ಭಟ್ಕಳ: ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿಗಾಗಿ ಅಗೆದ ರಸ್ತೆಗಳು ಮಳೆಗಾಲದಲ್ಲಿ ಬೃಹದಾಕಾರದ ಹೊಂಡಗಳಾಗಿ ಮಾರ್ಪಟ್ಟಿದ್ದು, ಸ್ಥಳೀಯ ನಿವಾಸಿಗಳಿಗೆ ಕಿರಿಕಿರಿ ಉಂಟು ಮಾಡುತ್ತಿದೆ.
ಪಟ್ಟಣದ ಡೊಂಗರಪಳ್ಳಿ ರಸ್ತೆ, ಎಪಿಜೆ ಅಬ್ದುಲ್ ಕಲಂ ರಸ್ತೆ, ಬಂದರ ರಸ್ತೆ, ಆಜಾದ ನಗರ ಸೇರಿದಂತೆ ಪಟ್ಟಣದ ಹಲವು ಕಡೆ ಕರ್ನಾಟಕ ಒಳಚರಂಡಿ ಹಾಗೂ ನೀರು ಸರಬರಾಜು ಮಂಡಳಿಯಿಂದ ಒಳಚರಂಡಿ ಚೇಂಬರ್ ಕಾಮಗಾರಿ ನಡೆಸಲಾಗಿದೆ. ಬೇಸಿಗೆಯಲ್ಲಿ ಕಾಂಕ್ರೀಟ್ ಹಾಗೂ ಡಾಂಬರ್ ರಸ್ತೆಯನ್ನು ಜೆಸಿಬಿಯಿಂದ ಅಗೆದು ಕಾಮಗಾರಿ ನಡೆಸಿದ ಗುತ್ತಿಗೆದಾರ ಬಳಿಕ ರಸ್ತೆ ಅಗೆದ ಜಾಗದಲ್ಲಿ ಮಳೆಗಾಲದಲ್ಲಿ ಹೊಂಡ ಬೀಳದಂತೆ ಮರು ಕಾಂಕ್ರೀಟ್ ಇಲ್ಲವೇ ರಸ್ತೆಗಳನ್ನು ಮರು ನಿರ್ಮಾಣ ಮಾಡದಿದ್ದರಿಂದ ಮಳೆಗಾದಲ್ಲಿ ರಸ್ತೆಗಳು ಹೊಂಡಗಳಾಗಿ ಮಾರ್ಪಟ್ಟಿವೆ.
ಇದರಿಂದಾಗಿ ಈ ರಸ್ತೆಯಲ್ಲಿ ವಾಹನಗಳು ಮಾತ್ರವಲ್ಲದೇ ಸಾರ್ವಜನಿಕರು ಸಂಚರಿಸದಂತಹ ಸ್ಥಿತಿ ಎದುರಾಗಿದೆ.
ಒಳಚರಂಡಿ ಕಾಮಗಾರಿ ನಡೆಸಿದ ಎಪಿಜೆ ಅಬ್ದುಲ್ ಕಲಾಂ ರಸ್ತೆಯೂ ಮಳೆ ನೀರಿಗೆ ಸಂಪೂರ್ಣ ಕೊಚ್ಚಿಕೊಂಡು ಹೋಗಿದೆ. ಈ ರಸ್ತೆಯಲ್ಲಿ ಬೈಕ್ ಸಹ ಓಡಾಡದ ಸ್ಥಿತಿ ಇದೆ. ನಿತ್ಯ ಶಾಲಾ ವಾಹನಗಳು ರಸ್ತೆ ಮಧ್ಯದಲ್ಲಿ ಹುದುಗಿ ಬೀಳುತ್ತಿದೆ. ಹೊಂಡದಲ್ಲಿ ಬಿದ್ದಿದ ವಾಹನ ಎತ್ತಲು ಸಾಧ್ಯವಾಗದೇ ವಿದ್ಯಾರ್ಥಿಗಳು ಶಾಲೆಗೆ ಗೈರಾಗುತ್ತಿದ್ದಾರೆ.
ಈ ಬಗ್ಗೆ ಹಲವು ಬಾರಿ ಸ್ಥಳೀಯಾಡಳಿತ, ಗುತ್ತಿಗೆದಾರ ಕಂಪನಿಗೆ ಮನವಿ ನೀಡಿದರೂ ರಸ್ತೆ ದುರಸ್ತಿಗೆ ಮುಂದಾಗುತ್ತಿಲ್ಲ ಎಂಬುದು ಸ್ಥಳೀಯ ಅಬ್ದುಲ್ ಜಬ್ಬಾರ ಅವರ ದೂರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.