ADVERTISEMENT

ಪೌರಕಾರ್ಮಿಕರಿಗೆ ಪಟ್ಟಾ ನೀಡದಿದ್ದರೆ ಪ್ರತಿಭಟನೆ

ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸುವ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2019, 13:58 IST
Last Updated 24 ಜುಲೈ 2019, 13:58 IST
ಶಿರಸಿ ರಾಜೀವನಗರದ ಪೌರಕಾರ್ಮಿಕರ ಕಾಲೊನಿ ಹಾಗೂ ಅಲ್ಲಿನ ನಿವಾಸಿಗಳು
ಶಿರಸಿ ರಾಜೀವನಗರದ ಪೌರಕಾರ್ಮಿಕರ ಕಾಲೊನಿ ಹಾಗೂ ಅಲ್ಲಿನ ನಿವಾಸಿಗಳು   

ಶಿರಸಿ: ನಗರ ಸ್ವಚ್ಛತೆಗೆ ನಿತ್ಯ ಶ್ರಮಿಸುವ ಪೌರಕಾರ್ಮಿಕರು ಸ್ವಂತ ನಿವೇಶನದ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅರ್ಹತೆಯಿದ್ದರೂ ಪಟ್ಟಾ ನೀಡಲು ಮೀನಮೇಷ ಎಣಿಸುತ್ತಿರುವ ಅಧಿಕಾರಿಗಳಿಗೆ ಗುಡುವು ನೀಡಿರುವ ಅವರು, ಆ.1ರಿಂದ ನಗರದ ಕಸ ಎತ್ತುವುದನ್ನು ಸ್ಥಗಿತಗೊಳಿಸಿ, ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆ ಭಾಗದ ನಗರಸಭೆ ಸದಸ್ಯ ಪ್ರದೀಪ ಶೆಟ್ಟಿ ಅವರು, ‘ರಾಜೀವನಗರದ ಸಿಟಿಎಸ್ 26–37ರಲ್ಲಿ ಪೌರಕಾರ್ಮಿಕರು ವಾಸವಾಗಿರುವ ಜಾಗವು ಕಂದಾಯ ಇಲಾಖೆಗೆ ಸೇರಿದೆ. ಕಳೆದ ಆರೇಳು ದಶಕಗಳಿಂದ ಅವರು ಇಲ್ಲಿಯೇ ವಾಸವಾಗಿದ್ದಾರೆ. ಕಾನೂನು ಜ್ಞಾನದ ಕೊರತೆಯಿಂದ ಅವರಿಗೆ ಪಟ್ಟಾ ಪಡೆಯುವ ಕಲ್ಪನೆ ಇರಲಿಲ್ಲ. ಕಾಗೋಡು ತಿಮ್ಮಪ್ಪ ಕಂದಾಯ ಸಚಿವರಾಗಿದ್ದಾಗ ಜಾರಿಗೆ ತಂದ 94ಸಿಸಿ ಕಾಯ್ದೆ ಅಡಿಯಲ್ಲಿ ಇಲ್ಲಿನ 35 ನಿವಾಸಿಗಳು ಪಟ್ಟಾಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಆದರೆ, ಆಗಿನ ತಹಶೀಲ್ದಾರರು ಇವರೆಲ್ಲರ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ’ ಎಂದರು.

‘ರಸ್ತೆಯಿಲ್ಲವೆಂಬ ನೆಪವೊಡ್ಡಿ ಇವರ ಅರ್ಜಿಗಳನ್ನು ತಿರಸ್ಕರಿಸಲಾಗಿತ್ತು. ಈ ಸಂಬಂಧ ಉಪವಿಭಾಗಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದ್ದೆವು. ಇನ್ನೇನು ಮಂಜೂರು ಹಂತದಲ್ಲಿದ್ದಾಗ ಆಗಿನ ಉಪವಿಭಾಗಾಧಿಕಾರಿಗೆ ವರ್ಗಾವಣೆಯಾಯಿತು. ಈಗ ಮತ್ತೆ ಉಪವಿಭಾಗಾಧಿಕಾರಿಯನ್ನು ಭೇಟಿ ಮಾಡಿದರೆ, ಅವರು ಮತ್ತಷ್ಟು ಮಾಹಿತಿ ಕೇಳಿ ವಿಚಾರಣೆಯನ್ನು ಮುಂದೂಡುತ್ತಿದ್ದಾರೆ. ಪೌರಕಾರ್ಮಿಕರಿಗೆ ಪಟ್ಟಾ ದೊರೆತರೆ ಅವರಿಗೆ ಮನೆ ಕಟ್ಟಿಕೊಳ್ಳಲು ಸರ್ಕಾರದಿಂದ ₹ 7 ಲಕ್ಷ ನೆರವು ದೊರೆಯುತ್ತದೆ’ ಎಂದು ಕೊರಾರ ಸಮುದಾಯದ ಪ್ರಮುಖ ಸುಭಾಷ್ ಮಂಡೂರ ಹೇಳಿದರು.

ADVERTISEMENT

‘ಜುಲೈ 31ರ ಒಳಗೆ ಪೌರಕಾರ್ಮಿಕರಿಗೆ ಪಟ್ಟಾ ನೀಡುವ ಪ್ರಕ್ರಿಯೆಗೆ ಚಾಲನೆ ನೀಡಿದ್ದರೆ, ಆ.1ರಿಂದ ಅವರು ಸ್ವಚ್ಛತಾ ಕಾರ್ಯ ಸ್ಥಗಿತಗೊಳಿಸಲಿದ್ದಾರೆ’ ಎಂದು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.