರ ಸ್ಥಾನದಲ್ಲಿ ನಿರ್ಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳು ನೆಪಕ್ಕಷ್ಟೇ ಇವೆ. ವರ್ಷದ ಬಹುತೇಕ ದಿನ ವೈದ್ಯರ ಲಭ್ಯತೆ ಇಲ್ಲ. ಈಚೆಗಂತೂ ವೈದ್ಯರಿಲ್ಲದೆ ಹಲವು ದಿನ ಕಳೆದಿದೆ’ ಎಂದು ಹಟ್ಟಿಕೇರಿಯ ನೀಲಕಂಠ ನಾಯ್ಕ ದೂರಿದರು.

ಇದೇ ಸ್ಥಿತಿ ಕಾರವಾರ ತಾಲ್ಲೂಕಿನ ಉಳಗಾದಲ್ಲಿಯೂ ಇದೆ. ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೈದ್ಯರು ಹುದ್ದೆ ತೊರೆದು ಮೂರು ವಾರ ಕಳೆದಿದೆ. ಗ್ರಾಮದ ಜನರು ಚಿಕಿತ್ಸೆಗೆ 25 ಕಿ.ಮೀ. ದೂರದ ಕಾರವಾರಕ್ಕೆ ಬರಬೇಕಾಗಿದೆ.

‘ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ವೈದ್ಯರ ನೇಮಕಾತಿ ಸಾಹಸದ ಕೆಲಸವಾಗಿದೆ. ಕಡ್ಡಾಯ ಗ್ರಾಮೀಣ ಸೇವೆ ನಿಯಮ ಸರಿಯಾಗಿ ಪಾಲನೆ ಆಗುತ್ತಿಲ್ಲ. ಎಂಬಿಬಿಎಸ್ ಪದವಿ ಮುಗಿದ ಬಳಿಕ ಕೆಲ ತಿಂಗಳಮಟ್ಟಿಗೆ ವೈದ್ಯರು ನಗರಕ್ಕೆ ಸಮೀಪದ ಆರೋಗ್ಯ ಕೇಂದ್ರಕ್ಕೆ ಬರಲು ಮನಸ್ಸು ಮಾಡುತ್ತಾರೆ. ಐದಾರು ತಿಂಗಳಿಗೆ ಉನ್ನತ ವ್ಯಾಸಂಗದ ನೆಪ ಹೇಳಿ ಹುದ್ದೆ ತೊರೆದು ಸಾಗುತ್ತಾರೆ. ತಾಲ್ಲೂಕು ಕೇಂದ್ರಗಳಿಂದ ದೂರದಲ್ಲಿರುವ ಆರೋಗ್ಯ ಕೇಂದ್ರಗಳಿಗೆ ವೈದ್ಯರು ತೆರಳಲು ಒಪ್ಪುತ್ತಿಲ್ಲ’ ಎಂದು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರು ಸಮಸ್ಯೆ ವಿವರಿಸಿದರು.

ವೈದ್ಯಕೀಯ ಉನ್ನತ ಶಿಕ್ಷಣದ ನೀಟ್ ಪರೀಕ್ಷೆ ಸಲುವಾಗಿ ಜಿಲ್ಲೆಯ ಹಲವು ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರು ಹುದ್ದೆ ತೊರೆದು ತೆರಳಿದ್ದಾರೆ. ಹೊಸ ವೈದ್ಯರ ನೇಮಕಕ್ಕೆ ಪ್ರಕ್ರಿಯೆ ಸಾಗಿದೆ
ಡಾ.ನೀರಜ್ ಬಿ.ವಿ ಜಿಲ್ಲಾ ಆರೋಗ್ಯಾಧಿಕಾರಿ

ಯಾವೆಲ್ಲ ಕೇಂದ್ರಗಳಲ್ಲಿ ವೈದ್ಯರಿಲ್ಲ ಕಾರವಾರ ತಾಲ್ಲೂಕಿನ ಉಳಗಾ ಅಂಕೋಲಾದ ಹಟ್ಟಿಕೇರಿ ಕುಮಟಾದ ಗೋಕರ್ಣ ಕತಗಾಲ ಮೂರೂರು ಭಟ್ಕಳದ ಕೋಣಾರ ಸಿದ್ದಾಪುರದ ದೊಡ್ಮನೆ ಯಲ್ಲಾಪುರದ ಮಲವಳ್ಳಿ ಮಂಚಿಕೇರಿ ಶಿರಸಿಯ ಮೆಣಸಿ ಸುಗಾವಿ ಮುಂಡಗೋಡದ ಕಾತೂರ ಜೊಯಿಡಾದ ಕುಂಬಾರವಾಡ ಗುಂದ ರಾಮನಗರದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಹುದ್ದೆ ಖಾಲಿ ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.